ಶಿವಾನಂದ ಹಿರೇಮಠ, ವಿಸ್ತಾರ ನ್ಯೂಸ್, ಗದಗ
ಇಲ್ಲಿನ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಭವಿಷ್ಯದ ಬಗ್ಗೆ ಕರಿಛಾಯೆ ಮನೆ ಮಾಡಿದೆ. ಲಕ್ಷಾಂತರ ಹಣ ವ್ಯಯಿಸಿ 2 ವರ್ಷದ ಕೋರ್ಸ್ ಮಾಡಿದರೂ ಕೂಡ ಇಲ್ಲಿನ ವಿದ್ಯಾರ್ಥಿಗಳಿಗೆ ನೌಕರಿಯಲ್ಲಿ ಮೀಸಲಾತಿ/ಆದ್ಯತೆ ಆಗಲಿ, ಸ್ನಾತಕೋತ್ತರ ನಂತರ ಸಂಶೋಧನೆ (Phd) ಮಾಡಲು ಅವಕಾಶ ಆಗಲಿ ಇಲ್ಲ. ಮಾತ್ರವಲ್ಲ RDPR(MA) ವಿದ್ಯಾರ್ಥಿಗಳಿಗೆ NET, SLET ಪರೀಕ್ಷೆ ಬರೆಯಲೂ ಅವಕಾಶವಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಅಕಾಡೆಮಿಕ್ ಕರಿಯರ್ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಜತೆಗೆ ಸರಕಾರಿ ನೌಕರಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ ಆಧ್ಯತೆ ಮತ್ತು ಮೀಸಲಾತಿ ಇಲ್ಲದ್ದರಿಂದ ನಾನಾ ಕನಸುಗಳನ್ನು ಹೊತ್ತು ಗ್ರಾಮೀಣಾಭಿವೃದ್ಧಿ ವಿವಿಗೆ ಪ್ರವೇಶ ಪಡೆದ ಸಾವಿರಾರು ವಿದ್ಯಾರ್ಥಿಗಳ ಬದುಕು ಅತಂತ್ರ ಸ್ಥಿತಿಗೆ ಬಂದು ತಲುಪಿದೆ.
ವಿವಿ ವಿದ್ಯಾರ್ಥಿಗಳ ಸಮಸ್ಯೆ ಏನು?
2016ರಲ್ಲಿ 350 ಎಕರೆ ಪ್ರದೇಶದಲ್ಲಿ 100 ಕೋಟಿಗೂ ಅಧಿಕ ವೆಚ್ಚದಲ್ಲಿ ಏಷಿಯಾದಲ್ಲಿ ಮೊಟ್ಟ ಮೊದಲ ಗ್ರಾಮೀಣ ವಿವಿಯನ್ನು ಗದಗದಲ್ಲಿ ಸ್ಥಾಪನೆ ಮಾಡಲಾಯಿತು. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಬಿಎ, ಬಿಎಸ್ಸಿ, ಬಿಕಾಂ ಪದವಿಯ ಐದು ಕೋರ್ಸ್, ಎಂಎ, ಎಂಕಾಂ, ಎಂಸ್ಸಿ ಸ್ನಾತಕೋತ್ತರ ವಿಭಾಗದಲ್ಲಿ 10 ಕೋರ್ಸ್, ಎರಡು ಡಿಪ್ಲೊಮಾ ಕೋರ್ಸ್ ಆರಂಭಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದ 5 ವರ್ಷದಲ್ಲಿ 2000ಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಆದರೆ, ಬೇರೆ ಕೋರ್ಸ್ ಗಳಿಗೆ ಇರುವ ಆದ್ಯತೆಯಂತೆ ಈ ಕೋರ್ಸ್‌ಗಳಿಗೆ ಸರಕಾರಿ ನೌಕರಿಯಲ್ಲಿ ಆದ್ಯತೆ /ಮೀಸಲಾತಿ ಇಲ್ಲ. ಇನ್ನೂ ವಿವಿಯಲ್ಲಿ ಪ್ರಾಧ್ಯಾಪಕರ ನೇಮಕಾತಿ ಕಾಯಂ ಇಲ್ಲವಾದ್ದರಿಂದ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಅವಕಾಶವೇ ಇಲ್ಲದಂತಾಗಿದೆ. ಅದರಲ್ಲೂ ಇಲ್ಲಿ ಎಂಎ(RDPR) ಕೋರ್ಸ್ ಗೆ NET, SLETಗೆ ಮಾನ್ಯತೆಯೇ ಇಲ್ಲ.
ವಿದ್ಯಾರ್ಥಿಗಳ ಕನಸು ಭಗ್ನ
ಸಂಶೋಧನೆ, NET, SLET ಗೆ ಮಾನ್ಯತೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಪ್ರಾಧ್ಯಾಪಕರಾಗುವ ಕನಸು ಕನಸಾಗಿಯೇ ಉಳಿದಿದೆ. ಸರಕಾರಿ ವ್ಯವಸ್ಥೆಯಲ್ಲಿ RDPR, ಮನ್ರೇಗಾ, ಜಲ ಶಕ್ತಿ ಮಿಷನ್, ಗ್ರಾಮೀಣ ಕುಡಿಯುವ ನೀರಿನ ಇಲಾಖೆ, ತೋಟಗಾರಿಕೆ, ಕೃಷಿ, ಗ್ರಾಮೀಣ ಆರೋಗ್ಯ ವಿಂಗ್ ಸೇರಿದಂತೆ 27 ಇಲಾಖೆಯಲ್ಲಿ ಗ್ರಾಮೀಣ ವಿವಿ ವಿದ್ಯಾರ್ಥಿಗಳ ಅವಶ್ಯಕತೆ ಇದೆ. ಈ ಇಲಾಖೆಗಳ ಉದ್ಯೋಗದಲ್ಲಿ ವಿವಿ ವಿದ್ಯಾರ್ಥಿಗಳಿಗೆ ಮೀಸಲಾತಿ ದೊರೆತರೆ ವಿವಿ ಸ್ಥಾಪನೆ ಉದ್ದೇಶವು ಈಡೇರಿದಂತೆ.
ಸಮಿತಿ ರಚನೆ ಮತ್ತು ವಿಳಂಬ ಪ್ರಕ್ರಿಯೆ
ವಿವಿಯ ಉಪ ಕುಲಪತಿ ವಿಷ್ಣುಕಾಂತ ಚಟಪಲ್ಲಿ, ಕುಲಸಚಿವ ಬಸವರಾಜ ಲಕ್ಕಣ್ಣವರ ಅವರು 2 ಬಾರಿ ಸರಕಾರಕ್ಕೆ ಪತ್ರ ಬರೆದು ಸರಕಾರಿ ಉದ್ಯೋಗದಲ್ಲಿ ಮೀಸಲಾತಿಗೆ ಒತ್ತಾಯಿಸಿದ್ದಾರೆ. RDPR ಇಲಾಖೆಯ ಎಸಿಎಸ್ ಉಮಾ ಮಹದೇವನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಎರಡು ಬಾರಿ ಸಭೆ ಕೂಡ ಮಾಡಲಾಗಿದೆ. ಆದರೆ ಪ್ರಕ್ರಿಯೆ ಮಾತ್ರ ವಿಳಂಬ ಆಗುತ್ತಿದೆ.
ಎಲ್ಲ ಅನುಕೂಲಗಳಿವೆ, ಆದರೆ, ಕಾಯಂ ಪ್ರೊಫೆಸರ್‌ಗಳಿಲ್ಲ
ಸುಂದರ ವಾತಾವರಣ, ಬೃಹತ್ ಪ್ರಾಂಗಣ, ವಿಶಾಲ ಲೈಬ್ರರಿ, ಹೈಟೆಕ್ ಬೋಧನಾ ವ್ಯವಸ್ಥೆ ಸೇರಿದಂತೆ ಎಲ್ಲ ಅನುಕೂಲವೂ ಇಲ್ಲಿದೆ. ಆದರೆ ಪ್ರೊಫೆಸರ್‌ಗಳ ಕಾಯಂ ನೇಮಕಾತಿ ಇಲ್ಲ. ಸಂಶೋಧನಾ ವಿದ್ಯಾರ್ಥಿಗಳಾಗಲು ಕಾಯಂ ಪ್ರೊಫೆಸರ್ ಗಳು ವಿವಿಗೆ ಅಗತ್ಯವಿದೆ. ʻʻಗ್ರಾಮೀಣ ಅಭಿವೃದ್ಧಿಗೆ ಹೊಸ ದಿಕ್ಕು ತೋರಲು ಈ ವಿವಿ ಆರಂಭಿಸಲಾಗಿದೆ. ವಿದ್ಯಾರ್ಥಿಗಳ ಬೇಡಿಕೆಗೆ ಅನುಸಾರ ಸರಕಾರ ಮಟ್ಟದಲ್ಲಿ ಉದ್ಯೋಗ ಖಾತ್ರಿ ಕುರಿತು ಚರ್ಚಿಸಲಾಗಿದೆ. ಅಂತಿಮ ತೀರ್ಮಾನ ಸರಕಾರವೇ ಕೈಗೊಳ್ಳಬೇಕಾಗಿದೆʼʼ ಎನ್ನುತ್ತಾರೆ ಆರ್‌ಡಿಪಿಆರ್ ವಿವಿಯ ಉಪಕುಲಪತಿಗಳಾಗಿರುವ ವಿಷ್ಣುಕಾಂತ ಚಟಪಲ್ಲಿ.
ವಿದ್ಯಾರ್ಥಿಗಳಿಗೆ ಭವಿಷ್ಯದ ಆತಂಕ
ʻʻಇಲ್ಲಿ ವ್ಯವಸ್ಥೆಗಳು ಚೆನ್ನಾಗಿವೆ. ಆದರೆ, ಕಲಿಕಾ ವ್ಯವಸ್ಥೆ ಇಲ್ಲ. ಉನ್ನತ ಸಂಶೋಧನೆಗೆ ಅವಕಾಶವಿಲ್ಲದೆ ಭವಿಷ್ಯ ಮಸುಕಾಗಿದೆ. ಅಕಾಡೆಮಿಕ್ ದೃಷ್ಟಿಯಿಂದಲೂ ವಿದ್ಯಾರ್ಥಿಗಳಿಗೆ ಭವಿಷ್ಯವಿಲ್ಲ. ಪ್ರಾಧ್ಯಾಪಕರಾಗಲು NET, SLET ಅಗತ್ಯ. ರಾಜ್ಯದ ಬೇರೆ ಯಾವ ವಿವಿಯಲ್ಲಿ RDPR ಕೋರ್ಸ್ ಇಲ್ಲದ್ದರಿಂದ ಸಂಶೋಧನೆಗೂ ಅವಕಾಶ ಕ್ಷೀಣವಾಗಿದೆʼʼ ಎನ್ನುತ್ತಾರೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾಗಿರುವ ಪ್ರಿಯಾಂಕ ಪಾಟೀಲ.