ಮಂಗಳೂರು: ಕೇವಲ ಹತ್ತೇ ದಿನಗಳಲ್ಲಿ ಮೂರು ಕೊಲೆಗಳನ್ನು ಕಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯನ್ನು ಮರಳಿ ಸ್ಥಾಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಕರೆದಿದ್ದ ಸರ್ವಧರ್ಮಗಳ ಶಾಂತಿ ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುದಿಯುತ್ತಿರುವ ಕರಾವಳಿಯಲ್ಲಿ ಶಾಂತಿ ಸ್ಥಾಪನೆಯ ಬಗ್ಗೆ ಯಾರಿಗೂ ಆಸಕ್ತಿ ಇಲ್ಲವೇ ಎನ್ನುವ ಪ್ರಶ್ನೆ ಇದರೊಂದಿಗೆ ಹುಟ್ಟಿಕೊಂಡಿದೆ.
ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ಶನಿವಾರ ಬೆಳಗ್ಗೆ ೧೧ ಗಂಟೆಗೆ ಶಾಂತಿ ಸಭೆಯನ್ನು ಕರೆದಿದ್ದರು. ಜಿಲ್ಲೆಯ ರ್ಮಿಕ ಮುಖಂಡರ ಸಭೆಯನ್ನು ಕರೆದು ಅವರ ಮೂಲಕ ಜನರಿಗೆ ಶಾಂತಿ ಸಂದೇಶ ಹೋಗುವಂತೆ ಮಾಡುವುದು ಈ ಸಭೆಯ ಉದ್ದೇಶವಾಗಿತ್ತು. ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ದೇವಜ್ಯೋತಿ ರೇ, ಕಮಿಷನರ್ ಶಶಿಕುಮಾರ್, ಎಸ್ಪಿ ಹೃಷಿಕೇಶ್ ಸೋನಾವಣೆ ಸೇರಿ ಅಧಿಕಾರಿಗಳು ಭಾಗಿಯಾಗಿದ್ದರು. ಆದರೆ, ಈ ಸಭೆಯನ್ನು ಮುಸ್ಲಿಂ ಸಂಘಟನೆಗಳು ಬಹಿಷ್ಕರಿಸಿದ್ದವು. ಪ್ರಮುಖ ಹಿಂದೂ ಧಾರ್ಮಿಕ ಮುಖಂಡರು ಕೂಡಾ ಸಭೆಗೆ ಬಂದಿಲ್ಲ. ಬೆರಳೆಣಿಕೆಯ ತಳಮಟ್ಟದ ನಾಯಕರು ಮಾತ್ರ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಠಾಣೆ ವ್ಯಾಪ್ತಿಯ ನಾಲ್ವರು ಮುಖಂಡರಿಗೆ ಆಹ್ವಾನ
ದ.ಕ ಜಿಲ್ಲೆಯ 31 ಠಾಣಾ ವ್ಯಾಪ್ತಿಯ ಪ್ರಮುಖ ಧಾರ್ಮಿಕ ಮುಖಂಡರಿಗೆ ಆಹ್ವಾನ ನೀಡಲಾಗಿತ್ತು. ಒಂದು ಠಾಣೆಯ ವ್ಯಾಪ್ತಿಯಿಂದ ನಾಲ್ವರು ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿತ್ತು.
ಮುಸ್ಲಿಂ ಸಂಘಟನೆಗಳ ಪ್ರತ್ಯೇಕ ಸಭೆ
ಶಾಂತಿ ಸಭೆ ಕರೆಯುತ್ತಿದ್ದಂತೆಯೇ ಮುಸ್ಲಿಂ ಸಂಘಟನೆಗಳು ಸಭೆಯಲ್ಲಿ ಭಾಗಹಿಸದಿರಲು ನಿರ್ಧರಿಸಿದವು. ಮುಸ್ಲಿಂ ಸೆಂಟ್ರಲ್ ಕಮಿಟಿ, ದ.ಕ ಜಿಲ್ಲಾ ಮುಸ್ಲಿಂ ಒಕ್ಕೂಟ, ಎಸ್‌ಕೆ ಎಸ್ಸೆಎಫ್, ಎಸ್‌ಎಸ್‌ಎಫ್, ಪಿಎಫ್‌ಐ, ಮುಸ್ಲಿಂ ಐಕ್ಯತಾ ವೇದಿಕೆ, ಜಮಾತ್ ಇಸ್ಲಾಂ ಹಿಂದ್ ಸಂಘಟನೆಗಳು ಸಭೆಗೆ ಬರುವುದಿಲ್ಲ ಎಂದು ಹೇಳಿದ್ದವು. ಮುಸ್ಲಿಂ ಸಂಘಟನೆಗಳ ನಾಯಕರು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಹಮ್ಮದ್ ಮಸೂದ್ ಮನೆಯಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಸಂಜೆ ಆರರಿಂದ ಕರ್ಫ್ಯೂ ಜಾರಿ
ದಕ್ಷಿಣ ಕನ್ನಡದಲ್ಲಿ ರಾತ್ರಿ ಹೊತ್ತು ಕೊಲೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳವರೆಗೆ ಸಂಜೆ ಆರರಿಂದ ಬೆಳಗ್ಗೆ ಆರರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ವೇಳೆ ಯಾರೂ ಮನೆಯಿಂದ ಹೊರಬರದಂತೆ, ಅನಗತ್ಯವಾಗಿ ಓಡಾಡದಂತೆ ಸೂಚಿಸಲಾಗಿದೆ.
ಇದನ್ನೂ ಓದಿ| Praveen Nettaru | ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ, ರಾಜೀನಾಮೆಗೆ ಒತ್ತಾಯ