ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ಪ್ರಕರಣದ (Exam Scam) ಆರೋಪಿಗಳ ವಿಚಾರಣೆ ವೇಗ ಪಡೆದಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಹೇಗಾಯಿತು ಎಂಬ ಬಗ್ಗೆ ಸಿಐಡಿ ಮಾಹಿತಿ ಕಲೆ ಹಾಕುತ್ತಿದೆ. ಆದರೆ, ಕಿಂಗ್‌ಪಿನ್ ಆರ್.ಡಿ. ಪಾಟೀಲ್ ನವರಂಗಿ ಆಟ ಆಡುತ್ತಿದ್ದು, ಪ್ರಶ್ನೆ ಪತ್ರಿಕೆ ಲೀಕ್ ಮಾಡಿರುವವರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇದು ತನಿಖಾಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಆರ್.ಡಿ.ಪಾಟೀಲ್ ಬ್ಲೂಟೂತ್ ಮೂಲಕ ಅಭ್ಯರ್ಥಿಗಳಿಗೆ ಉತ್ತರ ಹೇಳಿಸಿದ್ದ. ಆದರೆ, ಪೊಲೀಸರ ತನಿಖೆ ವೇಳೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿರುವ ಬಗ್ಗೆಯಷ್ಟೆ ಮಾಹಿತಿ ನೀಡಿದ್ದಾನೆ. ಎಲ್ಲಿ ಸೋರಿಕೆ ಮಾಡಿದ, ಯಾರಿಂದ ಸೋರಿಕೆ ಮಾಡಿಸಿದ್ದ ಎನ್ನುವುದರ ಬಗ್ಗೆ ತುಟಿ ಬಿಚ್ಚಿಲ್ಲ.
ಪರೀಕ್ಷಾ ಕೇಂದ್ರ ಇರುವ ಕಾಲೇಜಿನಿಂದಲೇ ಪ್ರಶ್ನೆ ಪತ್ರಿಕೆಯನ್ನು ಆರ್.ಡಿ.ಪಾಟೀಲ್ ಸೋರಿಕೆ ಮಾಡಿಸಿದ್ದ ಎನ್ನಲಾಗಿದೆ. ಕಾಲೇಜು ಆಡಳಿತ ಮಂಡಳಿಯ ಕೈವಾಡದಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎಂಬ ಅನುಮಾನಗಳೂ ಇವೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಬೆಳಗ್ಗೆಯೇ ಪೇಪರ್‌ಗೆ ಉತ್ತರ ಕೂಡ ರವಾನಿಸಿದ್ದ. ಹಲವು ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳಲಾಗಿತ್ತು.
ಇದನ್ನೂ ಓದಿ | Bengaluru News : ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಚಾಲಕ
ವಾಕಿ ಟಾಕಿ ಬಳಸಲು ವ್ಯವಸ್ಥೆ!
ಅಶೋಕ್ ನಗರ ಪೊಲೀಸರಿಂದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ವಿಚಾರಣೆ ನಡೆಸಲಾಗುತ್ತಿದ್ದು, ಏನೇ ಕೇಳಿದರೂ ಗೊತ್ತಿಲ್ಲಾ, ನೆನಪಿಲ್ಲಾ, ಎಂದು ಆರೋಪಿ ಹೇಳುತ್ತಿದ್ದಾನೆ. ಈ ಬಾರಿ ಬ್ಲೂಟೂತ್ ವರ್ಕೌಟ್ ಆಗಲಿಲ್ಲ ಎಂದರೆ ವಾಕಿ ಟಾಕಿ ಬಳಸಲು ವ್ಯವಸ್ಥೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಈಗಾಗಲೇ ಮೂರು ವಾಕಿ ಟಾಕಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮಕ್ಕಾಗಿ ಆನ್‌ಲೈನ್ ಮೂಲಕ ಬ್ಲೂಟೂತ್ ಹಾಗೂ ವಾಕಿ ಟಾಕಿಗಳನ್ನು ಖರೀದಿಸಲಾಗಿತ್ತು ಎಂದು ತಿಳಿದುಬಂದಿದೆ.
ಅಕ್ರಮದಲ್ಲಿ 200ಕ್ಕೂ ಹೆಚ್ಚು ಬ್ಲೂಟೂತ್ ಡಿವೈಸ್ ಬಳಸಿರುವ ಸಾಧ್ಯತೆ ಇದೆ. ಹೀಗಾಗಿ ನಾಪತ್ತೆಯಾಗಿರುವ ಸಾಗರ್ ಎಂಬ ಇನ್ನೊಬ್ಬ ಪ್ರಮುಖ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈತ ಅಕ್ರಮಗಳಿಗೆ ತಾಂತ್ರಿಕ ನೆರವು ನೀಡುತ್ತಿದ್ದ. ಕಲಬುರಗಿಯಲ್ಲಿ 37 ಬ್ಲೂಟೂತ್ ಹಂಚಲಾಗಿತ್ತು. ಆರಂಭದಲ್ಲೇ ಮೂರು ಬ್ಲೂಟೂತ್ ಸಿಕ್ಕ ಬಳಿಕ ಯಾರು ಬಳಸಿರಲಿಲ್ಲ. ಹಣ ಕೊಟ್ಟವರಿಗೆ ಡಿವೈಸ್ ನೀಡಲಾಗುತ್ತಿತ್ತು. ಅಕ್ರಮಕ್ಕೆಂದೇ 7 ಜನರ ಒಂದು ತಂಡವನ್ನು ಆರ್.ಡಿ.ಪಾಟೀಲ್ ಬಳಸಿಕೊಂಡಿದ್ದ.
ಆರ್.ಡಿ.ಪಾಟೀಲ್ ಸಹೋದರ ವಶಕ್ಕೆ
ಕೆಇಎ ಪರೀಕ್ಷಾ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಸಹೋದರ ಮಹಾಂತೇಶ್ ಪಾಟೀಲ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾದಗಿರಿ ಮಹಿಳಾ ಠಾಣಾ ಇನ್ಸಪೆಕ್ಟರ್ ಚನ್ನಯ್ಯ ಹೀರೆಮಠ್ ಶನಿವಾರ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ಮಾಡಿದ್ದರು. ಮಹಾಂತೇಶ್ ಪಾಟೀಲ್ ಮನೆಯಲ್ಲಿ ಬ್ಲೂಟೂತ್ ಪಡೆದಿದ್ದಾಗಿ ಆರೋಪಿ ಸಾಗರ್ ಜಮಾದರ್ ಹೇಳಿದ್ದರಿಂದ ಮಹಾಂತೇಶ್ ಪಾಟೀಲ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಂತರ ವಿಚಾರಣೆ ಆತನನ್ನು ಬಿಟ್ಟು ಕಳುಹಿಸಿದ್ದಾರೆ.
ಆರ್.ಡಿ. ಪಾಟೀಲ್ ಸೇರಿ ಮೂವರಿಗೆ ನ್ಯಾಯಾಂಗ ಬಂಧನ
ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ (Exam Scam) ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಸೇರಿ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸ್ ಕಸ್ಟಡಿಗೆ ನೀಡುವಂತೆ ತನಿಖಾಧಿಕಾರಿ ಮನವಿ ಮಾಡಿದ್ದರು. ಆದರೆ, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡದೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನ್ಯಾಯಾಧೀಶೆ ಸ್ಮಿತಾ ಸೂಚಿಸಿದ್ದಾರೆ.
ಇದನ್ನೂ ಓದಿ | Murder Case : ಕತ್ತಲಲ್ಲಿ ಬಂದು ಕಲ್ಲಿನಿಂದ ಜಜ್ಜಿ ವ್ಯಕ್ತಿ ಬರ್ಬರ ಹತ್ಯೆ!
ಇದಕ್ಕೂ ಮೊದಲು ಆರೋಪಿಗಳಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಯಿತು. ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿರುವ ಆರೋಪಿ ಸಂತೋಷ್ ಮೀಡಿಯಾ ಕ್ಯಾಮೆರಾಗಳನ್ನು ಕಂಡು ಭಯಭೀತವಾಗಿದ್ದ. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ