ಧಾರವಾಡ: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈಗ ಎಲ್ಲ ಮಠಕ್ಕೆ ಹೋಗಿ, ದೀರ್ಘದಂಡ ನಮಸ್ಕಾರ ಮಾಡುತ್ತಿದ್ದಾರೆ. ಅವರು ನಾಟಕ ಮಾಡುತ್ತಿರುವುದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹಾಗೂ ಶೃಂಗೇರಿ ಸ್ವಾಮೀಜಿಗಳಿಗೂ ಗೊತ್ತು (Religion Politics) ಎಂದು ಸಿದ್ದರಾಮಯ್ಯ ವಿರುದ್ಧ ಧಾರವಾಡದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.
ಎಲ್ಲ ಮಠಾಧೀಶರಿಗೂ ಈ ರಾಜಕಾರಣಿಗಳ ನಾಟಕ ಗೊತ್ತಿದೆ. ಚುನಾವಣೆ ಎದುರಾದರೆ ಮಠ, ಮಂದಿರಗಳಿಗೆ ಹೋಗಲು ಮುಂದಾಗುತ್ತಾರೆ. ಸಿದ್ದರಾಮಯ್ಯ ನಾಸ್ತಿಕರು, ದೇವರನ್ನು ನಂಬದವರು, ಕುಂಕುಮ ಹಚ್ಚಿದವರನ್ನು ನೋಡಿದರೆ ಹೊಟ್ಟೆ ಉರಿ ಜತೆಗೆ ಕೇಸರಿ ಬಟ್ಟೆ ಕಂಡರೆ ಬೆಂಕಿ ಬಿದ್ದಂತೆ ಆಗುತ್ತದೆ. ಹೀಗಿರುವಾಗ ಅವರು ಯಾಕೆ ಮಠಕ್ಕೆ ಹೋಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ಸುದ್ದಿಗಾರರ ಬಳಿ ತಿಳಿಸಿದರು.
ಮತಕ್ಕಾಗಿ, ಅಧಿಕಾರದ ದಾಹಕ್ಕಾಗಿ ಹೋಗುತ್ತಿದ್ದರಷ್ಟೇ, ಭಕ್ತಿಯಿಂದ ಅಲ್ಲ ಎಂದು ಕಿಡಿಕಾರಿದ್ದಾರೆ. ನಿಮ್ಮ 60 ವರ್ಷದ ದುರಾಡಳಿತ, ಭ್ರಷ್ಟಾಚಾರದ ಬಣ್ಣ ಬಯಲಾಗಿದೆ. ಮತದಾರರು ನಿಮಗೆ ಮಣ್ಣು ಮುಕ್ಕಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಧಾರವಾಡದಲ್ಲಿ ಶುಕ್ರವಾರ ಕಾಂಗ್ರೆಸಿಗರು ಸಾವರ್ಕರ್ ಭಾವಚಿತ್ರ ಸುಟ್ಟು ಹಾಕಿದ್ದು ಹೇಯ ಕೃತ್ಯ. ನೀವು ಸುಡುತ್ತಿರುವುದು ಭಾವಚಿತ್ರವಲ್ಲ, ಬದಲಿಗೆ ಭಾರತ ಮಾತೆಯನ್ನು ಸುಡುತ್ತಿದ್ದೀರಿ. ಭಾರತ ಮಾತೆಗಾಗಿ ಸಾವರ್ಕರ್ ಅರ್ಧ ಜೀವನವನ್ನು ಜೈಲಿನಲ್ಲಿ ಕಳೆದವರು. ಅಂತಹವರ ಭಾವಚಿತ್ರ ಸುಡುತ್ತೀರಿ ಎಂದರೆ ನಿಮಗೆ ದೇಶಭಕ್ತಿ ಇಲ್ಲ ಎಂದು ಕಾಂಗ್ರೆಸ್ಸಿಗರ ವಿರುದ್ಧ ಅಸಮಾಧಾನ ಹೊರಹಾಕಿದರು.
ಇಂದಿರಾ ಗಾಂಧಿಯವರೇ ಸಾವರ್ಕರ್ ಶ್ರೇಷ್ಠ ದೇಶ ಭಕ್ತ ಎಂದು ಒಪ್ಪಿಕೊಂಡಿದ್ದಾರೆ. ಅವರ ಭಾವಚಿತ್ರವುಳ್ಳ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. ಆದರೆ, ಅವರ ಭಾವಚಿತ್ರ ಸುಟ್ಟಿರುವ ಕೆಲಸ ಮಾಡಿರುವುದು ಸರಿಯಲ್ಲ, ಈ ಸಂಬಂಧ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಅಧ್ಯಕ್ಷರ ಮನೆ ಮುಂದೆ ಧರಣಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | ದತ್ತ ಪೀಠದ ಪೂಜಾ ಸ್ಥಳದಲ್ಲಿ ಮುಸ್ಲಿಮರಿಂದ ಅಪವಿತ್ರ ಆಗೋದು ಬೇಡ; ಪ್ರಮೋದ್ ಮುತಾಲಿಕ್ ಖಡಕ್ ನುಡಿ