ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧವೂ ಕಣಕ್ಕಿಳಿಸುವ ಬಿಜೆಪಿ ನಡೆಗೆ ಪ್ರತಿತಂತ್ರವನ್ನು ಕಾಂಗ್ರೆಸ್ ರೂಪಿಸುತ್ತಿದೆ. ಅಶೋಕ್ ವಿರುದ್ಧ ಸಂಸದ ಡಿ.ಕೆ. ಸುರೇಶ್ ಸ್ಪರ್ಧೆ ಮಾಡಬೇಕು ಎಂದು ಈಗಾಗಲೆ ಟಿಕೆಟ್ ಘೋಷಣೆ ಆಗಿರುವ ರಘುನಾಥ ನಾಯ್ಡು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ರಘುನಾಥ ನಾಯ್ಡು, ನಾನು ನಾಮಪತ್ರ ಸಲ್ಲಿಸುವುದು ಬೇಡ ಎಂದು ಅಧ್ಯಕ್ಷರು ಹೇಳಿಲ್ಲ. ನಾನೇ ನಾಮಪತ್ರ ಸಲ್ಲಿಕೆ ತಡ ಮಾಡಿದ್ದೇನೆ. 17ನೇ ತಾರೀಖು ನಾಮಪತ್ರ ಸಲ್ಲಿಕೆ ಮಾಡಬೇಕಿತ್ತು. ಡಿ.ಕೆ ಶಿವಕುಮಾರ್ ಅವರ ಜೊತೆ ಮಾತಾಡಿದ್ದೇನೆ. ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿ ಎಂದು ಹೇಳಿದ್ದೇವೆ,
ಅವರು ಸ್ಪರ್ಧಿಸಿದರೆ 50-70 ಸಾವಿರ ಲೀಡ್‌ನಲ್ಲಿ ಗೆಲುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಅವರ ಬಳಿ ಹೇಳಿದ್ದೇನೆ. ನೀನೆ ಸ್ಪರ್ಧೆ ಮಾಡು, ಗೆಲುವು ಆಗುತ್ತೆ ಎಂದಿದ್ದಾರೆ. ಆದರೆ ಡಿ.ಕೆ. ಸುರೇಶ್ ಅವರು ನಿಂತರೆ ಅಶೋಕ್ ಸೋಲ್ತಾರೆ. ಆರ್. ಅಶೋಕ್ ಎರಡು ಕಡೆನೂ ಸೋಲಬೇಕು ಎಂಬುದು ನನ್ನ ಆಸೆ.
ಆದರೆ ಪಾರ್ಟಿ ಇನ್ನೂ ನಿರ್ಧಾರ ಮಾಡಿಲ್ಲ. ಬಿ ಫಾರಂ ನನ್ನ ಕಡೆ ಇದೆ, ಭರ್ತಿ ಮಾಡಿದ್ದೇನೆ. ನಾಳೆ ಬೆಳಗ್ಗೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಡಿ.ಕೆ. ಸುರೇಶ್ ಅವರು ಬಂದು ನಿಲ್ಲಲಿ ಎಂದು ಮನವಿ ಮಾಡಿದ್ದೇನೆ. ಅವರು ನೋಡೋಣ, ನಿರ್ಧಾರ ಮಾಡೋಣ ಎಂದು ರಾತ್ರಿ ಹೇಳಿದ್ದಾರೆ. ನಾಳೆ ನಾಮಪತ್ರ ಸಲ್ಲಿಕೆಗೆ ಅವರು ಬರ್ತಾರೆ. ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್, ಹರಿಪ್ರಸಾದ್, ರಾಮಲಿಂಗರೆಡ್ಡಿ ಬರ್ತಾರೆ. ಪಿಜಿಆರ್ ಸಿಂಧ್ಯಾ, ಅವರು ಪುತ್ರಿಗೆ ಆಹ್ವಾನ ಮಾಡಿದ್ದೇನೆ.
ಪದ್ಮನಾಭನಗರ ಕ್ಷೇತ್ರದಲ್ಲಿ ಕನಕಪುರ ಹಾಗೂ ಆಂದ್ರಪ್ರದೇಶದ ಜನ ಹೆಚ್ಚಾಗಿದ್ದಾರೆ. ಸುರೇಶ್ ಅವರು ಸ್ಪರ್ಧೆ ಮಾಡಿದ್ರೆ, ಅಶೋಕ್ ಅವರು ಸೋಲ್ತಾರೆ ಎಂದರು. ಬಿಜೆಪಿಯ ಎನ್. ಆರ್. ರಮೇಶ್ ಹಾಗೂ ಶ್ರೀನಿವಾಸ ಜತೆ ಈ ಬಗ್ಗೆ ನಾನು ಮಾತಾಡಿಲ್ಲ ಎಂದು ರಘುನಾಥ ನಾಯ್ಡು ಹೇಳಿದ್ದಾರೆ.
ಇದನ್ನೂ ಓದಿ: R. Ashok: ಆರ್. ಅಶೋಕ್ ಪದ್ಮನಾಭನಗರದಲ್ಲೂ ಸೋಲುತ್ತಾರೆ: ರಘುನಾಥ ನಾಯ್ಡುವೇ ಅಭ್ಯರ್ಥಿ ಎಂದ ಡಿ.ಕೆ. ಶಿವಕುಮಾರ್