Site icon Vistara News

ಲಿಮ್ಕಾ ದಾಖಲೆ ಬರೆಯಲಿರುವ ನಾಟಕ ಪ್ರದರ್ಶನ; ಜುಲೈ 31ರಂದು 31 ಕಡೆ ನಾಟಕದೊಳ್ ಕರ್ನಾಟಕ

nataka 31 july

ಬೆಂಗಳೂರು: ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಲ್ಲಿ ಒಂದೇ ದಿನ ಒಂದೇ ಕಾಲಕ್ಕೆ ಒಂದೇ ನಾಟಕ ಪ್ರಯೋಗ- ʼʼನಾಟಕದೊಳ್‌ ಕರ್ನಾಟಕʼʼ. ಇದು ರಂಗಭೂಮಿಯಲ್ಲಿ ಎರಡನೇ ಬಾರಿ ಲಿಮ್ಕಾ ದಾಖಲೆ ಬರೆಯುವ ಪ್ರಯತ್ನ. 31 ಜುಲೈ, 31 ಜಿಲ್ಲೆ, 31 ಕಲಾವಿದರು, 31 ರಂಗಮಂದಿರ- ಹೀಗೆ ಏಕಕಾಲಕ್ಕೆ ಇಡೀ ಕರ್ನಾಟಕದಾದ್ಯಂತ ಒಂದೇ ದಿನ ಒಂದೇ ಸಮಯಕ್ಕೆ ಪ್ರದರ್ಶನಗೊಳ್ಳುತ್ತಿರುವ ನಾಟಕವೇ ‘55 ನಿಮಿಷದ ಒಂದು ಪ್ರೇಮಕಥೆ’.

ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟವಾಗಿ ದಾಖಲೆ ಮಾಡಲು, ಲಿಮ್ಕಾ ದಾಖಲೆಗೆ ಸಿದ್ಧವಾಗುತ್ತಿರುವ ಈ ನಾಟಕವನ್ನು ನಟಿಸುತ್ತಿರುವ ತಂಡ ‘ರಂಗಪಯಣʼ. ಇದಕ್ಕಾಗಿ 3 ತಿಂಗಳಿಂದ ತಂಡ ಶ್ರಮವಹಿಸುತ್ತಿದ್ದು 220ಕ್ಕೂ ಹೆಚ್ಚು ತಂತ್ರಜ್ಞರು, 31 ಕಲಾವಿದರು ಇತಿಹಾಸ ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ. ಸಂಜೆ 7 ಗಂಟೆಗೆ ನಾಟಕ ಆರಂಭವಾಗಲಿದೆ. ಇದರ ತಂಡದ ನಿರ್ವಹಣೆ ನಯನ ಸೂಡ. ರಚನೆ, ಸಂಗೀತ, ನಿರ್ದೇಶನ ರಾಜ್‌ ಗುರು.

ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಕೊಂಡ ರಂಗಪಯಣವು ಮಕ್ಕಳ ಶಿಬಿರ, ನಾಟಕಗಳ ಮೂಲಕ ಸಕ್ರಿಯವಾಗಿತ್ತು. 8 ಜನರಲ್ಲಿ ಪ್ರಾರಂಭವಾದ ತಂಡ ಇದೀಗ 60ಕ್ಕೂ ಹೆಚ್ಚು ಕಲಾವಿದರನ್ನು ಒಳಗೊಂಡು ಸಾಮಾಜಿಕವಾಗಿ ನಾಟಕಗಳ ಪ್ರಯೋಗಗಳನ್ನು ಮಾಡಿಕೊಂಡು ಬಂದಿದೆ. ದೇಶಾದ್ಯಂತ ನಾಟಕಗಳ ಮೂಲಕ ಸಂಚರಿಸಿರುವ ತಂಡ ಪ್ರತೀ ವರ್ಷ ಶಂಕರ್‌ನಾಗ್ ಹೆಸರಿನಲ್ಲಿ ನಾಟಕೋತ್ಸವ ಸಂವಾದ, ಮಹಿಳೆ ಮತ್ತು ರಂಗಭೂಮಿ, ನಾಗರಕಟ್ಟೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

‘55 ನಿಮಿಷದ ಒಂದು ಪ್ರೇಮ ಕಥೆ’ ನಾಟಕವನ್ನು 2015ರಲ್ಲಿ 9 ಕಲಾವಿದರು ಒಂದೇ ಸಮಯಕ್ಕೆ ಬೆಂಗಳೂರಿನ 9 ರಂಗಮಂದಿರಗಳಲ್ಲಿ ಪ್ರಾರಂಭಿಸಿ ಒಂದೇ ಸಮಯಕ್ಕೆ ಮುಗಿಸಿ ಲಿಮ್ಕಾ ದಾಖಲೆ ನಿರ್ಮಿಸುವಲ್ಲಿ ತಂಡ ಯಶಸ್ವಿಯಾಗಿತ್ತು.

ಇದೊಂದು ಪ್ರೇಮ ಕಥೆ ಹಾಗೂ ಏಕವ್ಯಕ್ತಿ ಪ್ರದರ್ಶನ. ಬೆಳ್ಳಿತೆರೆಯ ಮೇಲೆ ನಾಯಕನಾಗುವ ಕನಸು ಕಂಡಿದ್ದ ನಟನೊಬ್ಬನ ಪ್ರೇಮ ಕಥೆ, ನಾಯಕನಾಗ ಬಯಸಿದ್ದವ ಜೂನಿಯರ್ ಆರ್ಟಿಸ್ಟ್ ಆದ ಕಥೆ ತನ್ನ ಇಡೀ ಜೀವನದ ಅಮೂಲ್ಯ ಕ್ಷಣಗಳನ್ನು ಮತ್ತು ತನ್ನ ಪ್ರೇಮ ಕಥೆಯನ್ನು ಅತ್ಯಂತ ಸ್ವಾರಸ್ಯಕರ ರೀತಿಯಲ್ಲಿ ಬಿಚ್ಚಿಡುತ್ತಾ ಹೋಗುತ್ತಾನೆ. ಕಾಲೇಜಿನ ದಿನಗಳಲ್ಲಿ ಸಿಕ್ಕ ಪ್ರೀತಿ ತನ್ನ ಪ್ರೀತಿಯ ತೆಕ್ಕೆಯಿಂದ ಕೈ ಜಾರಿದಾಗ ಅವಳನ್ನು ಹುಡುಕಲು ಹೊರಡುತ್ತಾನೆ. ತನ್ನ ತಾಯಿ, ತಂದೆ, ಪ್ರೀತಿ ಮತ್ತು ಸಿನಿಮಾ ಇವು ನಾಲ್ಕು ದಿಕ್ಕುಗಳ ಕಥೆಯನ್ನು ಒಟ್ಟೋಟ್ಟಿಗೆ ಹಾಸ್ಯದ ಲೇಪನದೊಂದಿಗೆ ಹೇಳ ಹೊರಟ ‘ಸಂಜು’ವಿನ ಕಥೆ ಅದೇ ‘55 ನಿಮಿಷದ ಒಂದು ಪ್ರೇಮ ಕಥೆ’.

ಇದನ್ನೂ ಓದಿ: ʼಕರ್ನಾಟಕ ಗತ ವೈಭವʼ ಪುಸ್ತಕವನ್ನು ಜನಪ್ರತಿನಿಧಿಗಳು ಓದಬೇಕು: ಡಾ.ಎಂ.ಎಸ್. ಆಶಾದೇವಿ

Exit mobile version