ಚೆನ್ನೈ/ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿ ಹೇರಿಕೆ (Hindi Imposition:) ವಿರುದ್ಧ ದಕ್ಷಿಣ ರಾಜ್ಯಗಳು ಆಗಾಗ ತಮ್ಮ ಪ್ರತಿಭಟನೆಯನ್ನು ದಾಖಲಿಸುತ್ತವೆ. ಇಷ್ಟಾಗಿಯೂ ಹಿಂದಿ ಹೇರಿಕೆಯ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಈ ಸಾಲಿಗೆ ಈಗ ಮೊಸರು ಸೇರ್ಪಡೆಯಾಗಿದೆ! ಅಂದರೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ಮೊಸರು ಪಾಕೆಟ್‌ಗಳ ಮೇಲೆ, ಹಿಂದಿ ಪದವಾಗಿರುವ ‘ದಹಿ’ ಎಂದು ಮುದ್ರಿಸುವಂತೆ ನಿರ್ದೇಶನ ನೀಡಿದೆ. ಇದೇ ರೀತಿಯ ಹಿಂದಿ ಪದಗಳನ್ನು ಇತರ ಕ್ಷೀರ ಉತ್ಪನ್ನಗಳಿಗೂ ಅನ್ವಯಿಸುತ್ತದೆ ಎಂದು ಹೇಳಿತ್ತು. ಕೇಂದ್ರದ ಈ ನಿರ್ದೇಶನಕ್ಕೆ ತಮಿಳುನಾಡು ಮತ್ತು ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
Hindi Imposition ಬಗ್ಗೆ ಎಂ ಕೆ ಸ್ಟಾಲಿನ್ ಮಾಡಿರುವ ಟ್ವೀಟ್
ಕೇಂದ್ರ ಸರ್ಕಾರದ ಈ ಕ್ರಮಕ್ಕೆ ತಮಿಳುನಾಡು ಮತ್ತು ನೆರೆಯ ಕರ್ನಾಟಕದ ಹಾಲು ಉತ್ಪಾದಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಿಂದಿ ಪದದ ಬದಲಿಗೆ ಪ್ರಾದೇಶಿಕ ಭಾಷೆಯಲ್ಲಿ ಮೊಸರು ಬಳಸುವುದನ್ನು ಮುಂದುವರಿಸಲಾಗುವುದು ಎಂದು ಹಾಲು ಉತ್ಪಾದಕರು ಎಫ್ಎಸ್ಎಸ್ಐಗೆ ಪತ್ರ ಬರೆದಿದ್ದಾರೆ. ಮೊಸರು ಎನ್ನುವುದು ಕರ್ಡ್ ಎನ್ನುವುದು ಯಾವುದೇ ಭಾಷೆಯಲ್ಲಿ ಬಳಸಬಹುದಾದ ಸಾಮಾನ್ಯ ಪದವಾಗಿದೆ. ಆದರೆ, ಮೊಸರಗಿಂತಲೂ ವಿಭಿನ್ನ ರುಚಿ ಮತ್ತು ಸಂರಚನೆಯನ್ನು ಸೂಚಿಸುವುದಕ್ಕೆ ದಹಿ ಪದವನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಕುಮಾರಸ್ವಾಮಿ, ಸ್ಟಾಲಿನ್ ಕೆಂಡ
ಹಿಂದಿ ಹೇರಿಕೆಯ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹಾಗೂ ಕರ್ನಾಟಕದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಕೆಂಡ ಕಾರಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರವು ದಕ್ಷಿಣ ಭಾರತದ ಜನರನ್ನೂ ದೂರು ಇಡುವ ಪ್ರಯತ್ನವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ, ಹಿಂದಿ ಹೇರಿಕೆಯ ಮುಜುಗರವಿಲ್ಲದ ಒತ್ತಾಯಗಳು ಮೊಸರು ಪ್ಯಾಕೆಟ್‌ಗೂ ಹಿಂದಿಯಲ್ಲಿ ಲೇಬಲ್ ಮಾಡುವಂತೆ ನಿರ್ದೇಶಿಸುವ ಮಟ್ಟಕ್ಕೆ ಬಂದಿವೆ. ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡದ ಮೇಲೆ ಹಿಂದಿ ಸವಾರಿ ಮಾಡುತ್ತಿದೆ. ನಮ್ಮ ಮಾತೃಭಾಷೆಯನ್ನು ಇಂತಹ ನಿರ್ಲಜ್ಜ ನಿರ್ಲಕ್ಷ್ಯವು ದಕ್ಷಿಣದಿಂದ ಶಾಶ್ವತವಾಗಿ ಗಡಿಪಾರು ಮಾಡುವುದನ್ನು ಇದು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಟ್ವೀಟ್
ಕರ್ನಾಟಕದ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸಂಸ್ಥೆಯ ನಿರ್ಧಾರವನ್ನು ಟೀಕಿಸಿದ್ದಾರೆ. ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸಿರುವುದು,ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ ಆದೇಶ ನೀಡಿರುವುದು ತಪ್ಪು.ಇದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡಕ್ಕೆ ಕೊಕ್ಕೆ ಹಾಕಿ ಹಿಂದಿಯನ್ನು ಮೆಲ್ಲಗೆ ಹೇರಿ ಇಡೀ ನಂದಿನಿ ಪದಾರ್ಥಗಳನ್ನು ಹಳ್ಳ ಹಿಡಿಸುವುದು ಇದರ ಹಿಂದಿರುವ ಘೋರ ಷಡ್ಯಂತ್ರ. ಆಮೇಲೆ, ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿಲ್ಲ ಎಂದು ಕಥೆ ಕಟ್ಟಿ, ಅದನ್ನು ಉಳಿಸುವ ನಾಟಕವಾಡಿ ನಂದಿನಿಯನ್ನು ಸಲೀಸಾಗಿ ಅಮುಲ್ ಜತೆಗೆ ವಿಲೀನ ಮಾಡುವ ಹುನ್ನಾರವಷ್ಟೇ ಇದು ಎಂದು ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹಿಂದುಸ್ಥಾನದಲ್ಲಿ ಹಿಂದಿಯಲ್ಲಿ ಶಿಕ್ಷಣ ನೀಡಬೇಕು ಎಂದ ಮಧ್ಯಪ್ರದೇಶ ಸಿಎಂ ಚೌಹಾಣ್
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಬೇಸರ
ಇದೇ ವೇಳೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ದಹಿ ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೊಸರು ಪ್ಯಾಕೆಟ್ ಮೇಲೆ ದಹಿ ಎಂದು ಮುದ್ರಿಸಲು ಸೂಚಿಸಿರುವ ನಿರ್ದೇಶನವನ್ನು ವಾಪಸ್ ಪಡೆಯಬೇಕೆಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾದೇಶಿಕ ಭಾಷೆಗಳ ಉತ್ತೇಜನದ ನೀತಿಗೆ ಅನುಗುಣವಾಗಿ ಈ ನಿರ್ದೇಶನವಿಲ್ಲ ಎಂದು ಅವರು ಹೇಳಿದ್ದಾರೆ.