Site icon Vistara News

Actor Chikkanna: ‌ದರ್ಶನ್‌ ಜತೆ ಪಾರ್ಟಿ ಮಾಡಿದ್ದು ನಿಜ; ಪೊಲೀಸರಿಗೆ ಸ್ಫೋಟಕ ಮಾಹಿತಿ ನೀಡಿದ ಚಿಕ್ಕಣ್ಣ!

Actor Chikkanna

Renukaswamy Murder Case: Actor Chikkanna Agrees That He Has Done Party With Actor Darshan

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ದಿನಕ್ಕೊಂದು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ ಹಾಸ್ಯನಟ ಚಿಕ್ಕಣ್ಣ ಅವರು ಪೊಲೀಸ್‌ ಠಾಣೆಗೆ ಹಾಜರಾಗಿದ್ದು, ನಟ ದರ್ಶನ್‌ ಜತೆ (Actor Darshan) ಜೂನ್‌ 8ರಂದು (ಇದೇ ರಾತ್ರಿ ರೇಣುಕಾಸ್ವಾಮಿ ಹತ್ಯೆಯಾಗಿದ್ದು) ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ್ದು ನಿಜ ಎಂಬುದಾಗಿ ನಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆಗೀಡಾದ ದಿನವೇ ಸ್ಟೋನಿ ಬ್ರೂಕ್‌ನಲ್ಲಿ ದರ್ಶನ್‌ ಸೇರಿ ಹಲವರು ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಣ್ಣ ಅವರೂ ಸ್ಥಳ ಮಹಜರಿನ ವೇಳೆ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿಯೇ, ದರ್ಶನ್‌ ಜತೆ ಪಾರ್ಟಿ ಮಾಡಿರುವುದನ್ನು ಚಿಕ್ಕಣ್ಣ ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ.

ಪೊಲೀಸ್‌ ಠಾಣೆಯಲ್ಲಿ ಚಿಕ್ಕಣ್ಣ

https://vistaranews.com/wp-content/uploads/2024/06/WhatsApp-Video-2024-06-17-at-6.28.18-PM.mp4

“ಜೂನ್‌ 8ರಂದು ಆರ್‌ ಆರ್‌ ನಗರದ ಸ್ಟೋನಿ ಬ್ರೂಕ್‌ ಪಬ್‌ಗೆ ಹೋಗಿದ್ದೆ. ಮಧ್ಯಾಹ್ನ 1.30ರ ಸುಮಾರಿಗೆ ಪಬ್‌ಗೆ ಹೋಗಿದ್ದೆ. ದರ್ಶನ್‌ ಹಾಗೂ ನಾನು ಒಂದೇ ಟೇಬಲ್‌ನಲ್ಲಿ ಪಾರ್ಟಿ ಮಾಡಿದ್ವಿ. ಸಂಜೆ 4.30ರ ಸುಮಾರಿಗೆ ದರ್ಶನ್‌ ಅವರು ಪಬ್‌ನಿಂದ ಹೊರಟರು. ಅವರ ಜತೆ ನಾನೂ ಅಲ್ಲಿಂದ ಹೊರಟೆ. ನಾನು ನಮ್ಮ ಮನೆಗೆ ಹೋದೆ, ದರ್ಶನ್‌ ಅವರು ಎಲ್ಲಿಗೆ ಹೋದರೋ ಗೊತ್ತಿಲ್ಲ. ನಾವು ಸಿನಿಮಾ ವಿಚಾರಕ್ಕಾಗಿ ಭೇಟಿ ಮಾಡಿದ್ವಿ. ಅದಷ್ಟೇ ಮಾತನಾಡಿ ನಾವು ಹೊರಟು ಹೋದೆವು” ಎಂಬುದಾಗಿ ಪೊಲೀಸರಿಗೆ ಚಿಕ್ಕಣ್ಣ ಮಾಹಿತಿ ನೀಡಿದ್ದಾರೆ.

ನಟ ದರ್ಶನ್‌ ಸೇರಿ ಹಲವು ಆರೋಪಿಗಳನ್ನು ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ಗೆ ಕರೆದುಕೊಂಡ ಹೋದ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಇದಾದ ನಂತರ ಚಿಕ್ಕಣ್ಣ ಅವರು ಕೂಡ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಚಿಕ್ಕಣ್ಣ ಅವರು ಪೊಲೀಸ್‌ ಠಾಣೆಗೆ ಹೋದ ವಿಡಿಯೊ ಕೂಡ ಲಭ್ಯವಾಗಿದೆ. ಪಾರ್ಟಿ ಹಿನ್ನೆಲೆಯಲ್ಲಿ ನಟ ಚಿಕ್ಕಣ್ಣ ಅವರಿಗೆ ಇದಕ್ಕೂ ಮೊದಲು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನೋಟಿಸ್‌ ನೀಡಿದ್ದರು. ಇದು ಚಿಕ್ಕಣ್ಣ ಅವರಿಗೂ ಆತಂಕ ತಂದಿತ್ತು ಎನ್ನಲಾಗಿದೆ.

ಇದನ್ನೂ ಓದಿ: Actor Darshan: ಅಂದು `ತಗಡು’ ಅಂದಿದ್ದ ದರ್ಶನ್‌ಗೆ ಇಂದು ಉಮಾಪತಿ ಕೌಂಟರ್!

Exit mobile version