ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ (Lok Sabha Election) ಮೊದಲ ಹಂತದ ಮತದಾನ ಮುಗಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಟಾಪಟಿ ಮುಂದುವರಿದಿದೆ. ಅದರಲ್ಲೂ, ಕರ್ನಾಟಕ ಕಾಂಗ್ರೆಸ್ (Karnataka Congress) ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ವಿಶೇಷ ವಿಮಾನಗಳಲ್ಲಿ ಓಡಾಡುತ್ತಿರುವುದಕ್ಕೆ ಕರ್ನಾಟಕ ಬಿಜೆಪಿ (Karnataka BJP) ಆಕ್ರೋಶ ವ್ಯಕ್ತಪಡಿಸಿದೆ. “ಕನ್ನಡಿಗರ ತೆರಿಗೆ ಹಣದಲ್ಲಿ ರಣದೀಪ್ ಸುರ್ಜೇವಾಲ (Randeep Surjewala) ಅವರು ಟ್ರಿಪ್ ಮಾಡುತ್ತಿದ್ದಾರೆ” ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
“ಕನ್ನಡಿಗರಿಗೆ ಬರ ಪರಿಹಾರ, ಅಭಿವೃದ್ಧಿಗೆ ಅನುದಾನ ಕೊಡಲು ಖಜಾನೆ ಖಾಲಿ ಮಾಡಿ, ಹಣವಿಲ್ಲ ಎಂದು ಕೂತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅವರ ಚುನಾವಣಾ ಪ್ರಚಾರಕ್ಕೆ ಸುತ್ತಾಡಲು ಸ್ಪೆಷಲ್ ಫ್ಲೈಟ್‌ಗಳ ವ್ಯವಸ್ಥೆಯನ್ನೇ ಮಾಡಿದೆ. ಎಟಿಎಂ ಸರ್ಕಾರ ಕೊಟ್ಟು ಕಳಿಸುವ ಲೂಟಿ ಹಣವನ್ನು ಚುನಾವಣೆಗಾಗಿ ದೇಶದ ತುಂಬ ತೆಗೆದುಕೊಂಡು ಹೋಗಿ ಹಂಚುವ ಜವಾಬ್ದಾರಿಯನ್ನೂ ನೀಡಲಾಗಿದೆಯೇ” ಎಂದು ಪ್ರಶ್ನಿಸಿದೆ.
ಕನ್ನಡಿಗರಿಗೆ ಬರ ಪರಿಹಾರ, ಅಭಿವೃದ್ಧಿಗೆ ಅನುದಾನ ಕೊಡಲು ಖಜಾನೆ ಖಾಲಿ ಮಾಡಿ ಹಣವಿಲ್ಲ ಎಂದು ಕೂತಿರುವ @INCKarnataka ಸರ್ಕಾರ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅವರ ಚುನಾವಣಾ ಪ್ರಚಾರಕ್ಕೆ ಸುತ್ತಾಡಲು ಸ್ಪೆಷಲ್ ಫ್ಲೈಟ್‌ಗಳ ವ್ಯವಸ್ಥೆಯನ್ನೇ ಮಾಡಿದೆ.#ATMSarkara ಕೊಟ್ಟು ಕಳಿಸುವ ಲೂಟಿ ಹಣವನ್ನು ಚುನಾವಣೆಗಾಗಿ ದೇಶದ ತುಂಬಾ… pic.twitter.com/ZaWl4kpElg
— BJP Karnataka (@BJP4Karnataka) April 27, 2024
“ಕನ್ನಡಿಗರು ಕುಡಿಯಲು ಹನಿ ನೀರಿಲ್ಲದೆ ಸತ್ತರೂ ಸಿದ್ದರಾಮಯ್ಯ ಸರ್ಕಾರಕ್ಕೆ ಚಿಂತೆ ಇಲ್ಲ. ಆದರೆ, ಹೈಕಮಾಂಡ್ ಹೇಳಿದಂತೆ ಕೇಳಿಕೊಂಡು ಕಪ್ಪ ಕಾಣಿಕೆ ಸಲ್ಲಿಸುತ್ತ, ಅವರ ಸೇವೆ ಮಾಡುತ್ತ, ಕುರ್ಚಿ ಉಳಿಸಿಕೊಳ್ಳುವುದೇ ಸಿದ್ದರಾಮಯ್ಯ ಅವರ ಗುರಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ರಣದೀಪ್ ಸುರ್ಜೇವಾಲಾ ಅವರ ಪ್ರವಾಸದ ವಿವರವನ್ನು ಬಿಜೆಪಿ ಹಂಚಿಕೊಂಡು ತಿರುಗೇಟು ನೀಡಿದೆ.
ಬರ ಪರಿಹಾರ; ಸಿಎಂ ಅಸಮಾಧಾನ
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ರಾಜ್ಯದಲ್ಲಿ 35 ಸಾವಿರ ಕೋಟಿ ರೂ. ಮೊತ್ತದ ಬೆಳೆ ನಷ್ಟವಾಗಿದೆ. 48 ಸಾವಿರ ಹೆಕ್ಟೇರ್ ಬೆಳೆ ನಾಶ ಆಗಿದೆ. 223 ತಾಲೂಕುಗಳು ಬರಪೀಡಿತ ಎಂಬುದಾಗಿ ಘೋಷಣೆ ಮಾಡಿದ್ದೇವೆ. ಹಾಗಾಗಿ, ನಾವು ಕೇಂದ್ರ ಸರ್ಕಾರಕ್ಕೆ 18,172 ಕೋಟಿ ರೂ. ಪರಿಹಾರ ಕೇಳಿದ್ದೆವು. ಆದರೆ, ಈಗ ಕೇಂದ್ರ ಸರ್ಕಾರವು ನಾವು ಕೇಳಿದ ನಾಲ್ಕನೇ ಒಂದು ಭಾಗದಷ್ಟು ಮಾತ್ರ ಪರಿಹಾರ ನೀಡಿದೆ. ಇದು ತುಂಬ ಕಡಿಮೆ ಆಯಿತು. ಈ ಕುರಿತು ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂಬುದಾಗಿ ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ತಿಳಿಸಿದರು.
ಮಲತಾಯಿ ಧೋರಣೆ ಎಂದ ಕೃಷ್ಣ ಭೈರೇಗೌಡ
ಕೇಂದ್ರ ಸರ್ಕಾರವು ಕಡಿಮೆ ಮೊತ್ತದ ಬರ ಪರಿಹಾರ ಬಿಡುಗಡೆ ಮಾಡಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಇಷ್ಟಿದ್ದರೂ ಕೇವಲ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದೆ. ಈ ದುಡ್ಡು ಯಾವುದಕ್ಕೂ ಸಾಕಾಗುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Drought Relief: 3,454 ಕೋಟಿ ರೂ. ಬರ ಪರಿಹಾರ; ‘ಅರೆಕಾಸಿನ ಮಜ್ಜಿಗೆ’ ಎಂದ ಸಿದ್ದರಾಮಯ್ಯ!