ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ವಾರ್ನಿಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವು ಬಹಳ ಕಷ್ಟ ಪಟ್ಟು ಬಿಜೆಪಿ ಸರ್ಕಾರವನ್ನು ಉರುಳಿಸಿ ಸರಳ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಈ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಿ ಜನರ ಮನಸ್ಸನ್ನು ಗೆಲ್ಲಬೇಕು. ಅದು ಬಿಟ್ಟು ಕುಟುಂಬ ಸದಸ್ಯರು ಇಲಾಖೆಗಳಲ್ಲಿ ಮೂಗುತೂರಿಸುವುದು ಸರಿಯಿರುವುದಿಲ್ಲ ಎಂದಿದ್ದಾರೆ.
ಇದಿಷ್ಟನ್ನೂ ಸುರ್ಜೆವಾಲ ಹೇಳಿರುವುದು ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರ ಕುರಿತಾಗಿ. ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಹಂತಹಂತವಾಗಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ರಾಜ್ಯ ನಾಯಕಿಯಾಗಿ ಗುರ್ತಿಸಿಕೊಂಡವರು ಲಕ್ಷ್ಮೀ ಹೆಬ್ಬಾಳ್ಕರ್. ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಸಹೋದರರ ಪ್ರಾಬಲ್ಯದ ನಡುವೆಯೇ ತಮ್ಮ ಛಾಪನ್ನು ಮೂಡಿಸಿದ್ದಾರೆ. ಈ ಕಾರ್ಯದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆನ್ನೆಲುಬಾಗಿ ನಿಂತಿರುವವರು ಸಹೋದರ ಚನ್ನರಾಜ್ ಹಟ್ಟಿಹೊಳಿ.
ವಿಧಾನ ಪರಿಷತ್ ಸದಸ್ಯರೂ ಆಗಿರುವ ಚನ್ನರಾಜ್, ಸಹೋದರಿ ಸಚಿವೆಯಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿ ಮೂಗುತೂರಿಸುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಅನೇಕ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಗಮನಕ್ಕೆ ತಂದಿದ್ದಾರೆ. ಇಲಾಖೆ ಕಾರ್ಯಗಳು ಹೇಗೆ ನಡೆಯಬೇಕು ಎನ್ನುವುದಕ್ಕೆ ಒಂದಷ್ಟು ಸೂತ್ರಗಳಿರುತ್ತವೆ. ಅದನ್ನು ಬಿಟ್ಟು ನಡೆಯಬೇಕೆಂದರೆ ಉನ್ನತ ಮಟ್ಟದಲ್ಲಿ ನಿರ್ಧಾರಗಳು ಆಗಬೇಕಾಗುತ್ತವೆ. ಏಕಾಏಕಿ ಒಂದು ನಿರ್ಧಾರವನ್ನು ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ. ಹೀಗೆ ಮಾಡುವುದರಿಂದ ಮುಂದೆ ಸರ್ಕಾರಕ್ಕೂ ಕೆಟ್ಟಹೆಸರು ಬರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಪ್ರವಾಸಕ್ಕೆ ಆಗಮಿಸಿರುವ ರಣದೀಪ್ ಸಿಂಗ್ ಸುರ್ಜೆವಾಲ, ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗೆ ಈ ವಿಷಯ ಪ್ರಸ್ತಾಪಿಸಿದ್ದಾರೆ. ಈಗಷ್ಟೆ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಜನರಿಗೆ ಅನುಕೂಲವಾಗುವ ಉತ್ತಮ ಕೆಲಸಗಳನ್ನು ಮಾಡಬೇಕು. ಆಗಮಾತ್ರ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿರಿಸಿಕೊಂಡರೂ ಉತ್ತಮ ಆಡಳಿತ ನೀಡಲೇಬೇಕಾಗುತ್ತದೆ. ಹೀಗೆ ಕುಟುಂಬದವರು ಅನಗತ್ಯ ಹಸ್ತಕ್ಷೇಪ ಮಾಡಿದರೆ ಪಕ್ಷದ ನಾಯಕರಿಗೆ ಕೆಟ್ಟ ಹೆಸರು ಬರುತ್ತದೆ. ಮುಂದೆ ಹೀಗೆ ಆಗದಂತೆ ಎಚ್ಚರಿಕೆ ವಹಿಸಿ ಎಂದು ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ಗೃಹಲಕ್ಷ್ಮೀ ವಿಚಾರವೂ ಪ್ರಸ್ತಾಪ:
ಗೃಹಲಕ್ಷ್ಮೀ ಯೋಜನೆ ಕುರಿತೂ ಸುರ್ಜೆವಾಲ ಮಾತನಾಡಿದ್ದಾರೆ ಎನ್ನಲಾಗಿದೆ. ಯೋಜನೆಯಂತೆ, ಮನೆಯ ಒಡತಿಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಮಾಸಿಕ 2 ಸಾವಿರ ರೂ. ನೀಡುವುದಿಲ್ಲ ಎನ್ನಲಾಗಿತ್ತು. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಿನ ಭರದಲ್ಲಿ, ಮಕ್ಕಳು ಆದಾಯ ತೆರಿಗೆ ಪಾವತಿಸುತ್ತಿದ್ದರೂ ನೀಡುವುದಿಲ್ಲ ಎಂದಿದ್ದರು. ಇದು ಸರ್ಕಾರಕ್ಕೆ ಭಾರೀ ಮುಜುಗರ ಉಂಟುಮಾಡಿತ್ತು. ಕೂಡಲೆ ರಾಜ್ಯ ನಾಯಕರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮಾತನಾಡಿ, ತಪ್ಪು ಸರಿಪಡಿಸುವಂತೆ ಹೇಳಿದ್ದರು. ಮಕ್ಕಳು ಆದಾಯ ತೆರಿಗೆ ಪಾವತಿಸಿದರೂ ಗೃಹಲಕ್ಷ್ಮೀ ಯೋಜನೆಗೆ ಅರ್ಹರಾಗುತ್ತಾರೆ ಎಂದು ನಂತರ ಹೇಳಿದ್ದರು. ಈ ವಿಚಾರವನ್ನೂ ಸುರ್ಜೆವಾಲ ಪ್ರಸ್ತಾಪಿಸಿದ್ದಾರೆ. ಸರ್ಕಾರದ ಯೋಜನೆಗಳ ಕುರಿತು ಮಾತನಾಡುವಾಗ ಪೂರ್ಣ ಮಾಹಿತಿ ತಿಳಿಯಬೇಕು. ತಾವು ಮಾತನಾಡಿದ್ದು ಜನರಿಗೆ ಬೇರೆ ರೀತಿಯ ಅರ್ಥ ಕೊಡದಂತೆ ಸ್ಪಷ್ಟ ಸಂವಹನ ನಡೆಸಬೇಕು ಎಂದು ತಿಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಉಡುಪಿಯಲ್ಲಿ ಸರ್ಕಾರಿ ಬಸ್ಗಳನ್ನು ಹೆಚ್ಚಿಸುವ ಭರವಸೆ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್; ಶೀಘ್ರವೇ ಸಿಎಂ ಜತೆ ಚರ್ಚೆ