Site icon Vistara News

Renaming Ramanagara: ರಾಮನಗರದಲ್ಲಿ ಬೆಂಗಳೂರಿನ ಕಸ ಸುರಿಯಲು ಹುನ್ನಾರ: ಎಚ್‌.ಡಿ. ಕುಮಾರಸ್ವಾಮಿ

ಹಾಸನ: ರಾಮನಗರ ಹೆಸರು ಬದಲಾವಣೆ (Renaming Ramanagara) ಮಾಡಲು ಆಗುತ್ತಾ? ಅವರ ಹೆಸರು ಬದಲಾವಣೆ ಮಾಡಲು ಆಗದಿದ್ದ ಮೇಲೆ ರಾಮನಗರ ಹೆಸರು ಬದಲಾವಣೆ ಮಾಡಲು ಆಗುತ್ತದೆಯೇ? ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. 1989ರಲ್ಲಿ ಇವರು ಸಾತನೂರಿನಲ್ಲಿ ಶಾಸಕರಾಗಿರಲಿಲ್ಲವೇ? ಹೇಗಿತ್ತು ಸಾತನೂರು? ಕನಕಪುರ ಹೇಗಿತ್ತು? ಯಾರಿಂದ ಅಭಿವೃದ್ಧಿ ಆಯಿತು ಎಂಬ ಮಾಹಿತಿ ಇಲ್ಲವೇ ಅವರಿಗೆ ಎಂದು ಡಿಸಿಎಂ ಡಿಕೆಶಿ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರದ ಬಗ್ಗೆ ಟೀಕಿಸಿದ ಅವರು, ಇವರ ಬ್ರ್ಯಾಂಡ್ ಬೆಂಗಳೂರು ರೀತಿ ರಾಮನಗರವನ್ನೂ ಅಭಿವೃದ್ಧಿ ಮಾಡಬೇಕಾ? ರಾಮನಗರ ಜಿಲ್ಲೆ ಅಭಿವೃದ್ಧಿಯಾಗಿ ಹತ್ತು ವರ್ಷಗಳಾಯಿತು. ಇವರು ಬಂದು ಏನು ಅಭಿವೃದ್ಧಿ ಮಾಡುತ್ತಾರೆ? ಈಗ ಬೆಂಗಳೂರಿನ ಜಾಗವನ್ನು ಯಾವನಿಗೋ 45 ಸಾವಿರ ಕೋಟಿಗೆ ಮೂವತ್ತು ವರ್ಷ ಲೀಸ್ʼಗೆ ಕೊಡಲು ಹೊರಟಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಮಾಡೋದು ಕಸ ತುಂಬಿಸಲಿಕ್ಕಾ? ರಾಮನಗರ ತೆಗೆದು ಬೆಂಗಳೂರು ದಕ್ಷಿಣ ಹೆಸರಿಡುವುದು ಬೆಂಗಳೂರಿನ ಕಸ ತಂದು ತುಂಬಿಸಲಿಕ್ಕಾ? ಕಪ್ಪುಪಟ್ಟಿಯಲ್ಲಿ ಇದ್ದವರನ್ನು ಕರೆದುಕೊಂಡು ಬಂದು ಲೀಸ್ ಕೊಡಲು ಹೊರಟಿದ್ದೀರಾ? ಸುಮ್ಮನೆ ಬಾಯಿ ಚಪಲಕ್ಕೆ ಹೇಳುತ್ತಿಲ್ಲ ನಾನು, ಸರ್ಕಾರದಲ್ಲಿ ಏನೇನು ನಡೆದಿದೆ ಎಲ್ಲಾ ಮಾಹಿತಿ ಸಂಗ್ರಹ ಮಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ | Lakshmi Hebbalkar: ಮಳೆಗೆ ತತ್ತರಿಸಿದ ಉಡುಪಿ; ನನ್ನ ಅವಶ್ಯಕತೆ ಇದ್ದಾಗಷ್ಟೇ ಬರ್ತೀನಿ ಎಂದ ಲಕ್ಷ್ಮೀ ಹೆಬ್ಬಾಳಕರ್

ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ

ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ಯಾರೇ ಅಭ್ಯರ್ಥಿಯಾದರೂ ಅವರು
ಎನ್‌ಡಿಎ ಅಭ್ಯರ್ಥಿಯಾಗುತ್ತಾರೆ. ಎನ್‌ಡಿಎ ಅಭ್ಯರ್ಥಿ ನಿಲ್ಲುವುದಷ್ಟೇ ಅಲ್ಲ, ಗೆಲ್ಲಲೇಬೇಕು. ಗೆಲ್ಲುವುದಕ್ಕೆ ಏನೆಲ್ಲಾ ನಿರ್ಧಾರ ಮಾಡಬೇಕೋ ಅದನ್ನೆಲ್ಲಾ ಮಾಡುತ್ತೇವೆ. ಯಾರು ಅಭ್ಯರ್ಥಿ ಎಂದು ಇನ್ನೂ ಚರ್ಚೆ ಹಂತಕ್ಕೆ ಬಂದಿಲ್ಲ. ಕೇಂದ್ರದ ನಾಯಕರು, ರಾಜ್ಯದ ಬಿಜೆಪಿ ನಾಯಕರು ಎಲ್ಲಾ ಕುಳಿತು ಚರ್ಚೆ ಮಾಡುತ್ತೇವೆ. ಯೋಗೇಶ್ವರ್ ಅವರು ಗೆಲ್ಲಲು ಅವಕಾಶ ಇದ್ದರೆ ಅವರೇ ಚುನಾವಣೆಗೆ ನಿಲ್ಲುತ್ತಾರೆ. ಇಲ್ಲವೆಂದರೆ ಬೇರೆ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಸ್ಥಳೀಯ ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕಾ? ಎನ್ನುವ ಬಗ್ಗೆ ತೀರ್ಮಾನ ಮಾಡುತ್ತೇವೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಹಾಸನದಲ್ಲಿ ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಹೇಳಿದ್ದೆ. ಗೆಲ್ಲಿಸಲಿಲ್ಲವೇ? ನಮ್ಮ ಪಕ್ಷಕ್ಕೆ ಆ ಶಕ್ತಿ ಇದೆ, ಚನ್ನಪಟ್ಟಣದಲ್ಲೂ ಅಷ್ಟೇ ಎಂದು ಅವರು ಹೇಳಿದರು.

ಇದನ್ನೂ ಓದಿ | Vande Mataram: ಸಂಸತ್ತಿನಲ್ಲಿ ವಂದೇ ಮಾತರಂ, ಥ್ಯಾಂಕ್ಸ್‌ ಎಂದು ಹೇಳುವಂತಿಲ್ಲ; ಏಕಿಂಥ ಆದೇಶ?

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ಕೆ.ಕುಮಾರಸ್ವಾಮಿ, ಶಾಸಕ ಸಿ.ಎನ್.‌ಬಾಲಕೃಷ್ಣ, ಸ್ವರೂಪ್‌ ಪ್ರಕಾಶ್‌, ಸಿಮೆಂಟ್‌ ಮಂಜುನಾಥ್‌, ಹೆಚ್.ಕೆ.ಸುರೇಶ್‌ ಮುಂತಾದವರು ಹಾಜರಿದ್ದರು.

Exit mobile version