Site icon Vistara News

Actor Chikkanna: ದರ್ಶನ್‌ ಊಟಕ್ಕೆ ಕರೆದಿದ್ರು, ಹೋಗಿದ್ದೆ; ಪೊಲೀಸ್‌ ವಿಚಾರಣೆ ಬಳಿಕ ಚಿಕ್ಕಣ್ಣ ಫಸ್ಟ್‌ ರಿಯಾಕ್ಷನ್!

actor darshan Actor Chikkanna

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ನಟ ಚಿಕ್ಕಣ್ಣ (Actor Chikkanna) ಅವರನ್ನೂ ಕಾಮಾಕ್ಷಿಪಾಳ್ಯ ಪೊಲೀಸರು ವಿಚಾರಣೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ದಿನವಾದ ಜೂನ್‌ 8ರಂದೇ ಕೊಲೆ ಆರೋಪಿ ನಟ ದರ್ಶನ್‌ (Actor Darshan) ಜತೆಗೆ ಚಿಕ್ಕಣ್ಣ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್‌ ನೀಡಿದ್ದು, ಅದರಂತೆ ಚಿಕ್ಕಣ್ಣ ಅವರು ವಿಚಾರಣೆಗೆ ಹಾಜರಾದರು. ಸುಮಾರು ಮೂರು ತಾಸಿನ ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚಿಕ್ಕಣ್ಣ, “ದರ್ಶನ್‌ ಅವರು ಜೂನ್‌ 8ರಂದು ಊಟಕ್ಕೆ ಕರೆದಿದ್ರು, ಹೋಗಿದ್ದೆ” ಎಂದಷ್ಟೇ ತಿಳಿಸಿದ್ದಾರೆ.

“ಸಾಮಾನ್ಯವಾಗಿ ದರ್ಶನ್‌ ಅವರು ನನ್ನನ್ನು ಊಟಕ್ಕೆ ಕರೆಯುತ್ತಾರೆ. ಅದರಂತೆ, ಜೂನ್‌ 8ರಂದು ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗಿದ್ದೆ. ಊಟ ಮುಗಿಸಿಕೊಂಡು ನಾನು ಅಲ್ಲಿಂದ ತೆರಳಿದೆ. ಅದಕ್ಕೆ ಸಂಬಂಧಿಸಿದಂತೆ ಪೊಲೀಸರು ಕರೆದಿದ್ದರು” ಎಂಬುದಾಗಿ ಚಿಕ್ಕಣ್ಣ ಮೊದಲ ಪ್ರತಿಕ್ರಿಯೆ ನೀಡಿದರು. “ದರ್ಶನ್‌ ಜತೆ ಊಟಕ್ಕೆ ಹೋದಾಗ ಯಾರ‍್ಯಾರು ಇದ್ದರು” ಎಂದು ಮಾಧ್ಯಮದವರು ಕೇಳಿದ್ದಕ್ಕೆ, “ಪ್ರಕರಣವು ವಿಚಾರಣೆ ಹಂತದಲ್ಲಿದೆ. ನಾನು ಇದುವರೆಗೆ ವಿಚಾರಣೆಗೆ ಸಹಕರಿಸಿದ್ದೇನೆ. ಇದಕ್ಕಿಂತ ಹೆಚ್ಚೇನೂ ಹೇಳಲು ಆಗುವುದಿಲ್ಲ” ಎಂಬುದಾಗಿ ಪ್ರತಿಕ್ರಿಯಿಸಿದರು.

ರೇಣುಕಾಸ್ವಾಮಿ ಕೊಲೆಗೀಡಾದ ದಿನವೇ ಸ್ಟೋನಿ ಬ್ರೂಕ್‌ನಲ್ಲಿ ದರ್ಶನ್‌ ಸೇರಿ ಹಲವರು ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಣ್ಣ ಅವರೂ ಸ್ಥಳ ಮಹಜರಿನ ವೇಳೆ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿಯೇ, ದರ್ಶನ್‌ ಜತೆ ಪಾರ್ಟಿ ಮಾಡಿರುವುದನ್ನು ಚಿಕ್ಕಣ್ಣ ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ.

“ಜೂನ್‌ 8ರಂದು ಆರ್‌ ಆರ್‌ ನಗರದ ಸ್ಟೋನಿ ಬ್ರೂಕ್‌ ಪಬ್‌ಗೆ ಹೋಗಿದ್ದೆ. ಮಧ್ಯಾಹ್ನ 1.30ರ ಸುಮಾರಿಗೆ ಪಬ್‌ಗೆ ಹೋಗಿದ್ದೆ. ದರ್ಶನ್‌ ಹಾಗೂ ನಾನು ಒಂದೇ ಟೇಬಲ್‌ನಲ್ಲಿ ಪಾರ್ಟಿ ಮಾಡಿದ್ವಿ. ಸಂಜೆ 4.30ರ ಸುಮಾರಿಗೆ ದರ್ಶನ್‌ ಅವರು ಪಬ್‌ನಿಂದ ಹೊರಟರು. ಅವರ ಜತೆ ನಾನೂ ಅಲ್ಲಿಂದ ಹೊರಟೆ. ನಾನು ನಮ್ಮ ಮನೆಗೆ ಹೋದೆ, ದರ್ಶನ್‌ ಅವರು ಎಲ್ಲಿಗೆ ಹೋದರೋ ಗೊತ್ತಿಲ್ಲ. ನಾವು ಸಿನಿಮಾ ವಿಚಾರಕ್ಕಾಗಿ ಭೇಟಿ ಮಾಡಿದ್ವಿ. ಅದಷ್ಟೇ ಮಾತನಾಡಿ ನಾವು ಹೊರಟು ಹೋದೆವು” ಎಂಬುದಾಗಿ ಪೊಲೀಸರಿಗೆ ಚಿಕ್ಕಣ್ಣ ಮಾಹಿತಿ ನೀಡಿದ್ದಾರೆ.

ನಟ ದರ್ಶನ್‌ ಸೇರಿ ಹಲವು ಆರೋಪಿಗಳನ್ನು ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ಗೆ ಕರೆದುಕೊಂಡ ಹೋದ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಇದಾದ ನಂತರ ಚಿಕ್ಕಣ್ಣ ಅವರು ಕೂಡ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಚಿಕ್ಕಣ್ಣ ಅವರು ಪೊಲೀಸ್‌ ಠಾಣೆಗೆ ಹೋದ ವಿಡಿಯೊ ಕೂಡ ಲಭ್ಯವಾಗಿದೆ. ಪಾರ್ಟಿ ಹಿನ್ನೆಲೆಯಲ್ಲಿ ನಟ ಚಿಕ್ಕಣ್ಣ ಅವರಿಗೆ ಇದಕ್ಕೂ ಮೊದಲು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನೋಟಿಸ್‌ ನೀಡಿದ್ದರು. ಇದು ಚಿಕ್ಕಣ್ಣ ಅವರಿಗೂ ಆತಂಕ ತಂದಿತ್ತು ಎನ್ನಲಾಗಿದೆ.

ಇದನ್ನೂ ಓದಿ: Actor Darshan: ಅಂದು `ತಗಡು’ ಅಂದಿದ್ದ ದರ್ಶನ್‌ಗೆ ಇಂದು ಉಮಾಪತಿ ಕೌಂಟರ್!

Exit mobile version