ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಸರ್ಕಾರದ (Karnataka Congress Government) ಒಳಜಗಳಗಳು ಹೆಚ್ಚು ಸದ್ದು ಮಾಡುತ್ತಿವೆ. ಸಿಎಂ ಬದಲಾವಣೆ, ಪೂರ್ಣಾವಧಿ ಸಿಎಂ ಸೇರಿದಂತೆ ಹಲವು ಗೊಂದಲಗಳ ಮಧ್ಯೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಬ್ರೇಕ್ ಫಾಸ್ಟ್ ಮೀಟಿಂಗ್ (Breakfast Meeting) ನಡೆಸುವುದಕ್ಕೆ ಕಾರಣ ಹೈಕಮಾಂಡ್ (Congress High Command) ಸೂಚನೆಯಾಗಿದೆ. ಸಿಎಂ ಕಾವೇರಿ ನಿವಾಸದಲ್ಲಿ (CM Kaveri Nivas) ಹೊಸದಾಗಿ ಮೀಟಿಂಗ್ ಹಾಲ್ ಒಂದನ್ನು ಕಟ್ಟಲಾಗಿದ್ದು, ಅದರ ಪ್ರಾರಂಭಕ್ಕೆ ಉಪಾಹಾರ ಸಭೆಯನ್ನು ಕರೆದಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಈ ಸರ್ಕಾರದಲ್ಲಿ ಗೊಂದಲಕ್ಕೆ ಕಾರಣವಾಗಿರುವ ಸಚಿವರನ್ನು ಕರೆಸಿ ಸಮಾಧಾನ ಪಡಿಸುವುದು ಹಾಗೂ ಮುಂದೆ ಮುಜುಗರ ತರದಂತೆ ನಡೆದುಕೊಳ್ಳುವಂತೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಈ ಸಭೆಯ ಪ್ರಮುಖಾಂಶವಾಗಿದೆ.
ಸಚಿವರ ಜತೆ ಸಮಾಲೋಚನೆ ನಡೆಸುವಂತೆ ಸಿಎಂಗೆ ಹೈಕಮಾಂಡ್ ಸೂಚನೆ ನೀಡಿದೆ. ಪರಸ್ಪರ ಸಮಾಲೋಚಿಸಿ ಗೊಂದಲ ಬಗೆಹರಿಸಿಕೊಂಡು ಚುನಾವಣೆಗೆ ತಯಾರಾಗುವಂತೆ ತಾಕೀತು ಮಾಡಿದೆ ಎನ್ನಲಾಗಿದೆ. ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವರ ಜತೆ ಸಿಎಂ ಸಿದ್ದರಾಮಯ್ಯ ಚರ್ಚೆಗೆ ಮುಂದಾಗಿದ್ದಾರೆ.
ಗೊಂದಲಕ್ಕೆ ಕಾರಣರಾಗಿರುವ ಪ್ರಮುಖ ಸಚಿವರ ಜತೆ ಮೊದಲ ಹಂತದ ಉಪಾಹಾರ ಸಭೆಯನ್ನು ಸಿಎಂ ನಡೆಸುತ್ತಿದ್ದಾರೆ. ಚುನಾವಣೆ ತಯಾರಿ ಬಗ್ಗೆ ಚರ್ಚೆ ನಡೆಸುವುದರ ಜತೆಗೆ ಗ್ಯಾರಂಟಿಗಳ ಯಶಸ್ಸುಗೊಳಿಸಲು ಆದಾಯ ಮೂಲ ತರುವಂತಹ ಪ್ರಭಾವಿ ಹಾಗೂ ಪ್ರಮುಖ ಖಾತೆ ಹೊಂದಿರುವ ಇಲಾಖಾ ಸಚಿವರ ಜತೆ ಸಿಎಂ ಚರ್ಚೆ ನಡೆಸಿದ್ದಾರೆ.
ಸದ್ಯ ಐದೂವರೆ ತಿಂಗಳಲ್ಲಿ ಡ್ಯಾಮೇಜ್ ಮಾಡಿದ ಪ್ರಮುಖ ಗೊಂದಲಗಳನ್ನು ಬಗೆಹರಿಸಲು ಸಿಎಂ ಕಸರತ್ತು ನಡೆಸುತ್ತಿದ್ದಾರೆ. ಅಧಿಕಾರ ಹಂಚಿಕೆ ಸೂತ್ರದ ಗೊಂದಲ ಬಗೆಹರಿಸಿಕೊಳ್ಳುವುದು, ಡಿಸಿಎಂ ವರ್ಸಸ್ ಸತೀಶ್ ಜಾರಕಿಹೊಳಿ ನಡುವಿನ ಗೊಂದಲ ಹಾಗೂ ಸಂಘರ್ಷಕ್ಕೆ ತೆರೆ ಎಳೆಯುವುದು. ಪರಮೇಶ್ವರ್ ನಿವಾಸದಲ್ಲಿ ನಡೆದ ಡಿನ್ನರ್ ಸಭೆಯ ಬಳಿಕ ಸೃಷ್ಟಿಯಾದ ಗೊಂದಲಗಳಿಗೆ ತೆರೆ ಎಳೆಯುವುದು. ಶಾಸಕರ ಬೇಕಾಬಿಟ್ಟಿ, ಗೊಂದಲಕಾರಿ, ಮುಜುಗರಭರಿತ ಹೇಳಿಕೆಗಳಿಗೆ ಕಡಿವಾಣ ಹಾಕುವುದು ಈ ಸಭೆಯ ಹಿಂದಿನ ಪ್ರಮುಖ ಉದ್ದೇಶವಾಗಿವೆ.
ಲೋಕಸಭೆ ಚುನಾವಣೆಗೆ ಸಂಪನ್ಮೂಲ ಹೊಂದಿಸುವುದು, ಪಕ್ಷ ಸಂಘಟನೆ, ಚುನಾವಣಾ ತಯಾರಿ ಮಾಡಿಕೊಳ್ಳುವುದು, ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು, ಮನೆ ಮನೆಗೆ ಗ್ಯಾರಂಟಿಗಳನ್ನು ತಲುಪಿಸುವ ಬಗ್ಗೆ, ಜನರಲ್ಲಿ ಜಾಗೃತಿ ಮೂಡಿಸಿ ಜನರನ್ನು ಪಕ್ಷದತ್ತ ಸೆಳೆಯಲು ಏನೆಲ್ಲ ಮಾಡಬಹುದು ಎಂಬ ನಿಟ್ಟಿನಲ್ಲಿ ತಂತ್ರಗಾರಿಕೆ ಹೆಣೆಯಲು ಸಿಎಂ ಪ್ಲ್ಯಾನ್ ಮಾಡಿದ್ದಾರೆ.
ಮೀಟಿಂಗ್ ಹಾಲ್ ಉದ್ಘಾಟನೆ ಇನ್ನೊಂದು ಕಾರಣವಾ?
ಸಿಎಂ ಕಾವೇರಿ ನಿವಾಸದಲ್ಲಿ ಹೊಸದಾಗಿ ಮೀಟಿಂಗ್ ಹಾಲ್ ಒಂದನ್ನು ಕಟ್ಟಲಾಗಿದ್ದು, ಅದರ ಪ್ರಾರಂಭಕ್ಕೆ ಉಪಾಹಾರ ಸಭೆಯನ್ನು ಕರೆದಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದ ನವೀಕರಣ ಸಮಯದಲ್ಲಿ ಮೀಟಿಂಗ್ ಹಾಲ್ ಒಂದನ್ನು ಹೊಸದಾಗಿ ನಿರ್ಮಿಸಲಾಗಿದೆ. ಸಚಿವರ ಸಮ್ಮುಖದಲ್ಲಿ ಈ ಮೀಟಿಂಗ್ ಹಾಲ್‌ಗೆ ಸಿಎಂ ಚಾಲನೆ ನೀಡಿದ್ದಾರೆ ಎನ್ನಲಾಗಿದೆ.
ಡಿಸಿಎಂ ಸೇರಿ 15 ಸಚಿವರು ಭಾಗಿ
- ಡಿಸಿಎಂ ಡಿಕೆ ಶಿವಕುಮಾರ್
- ಗೃಹ ಸಚಿವ ಡಾ.ಜಿ ಪರಮೇಶ್ವರ್
- ಪ್ರಿಯಾಂಕ್ ಖರ್ಗೆ
- ಎನ್ ಎಸ್ ಬೋಸರಾಜು
- ದಿನೇಶ್ ಗುಂಡೂರಾವ್
- ಜಮೀರ್ ಅಹಮದ್ ಖಾನ್
- ಕೃಷ್ಣ ಬೈರೆಗೌಡ
- ರಾಮಲಿಂಗಾ ರೆಡ್ಡಿ
- ಸಂತೋಷ್ ಲಾಡ್
- ಎಂ.ಬಿ. ಪಾಟೀಲ್ ಆಗಮನ
- ಸಚಿವ ಕೆ.ಎನ್. ರಾಜಣ್ಣ
- ಸಚಿವ ಬೈರತಿ ಸುರೇಶ್
- ಎಚ್.ಸಿ. ಮಹದೇವಪ್ಪ
- ಕೆ.ಎಚ್. ಮುನಿಯಪ್ಪ
- ಈಶ್ವರ್ ಖಂಡ್ರೆ
ಗೈರಾದ ಸಚಿವರು
- ಕೆ ಜೆ ಚಾರ್ಜ್
- ಆರ್ ಬಿ ತಿಮ್ಮಾಪುರ್
- ಲಕ್ಷ್ಮಿ ಹೆಬ್ಬಾಳ್ಕರ್
- ನಾಗೇಂದ್ರ
- ಚಲುವರಾಯಸ್ವಾಮಿ
- ಶರಣಪ್ರಕಾಶ್ ಪಾಟೀಲ್
- ರಹೀಂ ಖಾನ್
- ಎಂ.ಸಿ. ಸುಧಾಕರ್
- ಡಿ ಸುಧಾಕರ್
- ಪಿರಿಯಾಪಟ್ಟಣ ವೆಂಕಟೇಶ್
- ಮಧು ಬಂಗಾರಪ್ಪ
- ಮಂಕಾಳ ವೈದ್ಯ
- ಶಿವಾನಂದ ಪಾಟೀಲ್
- ಸತೀಶ್ ಜಾರಕಿಹೊಳಿ
- ಎಚ್.ಕೆ. ಪಾಟೀಲ್
- ಎಸ್.ಎಸ್. ಮಲ್ಲಿಕಾರ್ಜುನ
- ಶಿವರಾಜ್ ತಂಗಡಗಿ
ಇದನ್ನೂ ಓದಿ: Vistara Kannada Sambhrama : ʼವಿಸ್ತಾರ ಕನ್ನಡ ಸಂಭ್ರಮʼ ಹಬ್ಬಕ್ಕೆ ಅದ್ಧೂರಿ ಪ್ರಾರಂಭ
ಈ ಎಲ್ಲ ಸಚಿವರು ಗೈರಾಗಿದ್ದಾರೆ. ಆದರೆ, ಇವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ರೇಕ್ ಫಾಸ್ಟ್ ಮೀಟಿಂಗ್‌ಗೆ ಆಹ್ವಾನ ನೀಡಿದ್ದಾರೋ ಇಲ್ಲವೋ ಎಂಬುದು ಮಾತ್ರ ಸ್ಪಷ್ಟತೆ ಇಲ್ಲ.