Site icon Vistara News

Operation Hasta : ಸಿಎಂ, ಡಿಸಿಎಂ ಭೇಟಿ ಮಾಡಿದ ರೇಣುಕಾಚಾರ್ಯ; ದಾವಣಗೆರೆಗೆ ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ?

MP Renukacharya and DCM DK Shivakumar

ಬೆಂಗಳೂರು: ರಾಜ್ಯದಲ್ಲೀಗ ಆಪರೇಷನ್‌ ಹಸ್ತದ (Operation Hasta) ಹವಾ ಬಹಳ ಜೋರಾಗಿದೆ. ಎಲ್ಲೆಲ್ಲಿ ಪ್ರಭಾವಿ ನಾಯಕರಿದ್ದಾರೋ ಅವರೆಲ್ಲರಿಗೂ ಕಾಂಗ್ರೆಸ್‌ (Karnataka Congress) ಗಾಳ ಹಾಕುತ್ತಿದೆ ಎಂದು ಹೇಳಲಾಗುತ್ತಿದೆ. ಇದರ ಭಾಗವಾಗಿ ಈಗಾಗಲೇ ಹಲವರು ಪಕ್ಷ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2023) 20 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಸುಲಭ ಮಾಡಿಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆ ಹೆಣೆಯಲಾಗುತ್ತಿದೆ. ಈ ನಡುವೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ (Former Honnali MLA MP Renukacharya) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ದಾವಣಗೆರೆಯಿಂದ ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿಯಾಗುವ (Davanagere Congress Lok Sabha candidate) ನಿಟ್ಟಿನಲ್ಲಿ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಸಿಎಂ ಸರ್ಕಾರಿ ನಿವಾಸಕ್ಕೆ ಶುಕ್ರವಾರ (ಆಗಸ್ಟ್‌ 25) ಭೇಟಿ ನೀಡಿದ ಎಂ.ಪಿ. ರೇಣುಕಾಚಾರ್ಯ, ಸುಮಾರು 20 ನಿಮಿಷಗಳ ಕಾಲ ಸಿದ್ದರಾಮಯ್ಯ ಅವರ ಜತೆ ಚರ್ಚೆ ನಡೆಸಿದ್ದಾರೆ. ಆದರೆ, ಕ್ಷೇತ್ರದ ಸಂಬಂಧ ತಾವು ಚರ್ಚೆ ನಡೆಸಿದ್ದಾಗಿ ಹೇಳಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್‌ ಭೇಟಿ

ಸಿಎಂ ಭೇಟಿ ಬಳಿಕ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದ ರೇಣುಕಾಚಾರ್ಯ, ಕೆಲವು ಹೊತ್ತು ಚರ್ಚೆ ನಡೆಸಿದರು. ಆದರೆ, ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡುತ್ತಿರುವುದು ಇದು ಎರಡನೇ ಬಾರಿ ಆಗಿದೆ. ಈ ನಡುವೆ ರಾಜ್ಯದಲ್ಲಿ ಆಪರೇಷನ್ ಹಸ್ತದ ವಿಚಾರ ಭಾರಿ ಚರ್ಚೆಯಲ್ಲಿದೆ. ಹಾಗಾಗಿ ಈ ಭೇಟಿ ಸಹಜವಾಗಿಯೇ ಕುತೂಹಲವನ್ನು ಮೂಡಿಸಿದೆ. ರೇಣುಕಾಚಾರ್ಯ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಎಲ್ಲರ ದೃಷ್ಟಿ ನೆಟ್ಟಿದೆ.

ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ?

ಇನ್ನು ಕಾಂಗ್ರೆಸ್‌ ಸಹ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿಯೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ. ದಾವಣಗೆರೆ ಜಿಲ್ಲೆಯು ಬಿಜೆಪಿ ಕಪಿಮುಷ್ಠಿಯಲ್ಲಿದ್ದು, ಇಲ್ಲಿ ಸೂಕ್ತವಾದ ಅಭ್ಯರ್ಥಿ ಕಣಕ್ಕಿಳಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಅಲ್ಲದೆ, ಎಂ.ಪಿ. ರೇಣುಕಾಚಾರ್ಯ ಅವರಿಗೆ ದಾವಣಗೆರೆ ಜಿಲ್ಲೆಯಲ್ಲಿ ಒಳ್ಳೆಯ ಹೆಸರಿದೆ. ಜತೆಗೆ ಬಿಜೆಪಿಯಲ್ಲಿ ಆ ಭಾಗದ ಪ್ರಬಲ ನಾಯಕರೂ ಆಗಿದ್ದಾರೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಅನುಕಂಪದ ಜತೆಗೆ ಬಿಜೆಪಿ ಕೆಲವು ಮತದಾರರು ಇವರತ್ತ ಒಲಿದರೆ ಗೆಲುವು ಸುಲಭ ಎಂಬ ಲೆಕ್ಕಾಚಾರವನ್ನು ಡಿ.ಕೆ. ಶಿವಕುಮಾರ್‌ ಹಾಕಿದ್ದಾರೆನ್ನಲಾಗಿದೆ. ಈ ಕಾರಣಕ್ಕೆ ರೇಣುಕಾಚಾರ್ಯ ಅವರನ್ನು ಕಾಂಗ್ರೆಸ್‌ಗೆ ಸೆಳೆದು ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆಯೇ ಎಂಬ ಬಗ್ಗೆ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಬರ ಘೋಷಣೆಗೆ ಮನವಿ ಮಾಡಿದ್ದೇನೆ: ರೇಣುಕಾಚಾರ್ಯ

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಇವತ್ತು ವರಮಹಾಲಕ್ಷ್ಮಿ ಹಬ್ಬ. ಹಾಗಾಗಿ ಸಿಎಂ, ಡಿಸಿಎಂಗೆ ಶುಭಾಶಯ ಕೋರಲು ಬಂದಿದ್ದೆ. ಸಿಎಂ, ಡಿಸಿಎಂ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಮಳೆ ಇಲ್ಲ. ಈ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿ ಎಂದು ಮನವಿ ಮಾಡಿದ್ದೇನೆ. ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ ಈ ತಾಲೂಕಿನ ಜನರು ನನಗೆ ರಾಜಕೀಯ ಭವಿಷ್ಯ ನೀಡಿದ್ದಾರೆ. ಹಾಗಾಗಿ ಜನರ ಪರವಾಗಿ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: Rain News : ಮೋಡ ಬಿತ್ತನೆ ಇಲ್ಲ; 100ಕ್ಕೂ ಹೆಚ್ಚು ಬರಪೀಡಿತ ತಾಲೂಕು ಘೋಷಣೆಗೆ ಕೇಂದ್ರಕ್ಕೆ ಮನವಿ: ಚಲುವರಾಯಸ್ವಾಮಿ

ನನಗೆ ಕಾಂಗ್ರೆಸ್‌ನಿಂದ ಯಾರೂ ಆಫರ್‌ ಕೊಟ್ಟಿಲ್ಲ: ಎಂಪಿ ರೇಣುಕಾಚಾರ್ಯ

ನಾನು ಕಾಂಗ್ರೆಸ್ ಸೇರುವ ವಿಚಾರವಾಗಿ ಭೇಟಿ ಮಾಡಿರಲಿಲ್ಲ. ಡಿ‌.ಕೆ‌. ಶಿವಕುಮಾರ್ ಜತೆ ಸ್ನೇಹ, ವಿಶ್ವಾಸ ಬಹಳ ದಿನಗಳಿಂದ ಇದೆ. ಆ ಸ್ನೇಹದಿಂದ ನಾನು ಭೇಟಿ ಮಾಡಿದ್ದೇನೆ. ನಾನು‌ ಕೂಡ ದಾವಣಗೆರೆ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಬೇಕು ಅಂತ ಕೇಳಿದ್ದೇನೆ. ವರಿಷ್ಠರು ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ನೋಡಬೇಕು. ಯಾರು ಬಿಜೆಪಿ ಬಿಡುತ್ತಾರೋ ನನಗೆ ಗೊತ್ತಿಲ್ಲ. ನಾನು ಬಿಜೆಪಿಯಲ್ಲೇ ಇದ್ದೇನೆ, ಕಾಂಗ್ರೆಸ್ ಸೇರುವಂತೆ ಯಾರೂ ನನಗೆ ಆಫರ್ ಕೊಟ್ಟಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು.

Exit mobile version