ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹತ್ಯೆ (Renukaswamy Murder) ಪ್ರಕರಣದಲ್ಲಿ ದರ್ಶನ್ ಆ್ಯಂಡ್‌ಗೆ ಗ್ಯಾಂಗ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಗುರುವಾರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ್ ಸೇರಿ ಹಲವು ಆರೋಪಿಗಳನ್ನು ಗುರುವಾರ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಎ 1 ಪವಿತ್ರಾ ಗೌಡ ಸೇರಿ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ (Darshan Arrested) ವಹಿಸಿದ ಕಾರಣ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗುತ್ತದೆ. ಇನ್ನು ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಪೊಲೀಸರ ಪರವಾಗಿ ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು. “ಕೊಲೆ ಪ್ರಕರಣದ ತನಿಖೆ ವೇಳೆ ಹಲವು ಮಾಹಿತಿ ಲಭ್ಯವಾಗಿದೆ. ಪ್ರಕರಣದ ಕುರಿತು ಆರೋಪಿಗಳ ವಿಚಾರಣೆಯ ಅಗತ್ಯವಿದೆ. ಹಾಗಾಗಿ, ನ್ಯಾಯಾಲಯವು ಇನ್ನೂ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಬೇಕು” ಎಂಬುದಾಗಿ ಮನವಿ ಮಾಡಿದರು. ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. “ಬಹುತೇಕ ವಿಚಾರಣೆ ಮುಗಿದಿದೆ. ಹಾಗಾಗಿ, ಪೊಲೀಸ್ ಕಸ್ಟಡಿಗೆ ನೀಡುವ ಅಗತ್ಯವಿಲ್ಲ” ಎಂದರು. ಆದರೆ, “ರೇಣುಕಾಸ್ವಾಮಿ ಮೊಬೈಲ್ ರಿಕವರಿ ಆಗಿಲ್ಲ. ಅದನ್ನು ಪತ್ತೆ ಹಚ್ಚಬೇಕಿದೆ. ಪವಿತ್ರಾ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಹಾಗೂ ದರ್ಶನ್ ಸೇರಿ ಆರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು” ಎಂದು ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ಸಮ್ಮತಿ ಸೂಚಿಸಿದರು. ದರ್ಶನ್, ವಿನಯ್, ಪ್ರದೋಷ್ ಹಾಗೂ ಧನರಾಜ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದರು.
ದರ್ಶನ್ ಸೇರಿ ಆರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು, ಪವಿತ್ರಾ ಗೌಡ ಸೇರಿ 7 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂಬುದಾಗಿ ಪೊಲೀಸರು ಎರಡು ಪ್ರತ್ಯೇಕ ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಸಿದ್ದರು. ಅದರಂತೆ ಎಸ್‌ಪಿಪಿ ಪ್ರಸನ್ನಕುಮಾರ್ ಅವರು ವಾದ ಮಂಡಿಸಿದರು. ಕೊನೆಗೆ ನ್ಯಾಯಾಲಯವು ಎಸ್‌ಪಿಪಿ ಅವರ ವಾದವನ್ನು ಪುರಸ್ಕರಿಸಿ ದರ್ಶನ್, ವಿನಯ್, ಪ್ರದೋಷ್ ಹಾಗೂ ಧನರಾಜ್ ಪೊಲೀಸ್ ಕಸ್ಟಡಿಯನ್ನು ಮುಂದುವರಿಸಿದರು.
ಪವಿತ್ರಾ ಗೌಡ ಸೇರಿ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಇವರನ್ನು ಇಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗುತ್ತದೆ. ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವ್ , ರವಿ ಕಾರ್ತಿಕ್ ಜೈಲುಪಾಲಾಗಲಿದ್ದಾರೆ.
ಪೊಲೀಸ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಕೃತ್ಯ ನಡೆಸಿದಾಗ ಧರಿಸಿದ್ದ ಬಟ್ಟೆಗಳು, ಮೊಬೈಲುಗಳು, ಸ್ಥಳ ಮಹಜರು ಸೇರಿ ಹಲವು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಒಂಬತ್ತು ದಿನಗಳ ಕಾಲ ದರ್ಶನ್ ಅಲಿಯಾಸ್ ಡಿ ಬಾಸ್ ಪೊಲೀಸ್ ಕಸ್ಟಡಿಯಲ್ಲಿ ಕಳೆದಿದ್ದಾನೆ.
ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11ರಂದು ಹತ್ಯೆ ಸಂಬಂಧ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದು ಬಂಧಿಸಲಾಗಿತ್ತು. ಜೈಲಿಗೆ ಕಳಿಸಿದರೆ ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ಹೋದಂತಾಗುತ್ತದೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ನಟ ದರ್ಶನ್ ಜೈಲು ಸೇರಿದ್ದ.
ಇದನ್ನೂ ಓದಿ: Actor Darshan: ಘಟಾನುಘಟಿಗಳ ಕಲಾವಿದರ ಜತೆ ʻದರ್ಶನ್ʼ ಕಿರಿಕ್ ಒಂದೆರಡಲ್ಲ; ದೂರಾದವರೆಷ್ಟು ಮಂದಿ?