ರಾಮನಗರ/ನೆಲಮಂಗಲ: ಮಾಗಡಿ ತಾಲೂಕಿನ ಕಂಚುಗಲ್ಲು ಬಂಡೇಮಠದ ಬಸವಲಿಂಗ ಸ್ವಾಮೀಜಿ (೪೫) ಅವರ ಆತ್ಮಹತ್ಯೆಗೆ ಸಂಬಂಧಿಸಿ ಮೂರು ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ ಸಾವಿಗೆ ಸಂಬಂಧಿಸಿದ ಮಹತ್ವದ ಅಂಶಗಳನ್ನು ಅವರು ಹಂಚಿಕೊಂಡಿದ್ದಾರೆ.
ಐದು ಮಠಗಳ ಉಸ್ತುವಾರಿ ನೋಡಿಕೊಳ್ಳುತ್ತಾ, ಬಂಡೇಮಠದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದ ಸ್ವಾಮೀಜಿ ಅವರು ಜನಾನುರಾಗಿಯಾಗಿ, ಭಕ್ತರ ಪಾಲಿಗೆ ದೇವಾಂಶ ಸಂಭೂತರೆಂಬಂತೆ ಗೌರವವನ್ನು ಪಡೆದಿದ್ದರು. ಅಕ್ಟೋಬರ್ ೨೫ರಂದು ಮಠದಲ್ಲಿ ನಡೆಯಬೇಕಾಗಿದ್ದ ವಿದ್ಯಾರ್ಥಿ ನಿಲಯ, ಅತಿಥಿ ಗೃಹ ಮತ್ತು ಇನ್ನೊಂದು ಕಟ್ಟಡದ ಶಿಲಾನ್ಯಾಸ ಸಮಾರಂಭಕ್ಕೆ ಅತ್ಯಂತ ಜತನದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಅವರು, ಬೆಟ್ಟದ ಮೇಲಿರುವ ಮಹಾಲಿಂಗೇಶ್ವರ ಪೂಜಾ ನಿಲಯದ ಕಿಟಕಿಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಭಾನುವಾರವಷ್ಟೇ ಸ್ಥಳೀಯ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರ ಜತೆ ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಮಾತನಾಡಿದ್ದ ಅವರು ಒಮ್ಮಿಂದೊಮ್ಮೆಗೇ ಆತ್ಮಹತ್ಯೆ ಮಾಡಿದ್ದೇಕೆ ಎಂಬ ಪ್ರಶ್ನೆ ಮಠದ ಭಕ್ತರನ್ನು ತೀವ್ರವಾಗಿ ಕಾಡುತ್ತಿದೆ.
ಮಠದಲ್ಲೇ ಬೆಳೆದವರು
ಎಲ್ಲರ ಪ್ರೀತಿ ಪಾತ್ರರಾಗಿದ್ದ ಸ್ವಾಮೀಜಿ ಅವರು ೧೯೭೭ರಲ್ಲಿ ಜನಿಸಿದ್ದರು. ಮರಿಗಂಗಪ್ಪ ಮತ್ತು ಪುಟ್ಟಗೌರಮ್ಮ ದಂಪತಿಯ 8 ಮಕ್ಕಳಲ್ಲಿ ಒಬ್ಬರಾಗಿದ್ದ ಇವರು ಮರಿ ಸ್ವಾಮಿಯಾಗಿ ಮಠ ಪ್ರವೇಶ ಮಾಡಿದ್ದರು. 8ನೇ ತರಗತಿವರೆಗೂ ಬಂಡೇಮಠದಲ್ಲಿಯೇ ಅಭ್ಯಾಸ ಮಾಡಿದ್ದ ಶ್ರೀಗಳು ಬಳಿಕ ಶ್ರೀ ಸಿದ್ದಗಂಗಾ ಮಠದಲ್ಲಿ ಅಭ್ಯಾಸವನ್ನು ಮುಂದುವರಿಸಿದ್ದರು. ವೇದ, ಉಪನಿಷತ್, ವಿದ್ವತ್ ವ್ಯಾಸಂಗ ಮಾಡಿದ್ದ ಅವರು, ಸಿದ್ದಗಂಗಾ ಮಠದಲ್ಲೇ ಶ್ರೀಗಳಿಂದ ದೀಕ್ಷೆ ಪಡೆದಿದ್ದರು.
ಹಲವು ಅಭಿವೃದ್ಧಿ ಕಾರ್ಯಗಳ ರೂವಾರಿ
1997ರಲ್ಲಿ ಬಂಡೇಮಠದ ಅಧ್ಯಕ್ಷರಾಗಿ ಪೀಠವನ್ನೇರಿದ್ದ ಶ್ರೀಗಳು ಇತ್ತೀಚೆಗಷ್ಟೇ ತಮ್ಮ ಪೀಠಾರೋಹಣದ ೨೫ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದರು. ಪೀಠಾಧ್ಯಕ್ಷರಾದ ದಿನದಿಂದಲೂ ಅನ್ನ, ಅಕ್ಷರ ದಾಸೋಹ ಮಾಡುತ್ತಿದ್ದ ಶ್ರೀಗಳು ಬಂಡೇಮಠ ಮತ್ತು ಭಕ್ತರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು. ಮೂರು ಪ್ರಮುಖ ಯೋಜನೆಗಳ ಶಂಕುಸ್ಥಾಪನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಮಠದ ಐದು ಶಾಖೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು.
ದೇಹ ತೂಕವೇ ಶ್ರೀಗಳಿಗೆ ಭಾರವಾಗಿತ್ತು
ಶ್ರೀಗಳು ಬರೆದಿರುವ ಡೆತ್ ನೋಟ್‌ನಲ್ಲಿ ಏನಿದೆ ಎನ್ನುವುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲರ ಪ್ರೀತಿ ಪಾತ್ರರಾಗಿದ್ದ ಶ್ರೀಗಳಿಗೆ ಸಾಯುವಷ್ಟು ನೋವು ತಂದ ಸಂಗತಿ ಯಾವುದು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಮೇಲ್ನೋಟಕ್ಕೆ ಕಾಣುವಂತೆ ಅವರು ಅತಿಯಾದ ದೇಹ ಭಾರಿಂದ ಸ್ವಲ್ಪ ಮಟ್ಟಿಗೆ ಕುಗ್ಗಿದ್ದರು. ಆರೋಗ್ಯ ಸಮಸ್ಯೆ ಅವರನ್ನು ಸಣ್ಣಮಟ್ಟಿಗೆ ಕಾಡುತ್ತಿತ್ತು. ದೇಹ ತೂಕ ಕಡಿಮೆ ಮಾಡಿಕೊಳ್ಳಲು ವೈದ್ಯರು ಸೂಚಿಸಿದ್ದರಿಂದ ಆ ಕಡೆಗೆ ಗಮನ ಹರಿಸಿದ್ದರು. ಹರ್ಬಲ್ ಲೈಫ್ ಪೌಡರ್ ತೆಗೆದುಕೊಳ್ಳುತ್ತಿದ್ದರು. ದೈಹಿಕ ವ್ಯಾಯಾಮ ಮಾಡುತ್ತಿದ್ದು, ಆಹಾರ ಪದ್ಧತಿ ಬದಲಾಯಿಸಿಕೊಂಡಿದ್ದರು. ಇದರಿಂದಾಗಿ ಅವರ ದೇಹ ತೂಕವೂ ಸಾಕಷ್ಟು ಇಳಿದಿತ್ತು.
ಇತ್ತೀಚೆಗೆ ಖಿನ್ನತೆ ಆವರಿಸಿತ್ತು?
ದೇಹದ ಆರೋಗ್ಯದ ಬಗ್ಗೆ ಗಮನ ಇಟ್ಟಿದ್ದ ಶ್ರೀಗಳನ್ನು ಇತ್ತೀಚಿನ ದಿನಗಳಲ್ಲಿ ಖಿನ್ನತೆ ಆವರಿಸಿತ್ತು ಎಂದು ಹೇಳಲಾಗುತ್ತಿದೆ. ಅವರು ಹೆಚ್ಚು ಅಂತರ್ಮುಖಿಯಾಗಿದ್ದರು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಜನರ ಪಾಲಿಗೆ ಉತ್ತಮ ಮಾರ್ಗದರ್ಶಕರಾಗಿದ್ದ ಅವರ ಸಾವು ಭಕ್ತರನ್ನು ಕಂಗೆಡಿಸಿದೆ.
ಮಧ್ಯಾಹ್ನ ೩.೩೦ಕ್ಕೆ ಅಂತ್ಯಕ್ರಿಯೆ
ಮಠದ ಕೊಠಡಿಯಲ್ಲಿ ಕಿಟಕಿಯ ಸರಳಿಗೆ ನೇಣು ಬಿಗಿದುಕೊಂಡ ಪ್ರಾಣ ಕಳೆದುಕೊಂಡ ಅವರ ಪಾರ್ಥಿವ ಶರೀರವನ್ನು ಮಠದ ಆಂಬ್ಯುಲೆನ್ಸ್ ಆಗಿರುವ ಕೈಲಾಸ ರಥ ವಾಹನದಲ್ಲೇ ನೆಲಮಂಗಲಕ್ಕೆ ಒಯ್ಯಲಾಗಿತ್ತು. ಇಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮಧ್ಯಾಹ್ನ ೩.೩೦ಕ್ಕೆ ಮಠದ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಲಿಂಗಾಯದ ಮಠಪರಂಪರೆ ಸಂಪ್ರದಾಯದಂತೆ ಶ್ರೀಗಳ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ನಡೆಯಲಿವೆ. ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರು ನೆಲಮಂಗಲ ಶವಾಗಾರಕ್ಕೆ ಆಗಮಿಸಿ ಶ್ರೀಗಳ ಅಂತಿಮ ದರ್ಶನ ಮಾಡಿ ಮುಂದಿನ ಕ್ರಮಗಳ ಬಗ್ಗೆ ಸೂಚನೆ ನೀಡಿದರು.
ಮೊದಲ ವರದಿ | ಕಂಚುಗಲ್ ಬಂಡೇಮಠದ ಸ್ವಾಮೀಜಿ ಮಠದಲ್ಲೇ ನೇಣಿಗೆ ಶರಣು