Site icon Vistara News

Karnataka Election: 16 ಸಾವಿರ ಕೋಟಿ ರೂ. ಮೌಲ್ಯದ ಅಕ್ರಮ ಟೆಂಡರ್‌: ರಾಜ್ಯ ಸರ್ಕಾರದ ವಿರುದ್ಧ ಸುರ್ಜೇವಾಲಾ ಆರೋಪ

Karnataka Election 2023 Rs 62,000 crore spending per year for Congress guarantee schemes

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ 16 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಕ್ರಮ ಟೆಂಡರ್‌ಗಳನ್ನು ನೀಡಿದ್ದು, ಚುನಾವಣಾ ಆಯೋಗ ಅದಕ್ಕೆ ತಡೆ ನೀಡಿದೆ. ಇದರಿಂದ ಬೊಮ್ಮಾಯಿ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಹೀಗಾಗಿ ಕಿಂಚಿತ್ತಾದರೂ ನೈತಿಕತೆ ಇದ್ದರೆ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಒತ್ತಾಯಿಸಿದ್ದಾರೆ.

‌ನಗರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಟೆಂಡರ್‌ಗಳಿಗೆ ಚುನಾವಣೆ ಮುಗಿಯುವವರೆಗೂ ತಡೆ ನೀಡಬೇಕು. ಈಗಾಗಲೇ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆ ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಹೊಸ ಟೆಂಡರ್ ಕರೆಯಬಾರದು, ಕಾರ್ಯಾದೇಶ ನೀಡಬಾರದು ಎಂದು ಸೋಮವಾರ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | Karnataka Election 2023 : ಮಾಜಿ ಸಿಎಂ ಕುಮಾರಸ್ವಾಮಿಗೆ ಭವಾನಿ ರೇವಣ್ಣ ಎಷ್ಟು ಸಾಲ ನೀಡಿದ್ದಾರೆ ಗೊತ್ತೇ?

ಆಯೋಗದ ಆದೇಶದಿಂದ ಬೊಮ್ಮಾಯಿ ಅವರ ಬಂಡವಾಳ ಬಯಲಾಗಿದ್ದು, ಈಗಲಾದರೂ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು. ನಾವು ಕೆಪಿಸಿಸಿ ಅಧ್ಯಕ್ಷರ ನಿವಾಸದಲ್ಲಿ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲೂ ಇದೇ ಅಂಶಗಳಿಗೆ ಬೇಡಿಕೆ ಇಟ್ಟು, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆವು. ಈ ಅಕ್ರಮ ಟೆಂಡರ್ ಕರೆದಿರುವ ಎಲ್ಲಾ ಅಧಿಕಾರಿಗಳು, ಸಚಿವರ ವಿರುದ್ಧ ನಮ್ಮ ಸರ್ಕಾರ ತನಿಖೆಗೆ ಆದೇಶ ನೀಡಲಿದೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕಾಗಿದೆ ಎಂದು ಹೇಳಿದ್ದಾರೆ.

40% ಕಮಿಷನ್ ಪಡೆಯುವ ಉದ್ದೇಶದಿಂದ ಟೆಂಡರ್ ಅಕ್ರಮ

ಚುನಾವಣೆ ದಿನಾಂಕ ಘೋಷಿಸುವ ಮುನ್ನ ಅನೇಕ ಟೆಂಡರ್‌ಗಳನ್ನು ಸಮರ್ಪಕ ಪ್ರಕ್ರಿಯೆ ಮೂಲಕ ಹೊರಡಿಸಿಲ್ಲ. ಟೆಂಡರ್ ಅಂದಾಜು ಮೊತ್ತ, ಕಾಲಾವಧಿ ನಿಗದಿಯಾಗದೇ ಟೆಂಡರ್ ನೀಡಲಾಗಿದೆ. ಇಲಾಖಾವಾರು ಕಾಮಗಾರಿ ವೆಚ್ಚದ ಪರಿಶೀಲನೆ ಇಲ್ಲದೆ ಟೆಂಡರ್ ನೀಡಲಾಗಿದೆ. ಬೊಮ್ಮಾಯಿ ಸರ್ಕಾರ ಕೇವಲ 40% ಕಮಿಷನ್ ಪಡೆಯುವ ಏಕಮಾತ್ರ ಉದ್ದೇಶದಿಂದ ಈ ರೀತಿ ಅಕ್ರಮವಾಗಿ ಟೆಂಡರ್ ನೀಡಿದೆ ಎಂದು ಆರೋಪಿಸಿರುವ ಸುರ್ಜೇವಾಲಾ, ಈ ವಿಚಾರವಾಗಿ ರಾಜ್ಯ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈ ದೂರಿನಲ್ಲಿ ಕೆಲವು ಟೆಂಡರ್‌ಗಳ ಉಲ್ಲೇಖ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Election: ಎಂಟಿಬಿ ನಾಗರಾಜು ನಾಮಪತ್ರ ಸಲ್ಲಿಕೆ; ಬರೋಬ್ಬರಿ 1,510 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ

ಶಿರಾಡಿ ಘಾಟ್ ಟೆಂಡರ್‌ಗೆ 1976 ಕೋಟಿ ರೂ., ದೊಡ್ಡಬಳ್ಳಾಪುರದ ಕಾಮಗಾರಿಕೆ 1682 ಕೋಟಿ ರೂ., ಆಂಧ್ರ ಪ್ರದೇಶ-ಕರ್ನಾಟಕ ಗಡಿ ಭಾಗದ ರಾಯಚೂರಿನಲ್ಲಿ 1633 ಕೋಟಿ ರೂ., ಹಾಸನ ನಾಲ್ಕು ಪಥ ರಸ್ತೆಗೆ 1318 ಕೋಟಿ ರೂ., ವಿವಿಧ ಬೈಪಾಸ್‌ಗಳ ಅಭಿವೃದ್ಧಿಗೆ 1167 ಕೋಟಿ ರೂ. ಹೀಗೆ ದೊಡ್ಡ ಪಟ್ಟಿಗಳಿವೆ. ಒಟ್ಟು 16,516 ಕೋಟಿ ರೂ. ಮೊತ್ತದ ಟೆಂಡರ್‌ಗಳನ್ನು ತರಾತುರಿಯಲ್ಲಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

Exit mobile version