ನವ ದೆಹಲಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ (Karnataka Election) ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಐಟಿ, ಇಡಿ ದಾಳಿ ಮಾಡಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಜೆಪಿ ತೊರೆದು ಬರುವವರ ಮೇಲೆ ದಾಳಿ ಮಾಡಲು 100ಕ್ಕೂ ಹೆಚ್ಚು ಅಧಿಕಾರಿಗಳ ತಂಡವನ್ನು ಕೇಂದ್ರದ ಬಿಜೆಪಿ ಸರ್ಕಾರ ಸಜ್ಜುಗೊಳಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರದಿಂದಲೇ ಕಾಂಗ್ರೆಸ್‌ನವರ ಮೇಲೆ ದಾಳಿಯಾಗಬಹುದು. ಆದರೆ, ಬಿಜೆಪಿ ನಾಯಕರ ಮನೆ ಮೇಲೆ ಯಾವುದೇ ದಾಳಿಯಾಗಲ್ಲ. ಹೀಗಾಗಿ ಐಟಿ, ಇಡಿ ದಾಳಿಗಳಿಗೆ ಕಾಂಗ್ರೆಸ್ ಹೆದರುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.
ಬಿಜೆಪಿಗೆ ಸೋಲುವ ಭೀತಿ ಕಾಡುತ್ತಿದೆ ಎಂದ ಸಿದ್ದರಾಮಯ್ಯ
ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಐಟಿ, ಇಡಿ ದಾಳಿಯಿಂದ ಕಾಂಗ್ರೆಸ್ ನಾಯಕರನ್ನು ಹೆದರಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಜನ ಬೆಂಬಲಿಸಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಇದರಿಂದ ಬಿಜೆಪಿಗೆ ಸೋಲುವ ಭೀತಿ ಕಾಡುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಹುಮತ ಬರುವ ಮಾಹಿತಿ ಇದೆ. ಹೀಗಾಗಿ ಹಲವು ಬಿಜೆಪಿ ನಾಯಕರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲೋದಿಲ್ಲವೆಂಬ ಭಯ ಅವರಿಗಿದೆ. ಸೋಲುವ ಭಯದಿಂದ ಬಿಜೆಪಿ ಕೊನೇ ಅಸ್ತ್ರ ಪ್ರಯೋಗಿಸುತ್ತಿದೆ. ಬಿಜೆಪಿ ಹಿಂದು ಅಸ್ತ್ರ ಪ್ರಯೋಗ ಮಾಡಿತ್ತು. ಎಲ್ಲಾ ಅಸ್ತ್ರ ಪ್ರಯೋಗ ಮಾಡಿದ ಬಳಿಕ ಇದೀಗ ಐಟಿ, ಇಡಿ ದಾಳಿ ಮೂಲಕ ಕೊನೇ ಅಸ್ತ್ರ ಪ್ರಯೋಗಿಸುತ್ತಿದೆ ಎಂದು ಹರಿಹಾಯ್ದರು.
ಇದನ್ನೂ ಓದಿ | BJP Karnataka: ಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ ಕಾಂಗ್ರೆಸ್ ಸೃಷ್ಟಿ ಎಂದ ಬಿಜೆಪಿ: ಪೊಲೀಸ್ ದೂರು ದಾಖಲು
100 ಐಟಿ, ಇಡಿ ಅಧಿಕಾರಿಗಳಿಂದ ದಾಳಿಗೆ ಪ್ಲ್ಯಾನ್ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು, ಪಕ್ಷದ ಹಿತೈಷಿಗಳು
ಕಾರ್ಯಕರ್ತರ ಮೇಲೆ ದಾಳಿಗೆ ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಕಾಂಗ್ರೆಸ್‌ನವರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಬೆದರಿಕೆ ಕರೆಗಳೂ ಬರುತ್ತಿವೆ. ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯ ಈ ನಡೆಯನ್ನು ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿದರು.
ಬುಧವಾರ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ?
ಬಿಜೆಪಿ ಐಟಿ, ಇಡಿ, ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯ ಈ ನಡೆ ವಿರುದ್ಧ ಹೋರಾಡಲು ಸಿದ್ಧರಿದ್ದೇವೆ. ಐಟಿ, ಇಡಿ ದಾಳಿಗಳಿಗೆ ನಾವು ಹೆದರುವ ಪ್ರಶ್ನೆಯೇ ಇಲ್ಲ ಎಂದ ಅವರು, ಕರ್ನಾಟಕದಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಇನ್ನು 100 ಅಭ್ಯರ್ಥಿಗಳ ಪಟ್ಟಿ ಬಗ್ಗೆ ತೀರ್ಮಾನ ಮಾಡಬೇಕಾಗಿದೆ. ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ. ಬುಧವಾರವಾದರೂ (ಏ.5) ಪಟ್ಟಿ ಬಿಡುಗಡೆ ಮಾಡಬಹುದು ಎಂದು ಸಿದ್ದರಾಮಯ್ಯ ಹೇಳಿದರು.