ರಾಮನಗರ: ಇಲ್ಲಿನ ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಯೇಸುಕ್ರಿಸ್ತನ ಶಿಲುಬೆ ಸ್ಥಾಪನೆ ವಿಚಾರದಲ್ಲಿ ಸದ್ದು ಮಾಡಿದ್ದ ಧರ್ಮದ ದಂಗಲ್ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಆಹಾರ ಪಡಿತರ ಚೀಟಿಗೆ (Ration Card) ಸಂಬಂಧಿಸಿ ಬಯೋಮೆಟ್ರಿಕ್ ಮಾಡಿದ್ದರೂ, ಅನಧಿಕೃತವಾಗಿ ಎಂಟ್ರಿ ಪಾಸ್‌ಬುಕ್ ಸಿದ್ಧಪಡಿಸಿ ಅದರಲ್ಲಿ ಯೇಸು ಕ್ರಿಸ್ತನ ಭಾವಚಿತ್ರವನ್ನು ಮುದ್ರಿಸಿ ಹಂಚಲಾಗಿದ್ದು, ಹಿಂದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಜಿಲ್ಲೆಯಲ್ಲಿ ನಿಧಾನವಾಗಿ ಕ್ರಿಶ್ಚಿಯನ್ ಮತ ಪ್ರಚಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.
ಮುನೇಶ್ವರ ಬೆಟ್ಟವಾಗಿದ್ದ ಕಪಾಲ ಬೆಟ್ಟದಲ್ಲಿ ಶಿಲುಬೆ ಏರಿಸಲು ಮುಂದಾಗಿದ್ದ ಪ್ರಕರಣವು ಈ ಹಿಂದೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಕನಕಪುರದಲ್ಲಿ ಈಗ ಇದೇ ರೀತಿಯ ಮತ್ತೊಂದು ಧರ್ಮ ಪ್ರಚಾರದ ವಿಷಯ ಶುರುವಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಟಾರ್ಗೆಟ್ ಮಾಡಿಕೊಂಡು ಪಡಿತರ ಚೀಟಿಯ ಮುಖಪುಟದಲ್ಲಿ ಯೇಸುಕ್ರಿಸ್ತನ ಭಾವಚಿತ್ರ ಹಾಕಿ ಧರ್ಮಕ್ಕೆ ಸೆಳೆಯುವ ಹೊಸ ತಂತ್ರ ಶುರುವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಬಡವರಿಗೆ ನೀಡುವ ಪಡಿತರ ಚೀಟಿಯಲ್ಲಿ ಯೇಸುವಿನ ಭಾವಚಿತ್ರ ಪ್ರಿಂಟ್ ಆಗಿದ್ದು, ರಾಮನಗರ ಜಿಲ್ಲೆಯ ಹಿಂದುಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೂಡಲೇ ರಾಮನಗರ ಜಿಲ್ಲಾಡಳಿತ ಇದಕ್ಕೆ ನಾಂದಿ ಹಾಡಬೇಕು, ಇದರ ಹಿಂದಿರುವ ಕಾಣದ ಕೈಗಗಳನ್ನು ಬೆಳಕಿಗೆ ತರಬೇಕು ಎಂದು ರಾಮನಗರ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ನಾಗಾರ್ಜುನ ಸಿ.ಎಂ ಆಗ್ರಹಿಸಿದ್ದಾರೆ.
ಹಿಂದು ಸಂಘಟನೆಗಳ ಆರೋಪಕ್ಕೆ ಪುಷ್ಟಿ ನೀಡುವಂತೆ ಒಂದಷ್ಟು ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕನಕಪುರದಲ್ಲಿ ಮೊದಲಿನಿಂದಲೂ ಹಿಂದುಗಳಲ್ಲಿರುವ ಬಡವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೆಳೆಯುವ ಕುತಂತ್ರ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಇದರ ಮಧ್ಯೆಯೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಗೆ ಬಯೋಮೆಟ್ರಿಕ್ ವ್ಯವಸ್ಥೆ ಇದ್ದರೂ ಎಂಟ್ರಿ ಪಾಸ್‌ಬುಕ್‌ವೊಂದನ್ನು ಅನಧಿಕೃತವಾಗಿ ಸಿದ್ಧಪಡಿಸಿದ್ದಲ್ಲದೆ, ಅದರಲ್ಲಿ ಯೇಸುಕ್ರಿಸ್ತನ ಭಾವಚಿತ್ರವನ್ನು ಮುದ್ರಿಸಿ ವಿತರಣೆ ಮಾಡಲಾಗಿತ್ತು. ಇದು ಹಿಂದುಪರ ಸಂಘಟನೆಗಳ ಗಮನಕ್ಕೆ ಬಂದು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಸಂಬಂಧ ಪ್ರತಿಭಟಿಸಿ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರಾಮನಗರ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆ ಉಪ ನಿರ್ದೇಶಕಿ ರಮ್ಯಾ ಸ್ಪಷ್ಟನೆ ನೀಡಿದ್ದು, ಪಡಿತರ ಹಂಚಿಕೆ ಮಾಡುತ್ತಿರುವುದು ಆನ್‌ಲೈನ್ ಮೂಲಕವೇ ಆಗಿದ್ದು, ಪಡಿತರ ಚೀಟಿ ತರಬೇಕೆಂಬುದೂ ಇಲ್ಲ. ಈ ಫೋಟೊ ವೈರಲ್ ಆಗಿರುವುದು ಖಾಸಗಿ ಸ್ಟುಡಿಯೋದಲ್ಲಿ ಪ್ರಿಂಟ್ ಆಗಿದ್ದು, ಈ ಧರ್ಮ ಪ್ರಚಾರದ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ತನಿಖೆ ಮೂಲಕ ತಿಳಿಯಬೇಕಿದೆ ಎಂದು ಹೇಳಿದ್ದಾರೆ.
ಕನಕಪುರ ತಹಸೀಲ್ದಾರ್‌ಗೆ ವರದಿ ನೀಡುವಂತೆ ಈಗಾಗಲೇ ಉಪ ನಿರ್ದೇಶಕಿ ರಮ್ಯಾ ಸೂಚನೆ ನೀಡಿದ್ದಾರೆ. ಇತ್ತ ಫೋಟೊ ವೈರಲ್ ಆಗುತ್ತಿದ್ದಂತೆ ಕನಕಪುರ ತಾಲೂಕು ನಾಗರಿಕ ಆಹಾರ ಮತ್ತು ಸರಬರಾಜು ನಿರ್ದೇಶಕರು, ಪಡಿತರ ಪಡೆಯಲು ಚೀಟಿ ಕಡ್ಡಾಯವಲ್ಲ, ಬಯೋಮೆಟ್ರಿಕ್ ಅಷ್ಟೇ ಸಾಕೆಂದು ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | ಆರೆಸ್ಸೆಸ್ ಧರ್ಮ ಜಾಗರಣ ಮುಖಂಡನ ಕಾರಿನ ಮೇಲೆ KILL YOU, JIHAD ಬರಹ, ಚಕ್ರದ ಗಾಳಿ ತೆಗೆದು ಬೆದರಿಕೆ