Site icon Vistara News

Karnataka Politics : ಸುಳ್ಳು ಹೇಳ್ಬೇಡಿ, ಕ್ಷಮೆ ಕೇಳೇ ಇಲ್ಲ ಎಂದು ಪರಮೇಶ್ವರ್‌ಗೆ ರಾಯರೆಡ್ಡಿ ಪತ್ರ!

Basavaraj Rayareddy CM Siddaramaiah and DR G Parameshwar

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ (Karnataka Politics) ಬಹಳಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದು 2 ತಿಂಗಳಾಗುವ ಹೊತ್ತಿಗೆ ಅಸಮಾಧಾನಗಳು ಹೊಗೆಯಾಡುತ್ತಿವೆ. ಈಗಾಗಲೇ ‌ಆಳಂದ ಶಾಸಕ ಬಿ.ಆರ್. ಪಾಟೀಲ್‌ ನೇತೃತ್ವದಲ್ಲಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿತ್ತು. ಇದು ಸುದ್ದಿಯಾಗುತ್ತಿದ್ದಂತೆ ಶಾಸಕಾಂಗ ಪಕ್ಷದ ಸಭೆ ಕರೆದು ಸಮಾಧಾನ ಮಾಡಲಾಗಿತ್ತು. ಎಲ್ಲವೂ ಸರಿಯಾಯಿತು ಎನ್ನುವ ಹೊತ್ತಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ನೀಡಿರುವ ಹೇಳಿಕೆಯು ಈಗ ಮತ್ತೆ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ. “ಪತ್ರ ಬರೆದ ಶಾಸಕರು, ತಾವು ಮಾಡಿದ್ದು ತಪ್ಪು ಎಂದು ಸಿಎಲ್‌ಪಿ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಕ್ಷಮೆಯಾಚಿಸಿದ್ದಾರೆ” ಎಂಬ ಪರಮೇಶ್ವರ್‌ ಹೇಳಿಕೆಗೆ ಕೆಂಡವಾಗಿರುವ ಶಾಸಕ ಬಸವರಾಜ ರಾಯರೆಡ್ಡಿ, ನಾವು ಕ್ಷಮೆ ಕೇಳೇ ಇಲ್ಲ ಎಂದು ಅವರಿಗೆ ವಾಟ್ಸಪ್‌ ಪತ್ರ ಬರೆದಿದ್ದಾರೆ! ಹೀಗಾಗಿ ಈ ಪತ್ರ ಸಮರ ಮಾತ್ರ ಇನ್ನೂ ನಿಂತಿಲ್ಲ.

ಸಚಿವರ ವರ್ತನೆ ವಿರುದ್ಧ ಪತ್ರ ಬರೆದಿದ್ದ ಹಿರಿಯ ಕಾಂಗ್ರೆಸ್ ಶಾಸಕರು ಸಿಎಂ ಬಳಿ ಆಕ್ರೋಶವನ್ನು ಹೊರಹಾಕಿದ್ದರು. ಬಳಿಕ ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನೂ ನಡೆಸಲಾಗಿದ್ದು, ಅಲ್ಲಿ ಸಿಎಂ ಕೆಲವರಿಗೆ ಬುದ್ಧಿ ಮಾತು ಹೇಳಿ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು, ಅವರ ಕೆಲಸಗಳಿಗೆ ಆದ್ಯತೆ ಕೊಡುವುದು ಸೇರಿದಂತೆ ಇನ್ನಿತರ ಸಲಹೆ, ಸೂಚನೆಗಳನ್ನು ನೀಡಿದ್ದರು. ಅಲ್ಲಿಗೆ ಪ್ರಕರಣ ಸುಖಾಂತ್ಯ ಆಗಿತ್ತು. ಆದರೆ, ಈ ಮಧ್ಯೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ಅಸಮಾಧಾನ ತೋಡಿಕೊಂಡು ಪತ್ರ ಬರೆದಿದ್ದ ಶಾಸಕರು ಸಿಎಲ್‌ಪಿ ಸಭೆಯಲ್ಲಿ ಕ್ಷಮಾಪಣೆ ಕೇಳಿದ್ದಾರೆ. ತಮಗೆ ಈ ಪತ್ರವು ಇಷ್ಟು ದೊಡ್ಡ ಅವಾಂತರವನ್ನು ಮಾಡುತ್ತದೆ ಎಂಬ ಅರಿವು ಇರಲಿಲ್ಲ. ನಮಗಾದ ಅಸಮಾಧಾನವನ್ನಷ್ಟೇ ನಾವು ಹೊರಹಾಕಿದ್ದೆವು. ಇದರಿಂದ ಆಗಿರುವ ಹಾನಿಗೆ ನಾವು ಕ್ಷಮೆ ಕೇಳುತ್ತೇವೆ. ನಾವು ಹೀಗೆ ಪತ್ರ ಬರೆಯಬಾರದಾಗಿತ್ತು ಎಂದು ಕ್ಷಮೆ ಕೇಳಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಮತ್ತೆ ಕಾಂಗ್ರೆಸ್ ಹಿರಿಯ ಶಾಸಕರು ಗರಂ ಆಗಿದ್ದಾರೆ.

ಪತ್ರ ಬರೆದ ಬಸವರಾಜ ರಾಯರೆಡ್ಡಿ!

ಡಾ. ಜಿ. ಪರಮೇಶ್ವರ್ ಹೇಳಿಕೆ ಖಂಡಿಸಿ ವಾಟ್ಸಪ್‌ ಮೂಲಕ ಪತ್ರ ಬರೆದಿರುವ ಶಾಸಕ ಬಸವರಾಜ ರಾಯರೆಡ್ಡಿ, ಕ್ಷಮೆ ಕೇಳುವ ಪ್ರಸಂಗ ನಡೆದಿಲ್ಲ. ನೀವು ಹೇಳಿದ್ದು ತಪ್ಪು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಇದಕ್ಕೆ ಡಾ. ಜಿ. ಪರಮೇಶ್ವರ್‌ ಅವರೂ ಪ್ರತಿಕ್ರಿಯೆ ನೀಡಿದ್ದು, “Sorry brother, didn’t mean it” ಎಂಬ ಸಂದೇಶವನ್ನು ಕಳಿಸಿದ್ದಾರೆ.

ಪತ್ರದಲ್ಲೇನಿದೆ?

ಪ್ರೀತಿಯ ಡಾಕ್ಟರ್ ಪರಮೇಶ್ವರ್ ಅವರಿಗೆ ನಮಸ್ಕಾರಗಳು, ಪತ್ರಿಕೆಯಲ್ಲಿ ಪ್ರಕಟವಾದಂತೆ‌, ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಕ್ಕೆ ಕ್ಷಮೆ ಕೇಳಿದ್ದಾರೆಂದು ಹೇಳಿರುವುದು ಬಹಳ ತಪ್ಪು. ನಾವುಗಳು ಕ್ಷಮೆ ಕೇಳುವ ಪ್ರಶ್ನೆ ಇದರಲ್ಲಿ ಬರುವುದಿಲ್ಲ. ನಮ್ಮ ಸಮಸ್ಯೆಗಳನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ಸರ್ಕಾರದಲ್ಲಿ ಸಚಿವರು ಮತ್ತು ಶಾಸಕರ ನಡುವೆ ಸಂಬಂಧ ಸುಧಾರಿಸಲು ಮುಂದಾಗಲಾಗಿತ್ತು. ಅಲ್ಲದೆ, ಗೌರವದ ವರ್ತನೆಯನ್ನು ಮಾಡುವ ಸಂಬಂಧ ಶಾಸಕಾಂಗದ ಸಭೆಯನ್ನು ಕರೆಯಲಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಶಾಸಕರಿಗೆ ಗೌರವ ಕೊಡುವಂತೆ ಮತ್ತು ಸಾಧ್ಯವಾದಷ್ಟು ಶಾಸಕರಿಗೆ ಅವರು ಕೇಳಿದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಶಾಸಕರು ಈ ರೀತಿ ಪತ್ರ ಬರೆದು ಮುಜುಗರ ಮಾಡಬೇಡಿ ಎಂದು ಹೇಳಿದ್ದಾರೆಯೇ ಹೊರತು ಬೇರೆ ಏನನ್ನೂ ಹೇಳಿರುವುದಿಲ್ಲ.

ಇದನ್ನೂ ಓದಿ : Lok Sabha Election 2024 : ಲೋಕಸಭೆ ಅಖಾಡಕ್ಕೆ ಕಾಂಗ್ರೆಸ್‌ ರೆಡಿ; ಶಾಸಕ, ಸಚಿವರನ್ನೇ ಕಣಕ್ಕಿಳಿಸಲು ಪ್ಲ್ಯಾನ್!

ನಾವು ಪತ್ರ ಬರೆದಿದ್ದಕ್ಕೆ ಕ್ಷಮೆ ಕೇಳುವ ಪ್ರಸಂಗ ಬರುವುದಿಲ್ಲ. ತಮ್ಮ ಈ ಹೇಳಿಕೆಯಿಂದ ಶಾಸಕರಾದ ನಮಗೆ ಅವಮಾನವಾಗುತ್ತದೆ. ದಯವಿಟ್ಟು ಈ ರೀತಿಯ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡಬೇಡಿ. ತಮ್ಮ ಪ್ರೀತಿಯ ಬಸವರಾಜ್ ರಾಯರೆಡ್ಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Exit mobile version