ಬೆಂಗಳೂರು: ಆರ್ಥಿಕ ನಷ್ಟದಿಂದಾಗಿ ಸ್ಥಗಿತಗೊಂಡಿದ್ದ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಪುನಸ್ಥಾಪನೆ ಮಾಡಿ ೩೦ ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಬಾಕಿ ಹಣವನ್ನು ಹಾಗೂ ದುಡಿಯುವ ಬಂಡವಾಳವನ್ನು ಶೀಘ್ರವೇ ಬಿಡುಗಡೆ ಮಾಡಿ ರೈತರಿಗೆ ಎದುರಾಗಿರುವ ಆತಂಕವನ್ನು ದೂರ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ನಾಯಕರ ಒತ್ತಾಯದ ಮೇರೆಗೆ ಕಾರ್ಖಾನೆಯ ಪುನಾರಂಭಕ್ಕೆ 50 ಕೋಟಿ ರೂಪಾಯಿ ನೀಡುವುದಾಗಿ ಕಳೆದ ಸಾಲಿನ ಆಯವ್ಯಯದಲ್ಲಿ ಸರ್ಕಾರ ಘೋಷಣೆ ಮಾಡಿ ಅದರಂತೆ ೩೦ ಕೋಟಿ ರೂಪಾಯಿ ಅನುದಾನವನ್ನೂ ಬಿಡುಗಡೆ ಮಾಡಿತ್ತು. ಅಲ್ಲದೆ, ಈ ತಿಂಗಳ ಆರಂಭದಲ್ಲಿ ಪ್ರಾಯೋಗಿಕವಾಗಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿದೆ. ಆದರೆ, ಕಾರ್ಖಾನೆಗೆ ರೈತರು ಕಬ್ಬು ಸರಬರಾಜು ಮಾಡಲು ಹಿಂಜರಿಯುತ್ತಿದ್ದಾರೆ ಎಂದು ದಿನೇಶ್ ಗೂಳಿಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಕಬ್ಬು ಸರಬರಾಜು ಮಾಡಿದ ನಂತರ ಹಣ ಪಾವತಿಯ ಬಗ್ಗೆ ರೈತರಿಗೆ ಆತಂಕ ಎದುರಾಗಿದೆ. ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಸಂಬಂಧ ಬ್ಯಾಂಕುಗಳ ಮೂಲಕ ದುಡಿಯುವ ಬಂಡವಾಳ ಪಡೆಯಬೇಕು. ಇದಕ್ಕೆ ಇರುವ ಅಡೆತಡೆಗಳನ್ನು ನಿವಾರಣೆ ಮಾಡಬೇಕು. ಪ್ರಸ್ತುತ ಕಾರ್ಖಾನೆ ವೆಚ್ಚಗಳು ಸೇರಿ ರೈತರಿಗೆ ಹಣ ಪಾವತಿ ಮಾಡಬೇಕಿರುವುದರಿಂದ ಸರ್ಕಾರ ಕೂಡಲೇ ಬಾಕಿಯುಳಿದ 20 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲು ಸಂಬಂಧಪಟ್ಟವರಿಗೆ ಆದೇಶ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಮದ್ದೂರು ಗ್ರಾಪಂ ಸದಸ್ಯರ ಸಮಸ್ಯೆ ಬಗೆಹರಿಸಿ; ಸಿಎಂಗೆ ಪತ್ರ ಬರೆದ ಎಂಎಲ್‌ಸಿ ದಿನೇಶ್ ಗೂಳಿಗೌಡ