ಮೈಸೂರು: ಟಿಪ್ಪು ನಿಜ ಕನಸುಗಳು ನಾಟಕದ ಮೂಲ ಮತ್ತೆ ಚರ್ಚೆಯ ಕೇಂದ್ರ ಸ್ಥಾನಕ್ಕೆ ಬಂದು ನಿಂತಿರುವ ಮೈಸೂರಿನ ರಂಗಾಯಣ (Rangayana row) ಈಗ ಇನ್ನೊಂದು ನಾಟಕದ ಮೂಲಕ ವಿವಾದಕ್ಕೆ ಗುರಿಯಾಗಿದೆ. ಡಾ. ಚಂದ್ರಶೇಖರ ಕಂಬಾರ ಅವರ ಸಾಂಬಶಿವ ನಾಟಕವನ್ನು ರಂಗಾಯಣ ಕಲಾವಿದರು ಎರಡು ದಿನಗಳ ಹಿಂದೆ ಪ್ರದರ್ಶನ ಮಾಡಿದ್ದರು. ಇದರಲ್ಲಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಅಪಹಾಸ್ಯ ಮಾಡಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಟಕದಲ್ಲಿ ಸಿದ್ದರಾಮಯ್ಯ ಬಗ್ಗೆ ಅವಹೇಳಕಾರಿಯಾಗಿ ಅಪಹಾಸ್ಯ ಮಾಡಿದ್ದು, ಡಿ.ಕೆ. ಶಿವಕುಮಾರ್ ಬಗ್ಗೆ ವ್ಯಂಗ್ಯವಾಡಿದ್ದನ್ನು ಸಹಿಸದೆ ರೊಚ್ಚಿಗೆದ್ದ ಸಿದ್ದರಾಮಯ್ಯ ಅಭಿಮಾನಿಗಳು ವೇದಿಕೆಗೆ ನುಗ್ಗಿ ನಾಟಕಕ್ಕೆ ಬ್ರೇಕ್ ಹಾಕಿದರು.
ಸಿದ್ದರಾಮಯ್ಯ ಆಡಳಿತದ ಬಗ್ಗೆ ಕೇವಲವಾಗಿ ಚಿತ್ರಿಸಲಾಗಿದೆ. ಸಿದ್ದರಾಮಯ್ಯ, ಡಿಕೆಶಿ ಆಡಳಿತ ವೈಖರಿಯನ್ನು ಟೀಕಿಸಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಟಿಪ್ಪು ಇತಿಹಾಸವನ್ನೇ ತಿರುಚಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರನ್ನು ಕಾಂಗ್ರೆಸ್ ಟೀಕಿಸುತ್ತಿದೆ. ಇದೀಗ ಅಡ್ಡಂಡ ಕಾರ್ಯಪ್ಪ ಅವರ ಶಿಷ್ಯ ಕಾರ್ತಿಕ್ ಉಪಮನ್ಯು ಅವರ ಮೇಲೆ ಕಾಂಗ್ರೆಸ್ ಕಣ್ಣುಬಿದ್ದಿದೆ.
ನಾಟಕದಲ್ಲಿ ಕಾಂಗ್ರೆಸ್ ಅಧಿನಾಯಕಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಗ್ಗೆ ಹೀನಾಯವಾಗಿ ಚಿತ್ರಿಸಿ ಪ್ರದರ್ಶಿಸಿದ್ದು ನಾಟಕದ ಮಧ್ಯೆಯೇ ಅಭಿಮಾನಿಗಳು ಪ್ರಶ್ನಿಸಿದರು. ಆದರೆ, ತಾವು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ ಎಂದು ಉಪಮನ್ಯು ಸಮಜಾಯಿಷಿ ನೀಡಿದರು. ಹಾಗಿದ್ದರೆ ಮೂಲ ನಾಟಕದ ಪ್ರತಿಯನ್ನು ಕೊಡಿ ನಾವೇ ನೋಡಿಕೊಳ್ಳುತ್ತೇವೆ. ಚಂದ್ರಶೇಖರ ಕಂಬಾರರೇ ಬರೆದಿದ್ದಾರೋ ಅಥವಾ ನೀವು ಸೇರಿಸಿದ್ದೀರಾ ಎಂದು ನೋಡುತ್ತೇವೆ ಎಂದು ಅಭಿಮಾನಿಗಳು ಸವಾಲು ಹಾಕಿದರು. ಆದರೆ, ಸ್ಕ್ರಿಪ್ಟ್ ಕೊಡಲಿಲ್ಲ.
ಮೂಲ ನಾಟಕದಲ್ಲಿಲ್ಲದ ಅಂಶಗಳನ್ನು ಸೇರಿಸಿ ಕಾಂಗ್ರೆಸ್ ನಾಯಕರ ಬಗ್ಗೆ ಅಪಹಾಸ್ಯ ಮಾಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಕಾರ್ತಿಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ನಾಟಕದ ನಿರ್ದೇಶಕ ಕಾರ್ತಿಕ್ ಉಪಮನ್ಯು, ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಅವರನ್ನೂ ಪ್ರಶ್ನಿಸಿದರು.
ಈ ನಡುವೆ ನಾಟಕದಲ್ಲಿ ಸಿದ್ದರಾಮಯ್ಯ ಬಗ್ಗೆ ಅವಹೇಳನಕಾರಿಯಾಗಿ ಬಳಸಿದ್ದು ತಪ್ಪೆಂದು ನಿರ್ದೇಶಕರು ಕ್ಷಮೆಯಾಚಿಸಿದರು ಎನ್ನಲಾಗಿದೆ. ಅಡ್ಡಂಡ ಕಾರ್ಯಪ್ಪ, ಅವನ ಶಿಷ್ಯ ಕಾರ್ತಿಕ್ ಉಪಮನ್ಯು ಬಿಜೆಪಿ ಕಾರ್ಯಕರ್ತರೋ ಅಥವಾ ಕಲಾವಿದರೋ? ರಂಗಾಯಣವನ್ನು ಬಿಜೆಪಿಮಯ ಮಾಡುತ್ತಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ | Bahuroopi Rangotsava | ರಂಗಾಯಣದಲ್ಲಿ ಒಂದೇ ಸಿದ್ಧಾಂತವಾದಿಗಳ ಆರ್ಭಟ: ಅಡ್ಡಂಡ ಸಿ.ಕಾರ್ಯಪ್ಪ