ಬೆಂಗಳೂರು: ಆರ್‌ಸಿಬಿ ಮತ್ತು ಸಿಎಸ್‌ಕೆ (RCB vs CSK) ನಡುವಿನ ಐಪಿಎಲ್ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗುತ್ತೇನೆ ಎಂದು ಹೇಳಿದ್ದ ಯುವಕನನ್ನು ಕಬ್ಬನ್ ಪಾರ್ಕ್ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. ಮ್ಯಾಚ್ ವೇಳೆ ಸ್ಟೇಡಿಯಂಗೆ ನುಗ್ಗುವುದಾಗಿ ವಿಡಿಯೊ ಮಾಡಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಯುವಕನನ್ನು ವಶಕ್ಕೆ ಪಡೆಯಲಾಗಿದೆ.
ನಿತಿನ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಮ್ಯಾಚ್ ವೇಳೆ ಸ್ಟೇಡಿಯಂಗೆ ನುಗ್ಗುವುದಾಗಿ ಯುವಕ ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮೇ 18ರಂದು ನಡೆಯುವ ಮ್ಯಾಚ್ ವೇಳೆ ಸ್ಟೇಡಿಯಂಗೆ ನುಗ್ಗುತ್ತೇನೆ ಎಂದು ಯುವಕ ವಿಡಿಯೊದಲ್ಲಿ ಹೇಳಿದ್ದ. ಈ ವಿಡಿಯೊವನ್ನು ಕಬ್ಬನ್ ಪಾರ್ಕ್ ಪೊಲೀಸರು ಗಮನಿಸಿ ನಿತಿನ್‌ನನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಮಾರ್ಚ್ 25ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಅಭಿಮಾನಿಯೊಬ್ಬ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯ(Virat Kohli) ಕಾಲಿಗೆ ಬಿದ್ದ ಪ್ರಸಂಗ ನಡೆದಿತ್ತು. ಈ ಘಟನೆಯಿಂದ ಪ್ರೇರಣೆಗೊಂಡ ಬೆಂಗಳೂರಿನ ಯುವಕ ನಿತಿನ್, ತಾನು ಕೂಡ ಮೈದಾನಕ್ಕೆ ನುಗ್ಗುವುದಾಗಿ ವಿಡಿಯೊದಲ್ಲಿ ಹೇಳಿದ್ದ. ಇದರಿಂದ ಪಂದ್ಯದ ವೇಳೆ ಸಮಸ್ಯೆಯಾಗಬಹುದು ಎಂದು ಕ್ರೀಡಾಂಗಣದ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ | RCB vs CSK: ಆರ್ಸಿಬಿಗೆ ಸಿದ್ದರಾಮಯ್ಯ, ಶಿವಣ್ಣ, ರಿಷಬ್ ಶೆಟ್ಟಿ, ಗೇಲ್ ಸೇರಿ ಗಣ್ಯರ ಸಪೋರ್ಟ್
ಯುವಕನ ವಿಡಿಯೊ ವೈರಲ್ ಆದ ಬಳಿಕ ನಿಗಾ ವಹಿಸಿದ್ದ ಪೊಲೀಸರು, ಯುವಕ ಟಿಕೆಟ್ ಪಡೆದು ಪಂದ್ಯ ವೀಕ್ಷಿಸಲು ಶನಿವಾರ ಆಗಮಿಸಿದ್ದಾಗ ವಶಕ್ಕೆ ಪಡೆದಿದ್ದಾರೆ.
ವಿರಾಟ್ ಕೊಹ್ಲಿಯ ಕಾಲಿಗೆ ಬಿದ್ದಿದ್ದ ಅಭಿಯಾನಿ
ಮಾರ್ಚ್‌ನಲ್ಲಿ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂಗೆ ನುಗ್ಗಿ ವಿರಾಟ್ ಕೊಹ್ಲಿಯ(Virat Kohli) ಕಾಲಿಗೆ ಬಿದ್ದ ಅಭಿಯಾನಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್ ಆರಂಭಿಸಲು ಸಿದ್ಧತೆ ನಡೆಸುತ್ತಿತ್ತು. ಆಗ ಕೊಹ್ಲಿ ಕ್ರೀಸ್‌ನಲ್ಲಿದ್ದರು. ಅ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಭಿಮಾನಿ ಪಿಚ್ ಕಡೆ ಬಂದು ಕೊಹ್ಲಿ ಕಾಲಿಗೆ ಬಿದ್ದು, ಆಲಿಂಗನ ಮಾಡಿದ್ದ. ಕೂಡಲೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಹೊರಹಾಕಿದ್ದರು. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.
A fan breached the security to meet Virat Kohli at the Chinnaswamy Stadium#RCBvsPBKS #IPL2024 #ViratKohli𓃵 pic.twitter.com/cwmbioGp8d
— Vathan Ballal (@VathanBallal) March 25, 2024
ಇದನ್ನೂ ಓದಿ | RCB vs CSK: ಸಿಕ್ಸರ್ ಮೂಲಕವೂ ದಾಖಲೆ ಬರೆದ ವಿರಾಟ್ ಕೊಹ್ಲಿ
ರಾಯಚೂರು ಮೂಲದ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ ಕುರುಮಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಅತ ಪೊಲೀಸ್ ವಿಚಾರಣೆ ವೇಳೆ ತನ್ನ ಮೂಲ ಹೆಸರನ್ನು ಮರೆ ಮಾಚಿ ರಂಜಿತ್ ಎಂದು ಹೇಳಿದ್ದ. ದಾಖಲೆಗಳನ್ನು ಪರಿಶೀಲಿಸುವ ವೇಳೆ ಆತ ರಂಜಿತ್ ಅಲ್ಲ ಕುರುಮಪ್ಪ ಎಂಬ ವಿಚಾರ ಬೆಳಕಿಗೆ ಬಂದಿತ್ತು. ನಂತರ ಆತನ ವಿರುದ್ಧ ಎಫ್ಐಆರ್ ದಾಖಲಿಸಿ ಕರ್ತವ್ಯಕ್ಕೆ ಅಡ್ಡಿ, ಮೈದಾನಕ್ಕೆ ಅತಿಕ್ರಮಣ ಪ್ರವೇಶದಡಿ ಕೇಸ್ ದಾಖಲಿಸಲಾಗಿತ್ತು.