ಓದು, ಬರಹ, ಅಧ್ಯಯನ, ಪ್ರವಚನವೇ ಸಿದ್ದೇಶ್ವರ ಶ್ರೀಗಳ ಜೀವನಶಕ್ತಿಯಾಗಿತ್ತು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯವನ್ನು ಆಯ್ಕೆ ಮಾಡಿಕೊಂಡರು. ತತ್ವಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು. ಎಂ.ಎ. ಪದವಿಯ ಅಭ್ಯಾಸದ ಸಮಯದಲ್ಲಿ ಶ್ರೀಗಳು ಕೊಲ್ಹಾಪುರದಲ್ಲಿ ವಿಜಯ ಪಾಟೀಲರ ಮನೆಯಲ್ಲಿ ವಾಸವಿದ್ದರು. ಆ ಅವಧಿಯಲ್ಲಿಯೇ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ “ಸಿದ್ಧಾಂತ ಶಿಖಾಮಣಿ “ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು. ಆಗ ಅವರಿಗೆ ಕೇವಲ 19 ವರ್ಷ ಮಾತ್ರ ಆಗಿತ್ತು.
ಸಿದ್ದೇಶ್ವರರ ಮಾತು ಎಂದರೆ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಬಲು ಪ್ರೀತಿ. ಆತ ಮಹಾ ಬುದ್ಧಿವಂತ, ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಪರಿಜ್ಞಾನವಿದೆ. ಮುಂದೆ ಜಗತ್ತಿಗೇ ದೊಡ್ಡವನಾಗುತ್ತಾನೆ ಎಂದು ವಿಶ್ವಾಸದಿಂದ ಎಲ್ಲರೆದುರು ಹೇಳುತ್ತಿದ್ದರು. ಸ್ನಾತಕೋತ್ತರ ಪದವಿ ಪಡೆದು ವಿಜಯಪುರಕ್ಕೆ ಹಿಂದಿರುಗಿದ ನಂತರ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ, ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ವ್ಯಾಖ್ಯಾನವನ್ನು ನೀಡಿ ಅವರ ಜ್ಙಾನದಿಗಂತವನ್ನು ವಿಸೃತಗೊಳಿಸಿದರು. ಪೂಜ್ಯರು ಉಪನಿಷತ್ತುಗಳು, ಭಗವದ್ಗೀತೆ,ಯೋಗಸೂತ್ರ,ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಹೇಗೆ ಗುರುಗಳ ಮೂಲಕ ಕಲಿತ ಜ್ಙಾನವನ್ನು ಬಳಸಿಕೊಂಡು ಬೋಧಪ್ರದ ಪ್ರವಚನಗಳನ್ನು ನೀಡುತ್ತಿದ್ದರು. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಉಳಿಯುವಂತೆ ವಿವರಿಸುವುದೇ ಅವರ ವೈಶಿಷ್ಟ್ಯವಾಗಿತ್ತು.
ನಡೆದಾಡುವ ದೇವರು ಎಂದೇ ಭಕ್ತರು ಆರಾಧಿಸುತ್ತಿದ್ದರು…
ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರನ್ನು ಲಕ್ಷಾಂತರ ಭಕ್ತರು ನಡೆದಾಡುವ ದೇವರೆಂದೇ ಆರಾಧಿಸುತ್ತಿದ್ದರು. ಸಿದ್ದೇಶ್ವರ ಶ್ರೀಗಳ ಭಾಷಣ ಮತ್ತು ಪ್ರವಚನಗಳು ಸಾವಿರಾರು ಜನರ ಜೀವನದಲ್ಲಿ ಅದ್ಭುತ ರೂಪಾಂತರವನ್ನು ತಂದಿದೆ. ಶಾಂತಿಯುತ ಮತ್ತು ಸಂತೋಷದ ಜೀವನಕ್ಕೆ ಶ್ರೀಗಳ ಪ್ರವಚನಗಳು ಕಾರಣವಾಗಿದ್ದವು.
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ನುಡಿಮುತ್ತುಗಳನ್ನು ಅನಕ್ಷರಸ್ಥರೂ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದಾಗಿತ್ತು. ಅಷ್ಟೊಂದು ಸರಳವಾಗಿ, ಆದರೆ ಅರ್ಥಪೂರ್ಣವಾಗಿ ಶ್ರೀಗಳ ಪ್ರವಚನ ಇರುತ್ತಿತ್ತು. ಅವರ ಪ್ರವಚನ ಇದೆ ಎಂದರೆ ಬೆಳಗಿನ ಜಾವವೇ ಸಾವಿರಾರು ಮಂದಿ ಬಂದು ಸೇರುತ್ತಿದ್ದರು. ಅವರ ಪ್ರವಚನಗಳನ್ನು ಯೂಟ್ಯೂಬ್ ಮೂಲಕವೂ ಲಕ್ಷಾಂತರ ಮಂದಿ ಪ್ರಪಂಚದಾದ್ಯಂತ ಆಲಿಸಿದ್ದಾರೆ. ತಮ್ಮ ಪದಗಳ ಮೂಲಕ ಸಾವಿರಾರು ಜನರ ಜೀವನದಲ್ಲಿ ಪರಿವರ್ತನೆ ತಂದ ಶ್ರೇಯಸ್ಸು ಸಿದ್ದೇಶ್ವರ ಶ್ರೀಗಳಿಗೆ ಸಲ್ಲುತ್ತದೆ.
ವಿಜಯಪುರದ ಜ್ಞಾನಯೋಗಾಶ್ರಮ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಆಶ್ರಮ ಇದು. ಸಿದ್ದೇಶ್ವರ ಶ್ರೀಗಳ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಇದು ಅತ್ಯಂತ ಪ್ರವರ್ಧಮಾನಕ್ಕೆ ಬಂತು. ಸಿದ್ದೇಶ್ವರ ಶ್ರೀಗಳ ಅವಧಿಯಲ್ಲಂತೂ ಇದು ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳವಾಗಿ ಮಹತ್ವ ಪಡೆಯಿತು..
ಶ್ರೀಗಳು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವೇದಾಂತ, ಗೀತ, ಯೋಗಸೂತ್ರ, ವಚನಗಳ ಕುರಿತಾದ ಶ್ರೀ ಸ್ವಾಮಿಜಿಯವರ ಉಪನ್ಯಾಸಗಳು ಅವುಗಳ ಮೌಲಿಕತೆ ಮತ್ತು ಚಿಂತನೆಗಳಿಗೆ ಹೆಸರುವಾಸಿಯಾಗಿದೆ. ಶ್ರೀ ಸಿದ್ದೇಶ್ವರ ಶ್ರೀಗಳು ಈಗ ದೇಹಾಂತ್ಯವಾಗಿದ್ದರೂ ಅವರ ಪ್ರವಚನಗಳು ಬಹುಕಾಲ ಜೀವಂತವಾಗಿ ಉಳಿಯಲಿವೆ.