Site icon Vistara News

Electricity Bill: ರಾಜ್ಯದ ವಿವಿಧೆಡೆ ವಿದ್ಯುತ್‌ ಬಿಲ್ ಕಟ್ಟಲು ನಕಾರ; ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ ಜನ

Chamarajanagar People refuse to pay electricity bill

Chamarajanagar People refuse to pay electricity bill

ಚಾಮರಾಜನಗರ: ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್‌ ವಿದ್ಯುತ್‌ ಉಚಿತ ಎಂದು ಕಾಂಗ್ರೆಸ್‌ ನಾಯಕರು ಭರವಸೆ ನೀಡಿದ್ದರು. ಆದರೆ, ಇನ್ನೂ ಮುಖ್ಯಮಂತ್ರಿ ಯಾರೆಂದು ತೀರ್ಮಾನವಾಗುವುದಕ್ಕೂ ಮುನ್ನ ವಿವಿಧೆಡೆ ಜನರು, ತಾವು ವಿದ್ಯುತ್‌ ಬಿಲ್‌ ಕಟ್ಟೋದಿಲ್ಲ ಎಂದು ಹೇಳುತ್ತಿರುವುದು ಕಂಡುಬಂದಿದೆ. ಅದೇ ರೀತಿ ಬುಧವಾರ ಚಾಮರಾಜನಗರ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಯ ವಿವಿಧೆಡೆ ಬುಧವಾರ, ಕರೆಂಟ್‌ ಬಿಲ್‌ ಕಟ್ಟಲು ನಿರಾಕರಿಸಿ, ವಿದ್ಯುತ್‌ ಸರಬರಾಜು ಕಂಪನಿ ಸಿಬ್ಬಂದಿ ವಿರುದ್ಧ ಜನರು ವಾಗ್ವಾದ ನಡೆಸಿದ್ದಾರೆ.

200 ಯುನಿಟ್‌ಗಿಂತ ಅಧಿಕ ವಿದ್ಯುತ್ ಬಳಸುವವರಿಗೆ ಮಾತ್ರ ಬಿಲ್ ಕೊಡಿ

ಚಾಮರಾಜನಗರ: ತಾಲೂಕಿನ ಹೊನ್ನೂರು ಗ್ರಾಮದಲ್ಲಿ ವಿದ್ಯುತ್‌ ಬಿಲ್ ಪಾವತಿಸಿಕೊಳ್ಳಲು ಬಂದ ವಿದ್ಯುತ್‌ ಸಿಬ್ಬಂದಿಯನ್ನು ಜನರು ವಾಪಸ್‌ ಕಳುಹಿಸಿರುವ ಘಟನೆ ನಡೆದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ ಎಂದಿದ್ದಾರೆ. 200 ಯುನಿಟ್‌ಗಿಂತ ಅಧಿಕ ವಿದ್ಯುತ್ ಬಳಸುವವರಿಗೆ ಮಾತ್ರ ಬಿಲ್ ನೀಡಬೇಕು ಗ್ರಾಮದ ಕೆಲವರು ಹೇಳಿದ್ದಾರೆ.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಆಡಿದ ಮಾತಿನಂತೆ ಕಾಂಗ್ರೆಸ್ ನಾಯಕರು ನಡೆದುಕೊಳ್ಳಬೇಕು. ಸಿಎಂ ಯಾರೇ ಆಗಲಿ ನಮಗೆ ಅದು ಬೇಕಿಲ್ಲ. ಕೂಡಲೇ ಕ್ಯಾಬಿನೆಟ್ ಮೀಟಿಂಗ್ ಕರೆದು ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳದಂತೆ ಆದೇಶ ಹೊರಡಿಸಬೇಕು. ಕಾಂಗ್ರೆಸ್ ನಾಯಕರು ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿದ್ಯುತ್ ಬಿಲ್ ನೀಡಲು ತೆರಳಿದ್ದ ಸಿಬ್ಬಂದಿಗೆ ಮಹಿಳೆ ತರಾಟೆ

ರಾಯಚೂರು: ವಿದ್ಯುತ್ ಬಿಲ್ ನೀಡಲು ತೆರಳಿದ್ದ ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಹೂವಿನಬಾವಿ ಗ್ರಾಮದಲ್ಲಿ ನಡೆದಿದೆ. ಮಹಿಳೆಯೊಬ್ಬರ ಮನೆಗೆ ತೆರಳಿ ವಿದ್ಯುತ್ ಬಿಲ್ ಕಟ್ಟುವಂತೆ ಜೆಸ್ಕಾಂ ಸಿಬ್ಬಂದಿ ಕೇಳಿದಾಗ, ಕಾಂಗ್ರೆಸ್ ಶಾಸಕ ಬಸನಗೌಡ ತುರ್ವಿಹಾಳ ಪ್ರಚಾರಕ್ಕೆ ಬಂದಾಗ ಫ್ರೀ ಅಂದಿದ್ದ. ಏನು ಬಿಲ್ ಕಟ್ಡಬೇಡ ಅಂದಿದ್ದ. ಗೆಲ್ಲೊವರೆಗೂ ಒಂದು, ಗೆದ್ದ ಮೇಲೆ‌ ಮತ್ತೊಂದಾ ಎಂದು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ | ಕರೆಂಟ್‌ ಬಿಲ್‌ ಕಟ್ಟುವುದಿಲ್ಲ ಎಂದು ಮೀಟರ್‌ಗೆ ಬೋರ್ಡ್‌ ಹಾಕಿದ ಸಾಮಾಜಿಕ ಕಾರ್ಯಕರ್ತ!

ಕರೆಂಟ್ ಬಿಲ್ ಕಟ್ಟಂಗಿಲ್ರಿ‌ ಸರ್,‌ ಕಾಂಗ್ರೆಸ್ ಸರ್ಕಾರ ಎಲ್ಲ ಫ್ರೀ ಫ್ರೀ ಅಂದಾದಲ್ರಿ?

ಕಲಬುರಗಿ: ವಿದ್ಯುತ್‌ ಬಿಲ್ ಕಟ್ಟಮ್ಮ ಎಂದ ಜೆಸ್ಕಾಂ ಸಿಬ್ಬಂದಿ ವಿರುದ್ಧ ಮಹಿಳೆ ಕಿಡಿಕಾರಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಯಾರೂ ಬಿಲ್ ಕಟ್ಟಂಗಿಲ್ಲ ಅಂತ ಹೇಳಿಯೇ ನಮ್ಮಿಂದ ಕಾಂಗ್ರೆಸ್‌ನವರು ವೋಟು ಹಾಕಿಸಿಕೊಂಡರು. ಹಾಗಾದರೆ ಕಾಂಗ್ರೆಸ್ ಹೇಳಿದ್ದು ಬೋಗಸ್ಸಾ ಎಂದು ಮಹಿಳೆ ಪ್ರಶ್ನಿಸಿದ್ದಾರೆ.

ಬಿಲ್ ಕಟ್ಟಲ್ಲ ಎಂದಿದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತ ಮಾಡಲು ಮುಂದಾಗಿದ್ದ ಜೆಸ್ಕಾಂ ಸಿಬ್ಬಂದಿ ವಿರುದ್ಧ ಮಹಿಳೆ ಆಕ್ರೋಶ ಹೊರಹಾಕಿದ್ದು, ಕರೆಂಟ್ ಬಿಲ್ ಕಟ್ಟಂಗಿಲ್ರಿ‌ ಸರ್, ಕಾಂಗ್ರೆಸ್ ಸರ್ಕಾರ ಎಲ್ಲ ಫ್ರೀ ಫ್ರೀ ಅಂದಾದಲ್ರಿ? ಅದು ಹೇಗೆ ಕರೆಂಟ್ ಕನೆಕ್ಷನ್ ಕಟ್ ಮಾಡುತ್ತೀರೋ ಮಾಡಿ, ಜೂನ್‌ನಿಂದ ಕಾಂಗ್ರೆಸ್‌ನವರು ಬಿಲ್ ಕಟ್ಟಬೇಡಿ ಎಂದಿದ್ದಾರೆ. ಯಾರು ಬರುವರೋ ಬರಲಿ ನಾವಂತೂ ಬಿಲ್ ಕಟ್ಟಂಗಿಲ್ಲ ಎಂದು ಮಹಿಳೆ ಹೇಳಿದ್ದಾರೆ.

Exit mobile version