ಬೆಂಗಳೂರು: ಚರ್ಮ ಗಂಟು ರೋಗದಿಂದ ಜಾನುವಾರು ಮೃತಪಟ್ಟರೆ ಪರಿಹಾರ ಧನ ನೀಡಲು ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದ್ದು, ಪರಿಹಾರಧನ ವಿತರಣೆಗಾಗಿ 2 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಚರ್ಮಗಂಟು ರೋಗದಿಂದ(Lumpy Skin Disease) ಮರಣಿಸುವ ಪ್ರತಿ ಕರುವಿಗೆ 5 ಸಾವಿರ ರೂಪಾಯಿ, ಹಸುವಿಗೆ 20 ಸಾವಿರ ರೂಪಾಯಿ, ಎತ್ತು ಮೃತಪಟ್ಟರೆ 30 ಸಾವಿರ ರೂಪಾಯಿ ಪರಿಹಾರ ಧನ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಮರಣಿಸಿದ ಜಾನುವಾರುಗಳ ಮಾಲೀಕರಿಗೆ ಪರಿಹಾರ ಧನವನ್ನು ವಿತರಣೆಗೆ ಮಾರ್ಗಸೂಚಿ:
- ಚರ್ಮಗಂಟು ರೋಗಕ್ಕೆ ತುತ್ತಾಗಿ ಮರಣ ಹೊಂದಿದ ಜಾನುವಾರುವಿನ ಚಿಕಿತ್ಸಾ ಮಾಹಿತಿಯನ್ನು ಆಧರಿಸಿ ಸಂಬಂಧಪಟ್ಟ ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಜಾನುವಾರುವಿನ ಮರಣ ದೃಢೀಕರಣ ಪತ್ರ ಹೊಂದಿರುವುದು.
- ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರು ವಿಮಾ ಸೌಲಭ್ಯ ಹೊಂದಿದಲ್ಲಿ ಮರಣ ಪರಿಹಾರ ಧನವನ್ನು ಪಾವತಿಸತಕ್ಕದ್ದಲ್ಲ.
- ಪರಿಹಾರ ಧನವನ್ನು ಜಾನುವಾರು ಮಾಲೀಕರ ಆಧಾರ್ ಸಂಖ್ಯೆ ಜೋಡಿಸಲ್ಪಟ್ಟಿರುವ ಬ್ಯಾಂಕ್ ಖಾತೆಗೆ RTGS/NEFT ಮುಖಾಂತರ ನೇರವಾಗಿ ಪಾವತಿಸುವುದು.
- ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರುವಿನ ಸೂಕ್ತ ಛಾಯಚಿತ್ರಗಳು ಹಾಗೂ ಯುಐಡಿ ಇಯರ್ ಟ್ಯಾಗ್ ನೀಡಬೇಕಾಗುತ್ತದೆ.
- 2022ರ ಆಗಸ್ಟ್ 1 ರಿಂದ ಈ ಆದೇಶವನ್ನು ಹೊರಡಿಸಿದ ದಿನಾಂಕದವರೆಗೂ ಚರ್ಮಗಂಟುರೋಗದಿಂದ ಮರಣಿಸಿದ ಜಾನುವಾರುಗಳ ಛಾಯಚಿತ್ರಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಮರಣಿಸಿದ ಜಾನುವಾರುಗಳ ಮಾಲೀಕರಿಗೆ ಛಾಯಚಿತ್ರಗಳನ್ನು ಒದಗಿಸುವಂತೆ ಒತ್ತಾಯಿಸುವಂತಿಲ್ಲ.
- 2022ರ ಆಗಸ್ಟ್ 1 ರಿಂದ ಈ ಆದೇಶವನ್ನು ಹೊರಡಿಸಿದ ದಿನಾಂಕದವರೆಗೂ ಪಶುವೈದ್ಯಾಧಿಕಾರಿಗಳ ಗಮನಕ್ಕೆಬಾರದೇ ಚರ್ಮಗಂಟು ರೋಗಕ್ಕೆ ತುತ್ತಾಗಿ ಮರಣ ಹೊಂದಿ ಅಂತ್ಯಕ್ರಿಯೆಗೊಂಡಿದ್ದ ಪಕ್ಷದಲ್ಲಿ, ಸ್ಥಳೀಯ ವಶುವೈದ್ಯಾಧಿಕಾರಿಗಳು ಸಂಬಂಧಪಟ್ಟ ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಮೂರು ಜನ ಸ್ಥಳೀಯ ಗ್ರಾಮಸ್ಥರ ಸಮಕ್ಷಮದಲ್ಲಿ ಪಂಚನಾಮೆ ಮಾಡಿ ಸದರಿ ಕಾಯಿಲೆಯಿಂದಲೇ ಜಾನುವಾರು ಮರಣ ಹೊಂದಿರುವುದಾಗಿ ಖಚಿತಪಟ್ಟಲ್ಲಿ ಅನುಬಂಧದಲ್ಲಿರುವಂತೆ ದೃಢೀಕರಣ ಪತ್ರ ನೀಡುವುದು.
ಈ ಅನುದಾನವನ್ನು ನಿಯಮಾನುಸಾರ ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸಿಕೊಂಡು ಕಡ್ಡಾಯವಾಗಿ ಹಣಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ತಿಳಿಸಿದೆ.
ಇದನ್ನೂ ಓದಿ | ಕ್ರೀಡೆಗೆ ಒತ್ತು ನೀಡುವುದೇ ನಮ್ಮ ಮುಖ್ಯ ಧ್ಯೇಯ: ನಮ್ಮ ಕ್ರೀಡಾ ಹಬ್ಬ ಕಾರ್ಯಕ್ರಮದಲ್ಲಿ ಕೃಷ್ಣ ಭೈರೇಗೌಡ