Site icon Vistara News

ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಕಾಂಗ್ರೆಸ್‌: ಕೆ.ಎಚ್‌.ಮುನಿಯಪ್ಪ ಮನೆಗೆ ಸುರ್ಜೇವಾಲಾ ಭೇಟಿ

ಕೆ.ಎಚ್‌.ಮುನಿಯಪ್ಪ

ಬೆಂಗಳೂರು: ದೇಶದಾದ್ಯಂತ ಹಿರಿಯ ನಾಯಕರು ಕಾಂಗ್ರೆಸ್‌ ಪಕ್ಷ ತೊರೆಯುತ್ತಿದ್ದಾರೆ. ಈ ನಡುವೆ ರಾಜ್ಯದ ಕೆಲ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡುವರೆಂಬ ಮಾತುಗಳು ಕೇಳಿಬಂದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಸಂಜಯ್ ನಗರದಲ್ಲಿರುವ ಕೋಲಾರದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಪಕ್ಷ ತ್ಯಜಿಸುವ ತೀರ್ಮಾನ ಮಾಡದಂತೆ ಮನವಿ ಮಾಡಿ, ಅಸಮಾಧಾನ ಶಮನಗೊಳಿಸುವ ಪ್ರಯತ್ನ ನಡೆಸಿದರು.

ಕೆ.ಎಚ್‌. ಮುನಿಯಪ್ಪ ಜತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ರಣಜಿತ್‌ ಸಿಂಗ್‌ ಸುರ್ಜೇವಾಲಾ ಅವರು, ಮುನಿಯಪ್ಪ ಅವರು ನನ್ನ ಹಿರಿಯ ಸಹೋದರ ಇದ್ದಂತೆ. ಅವರ ಮನೆ ನೋಡಬೇಕು ಎಂದು ಆಸೆಪಟ್ಟಿದ್ದೆ, ಹೀಗಾಗಿ ಮನೆಗೆ ಭೇಟಿ ನೀಡಿದ್ದೇನೆ. ಹಾಗೇ ಸಹಜವಾಗಿ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದೇವೆ. ಮುನಿಯಪ್ಪಗೆ ಪಕ್ಷದಲ್ಲಿ ಯಾವುದೇ ತೊಂದರೆ ಇಲ್ಲ. ಅವರು ಟ್ರಬಲ್‌ಗೆ ಟ್ರಬಲ್ ಕೊಡುವಂತ ನಾಯಕ. ಎಐಸಿಸಿ ಸೂಚನೆ ಪ್ರಕಾರ ನಾನು ಇಲ್ಲಿಗೆ ಬಂದಿಲ್ಲ. ಅವರ ಕುಟುಂಬ ಸದಸ್ಯನಾಗಿ ಬಂದಿದ್ದೇನೆ ಅಷ್ಟೇ. ನನ್ನ ತಂದೆಯ ಕಾಲದಿಂದಲೂ ಅವರು ನನಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿ ಮಾತುಕತೆ ನಡೆಸಿದ್ದೇವೆ ಎಂದರು.

ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಸುರ್ಜೆವಾಲ ತಂದೆ ನನಗೆ 40 ವರ್ಷಗಳಿಂದ ಆಪ್ತರು. ಅವರು ಕುಟುಂಬದ ‌ಸದಸ್ಯರಾಗಿ ನನ್ನ ಮನೆಗೆ ಬಂದಿದ್ದಾರೆ. ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ನನ್ನ ಅಭಿಪ್ರಾಯಗಳನ್ನು ಹೈಕಮಾಂಡ್‌ಗೆ ಹೇಳಿದ್ದೇನೆ. ಏನು ಮಾಡುತ್ತಾರೋ ನೊಡೋಣ ಎಂದರು.
ಪಕ್ಷದಲ್ಲಿ ಸಮಸ್ಯೆಗಳೇನು ಇಲ್ಲ, ನಾನು ಈಗಲೂ ಕಾಂಗ್ರೆಸ್‌‌ನಲ್ಲಿ ಇದ್ದೇನೆ, ಅಲ್ಲೇ ಇರುತ್ತೇನೆ. ಮಠಕ್ಕೆ ಜಮೀನು ವಿಚಾರವಾಗಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದೆ. ಇದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದರು.

ನನ್ನ ಮೇಲಿನ ವಿಶ್ವಾಸದಿಂದ ಸುರ್ಜೇವಾಲಾ ಬಂದಿದ್ದಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ಬಗ್ಗೆ‌ ಚರ್ಚೆ ಮಾಡಿದ್ದಾರೆ. ದೊಡ್ಡ ಪಕ್ಷದಲ್ಲಿ ಇಂತಹ ಘಟನೆಗಳು ಆಗುತ್ತಿರುತ್ತವೆ, ಕೋಲಾರ ಜಿಲ್ಲೆಯಲ್ಲಿ ಪಕ್ಷದ ನಾಯಕರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು.

ರಾಜ್ಯ ನಾಯಕರ ವಿರುದ್ಧ ಬೇಸರಗೊಂಡಿದ್ದ ಮುನಿಯಪ್ಪ
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಕಾಂಗ್ರೆಸ್‌ ಶಾಸಕರೇ ಬಿಜೆಪಿಗೆ ಬೆಂಬಲ ನೀಡಿ ತಮ್ಮ ಸೋಲಿಗೆ ಕಾರಣವಾದದ್ದು ಹಾಗೂ ಜಿಲ್ಲೆಯಲ್ಲಿ ಬದ್ಧ ವೈರಿಗಳಾದ ಚಿಂತಾಮಣಿ ಮಾಜಿ ಶಾಸಕ ಎಂ.ಸಿ.ಸುಧಾಕರ್, ಮುಳಬಾಗಿಲು ಮಾಜಿ ಶಾಸಕ ಕೊತ್ತನೂರು‌ ಮಂಜುನಾಥ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಕೆ.ಎಚ್‌.ಮುನಿಯಪ್ಪ ಮುನಿಸಿಕೊಂಡಿದ್ದರು. ಜತೆಗೆ ಪಕ್ಷದಲ್ಲಿ ತಮ್ಮನ್ನು ಪರಿಗಣಿಸುತ್ತಿಲ್ಲ ಎಂದು ಅಸಮಾಧಾನಗೊಂಡು, ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರವಿದ್ದರು.

ಇದಷ್ಟೇ ಅಲ್ಲದೆ ಇತ್ತೀಚೆಗೆ ಕೆ.ಎಚ್‌.ಮುನಿಯಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರಿಂದ, ಇವರು ಕಾಂಗ್ರೆಸ್ ಪಕ್ಷ ಬಿಡುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದವು. ಈ ಹಿನ್ನೆಲೆಯಲ್ಲಿ ಅಸಮಾಧಾನ ಶಮನಗೊಳಿದುವ ನಿಟ್ಟಿನಲ್ಲಿ ಮುನಿಯಪ್ಪ ಅವರನ್ನು ಸುರ್ಜೇವಾಲಾ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | ಗುಲಾಂ ನಬಿ ಆಜಾದ್‌ ಬಳಿಕ ಕೆ.ಎಚ್‌. ಮುನಿಯಪ್ಪ ಕಾಂಗ್ರೆಸ್‌ ಬಿಡ್ತಾರಾ?: ರಾಜಕೀಯ ವಲಯದಲ್ಲಿ ಬಿಸಿ ಚರ್ಚೆ

Exit mobile version