ಕಲಬುರಗಿ: ಕರ್ನಾಟಕದಲ್ಲಿ 40 ಪರ್ಸೆಂಟ್ ಬೊಮ್ಮಾಯಿ ಸರ್ಕಾರವನ್ನು ಕಿತ್ತೊಗೆದು ಹೊಸ ಯುಗ ಆರಂಭ ಮಾಡುತ್ತೇವೆ. 2023 ಚುನಾವಣೆಯ (Karnataka Election) ಅಭ್ಯರ್ಥಿಗಳ ಪಟ್ಟಿ ನಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಡುತ್ತಾರೆ. ನಮ್ಮ ಕಾರ್ಯಕಾರಿ ಅಧ್ಯಕ್ಷರು ಅಭ್ಯರ್ಥಿಗಳ ಟಿಕೆಟ್ ಫೈನಲ್ ಮಾಡುತ್ತಾರೆ. ಅತಿ ಶೀಘ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದರು.
ನಗರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಅವರು ಮಾತನಾಡಿ, ಸಿ.ಟಿ ರವಿ ಮಾತಿಗೆ ಬೆಲೆ ಕೊಡಬೇಡಿ. ಅವರಿಗೆ ಪ್ರಚಾರದ ರೋಗ ಇದೆ, ಪ್ರತಿದಿನ ಮೀಡಿಯಾದಲ್ಲಿ ಪ್ರಚಾರಕ್ಕಾಗಿ ಏನೇನೋ ಮಾಡುತ್ತಾರೆ. ಬೆಳಗ್ಗೆ ಎದ್ದರೆ ಬೇರೆಯವರಿಗೆ ಬೈಯ್ಯದೆ ಅವರ ದಿನ ಕಳೆಯೋದಿಲ್ಲ, ಅದೆಲ್ಲ ಪ್ರಚಾರದ ಗಿಮಿಕ್. ಅವರು ಬೈಯ್ಯುವುದರಲ್ಲಿ ಕಾಲ ಕಳೆಯಲಿ, ನಾವು ಕೆಲಸ ಮಾಡುತ್ತೇವೆ ಎಂದು ಟೀಕಿಸಿದರು.
ಇದನ್ನೂ ಓದಿ | 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ, 100 ಮೋದಿ, ಶಾ ಬಂದರೂ ತಪ್ಪಿಸಲು ಸಾಧ್ಯವಿಲ್ಲ: ಖರ್ಗೆ ಭರವಸೆ
ಸದನದಲ್ಲಿ ಯಡಿಯೂರಪ್ಪ ಭಾವುಕರಾದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಹಿರಿಯರಿಗೆ ಅಗೌರವ ತೋರುವ ಸಂಸ್ಕಾರವಿದೆ. ನಮ್ಮಲ್ಲಿ ಹಿರಿಯರಿಗೆ ಗೌರವ ತೋರುತ್ತೇವೆ. ಬಿಜೆಪಿಯಲ್ಲಿ ಹಿರಿಯರಿಗೆ ನಿವೃತ್ತಿ ನೀಡಿ, ಟಿಕೆಟ್ ಕಟ್ ಮಾಡುತ್ತಾರೆ. ಪ್ರಧಾನಿ ಮೋದಿ ಅವರ ಗುರುವಾದ ಲಾಲ್ ಕೃಷ್ಣ ಆಡ್ವಾಣಿಯವರನ್ನೇ ಅವರು ಬಿಟ್ಟಿಲ್ಲ. ನಮ್ಮ ನಾಯಕರು ಇದೆ ನೆಲದ ಖರ್ಗೆಯವರಾಗಿದ್ದು, ಹಿರಿಯರಿಗೆ ನಾವು ಗೌರವ ಕೊಡುತ್ತೇವೆ ಎಂದು ತಿಳಿಸಿದರು.