ಬೆಂಗಳೂರು: ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ (karnataka government) ನಿರ್ಧರಿಸಿರುವುದರಿಂದ ಹಿಂದೂ ಸಂಘಟನೆಗಳು ರೊಚ್ಚಿಗೆದ್ದಿವೆ. ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ಸರ್ಕಾರದ ನಡೆ ವಿರುದ್ಧ ರೊಚ್ಚಿಗೆದ್ದ ಹಿಂದೂಪರ ಸಂಘಟನೆಗಳು ಇಂದಿನಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಿವೆ. ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆಗೆ ತೀರ್ಮಾನಿಸಲಾಗಿದ್ದು, ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿವೆ. ಸಂಜೆ 5 ಗಂಟೆಗೆ ನಗರದಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಕಾನೂನು ಚೌಕಟ್ಟಿನಲ್ಲಿ ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆಗೆ ನಿರ್ಧರಿಸಲಾಗಿದೆ.
ಅನಧಿಕೃತವಾಗಿ ಹಾಗೂ ಬಲವಂತವಾಗಿ ಮತಾಂತರ ಮಾಡುವುದನ್ನು ತಡೆಗಟ್ಟುವ ಸಲುವಾಗಿ 2022ರ ಮೇನಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂಪಡೆಯಲಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ನಿನ್ನೆ ತಿಳಿಸಿದ್ದರು.
ಬಿಜೆಪಿ ಅನೇಕ ವರ್ಷಗಳಿಂದಲೂ ಮತಾಂತರಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ನಾಗರಿಕರು ತಮ್ಮ ಇಚ್ಛೆಗೆ ಅನುಗುಣವಾಗಿ ಮತಾಂತರವಾಗಲು ಅವಕಾಶ ಇದ್ದರೂ, ಬಲವಂತವಾಗಿ ಹಾಗೂ ಆಮಿಷವನ್ನೊಡ್ಡಿ ಮತಾಂತರ ಮಾಡಲಾಗುತ್ತಿದೆ ಎನ್ನುವುದು ಅನೇಕ ವರ್ಷಗಳಿಂದಲೂ ಚರ್ಚಿತ ವಿಷಯ. ವಿಶೇಷವಾಗಿ ಕ್ರಿಶ್ಚಿಯನ್ ಮಿಷನರಿಗಳ ಕುರಿತು ಬಿಜೆಪಿ ಆಗಾಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದೆ. ಇದನ್ನು ತಡೆಯಲು 2022ರಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಮೊದಲಿಗೆ 2022ರ ಮೇನಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ಬಂದ ಕಾಯ್ದೆಯನ್ನು ಸೆಪ್ಟೆಂಬರ್‌ನಲ್ಲಿ ಪ್ರತಿಪಕ್ಷದ ವಿರೋಧದ ನಡುವೆಯೇ ಪಾಸ್ ಮಾಡಲಾಗಿತ್ತು.
ಸಿದ್ದರಾಮಯ್ಯ ಸರ್ಕಾರ ಕಾಯ್ದೆಯನ್ನು ಹಿಂಪಡೆಯಲು ನಿರ್ಧಾರ ಮಾಡಿರುವುದಕ್ಕೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ಕಾಯ್ದೆಯನ್ನು ನಾಶ ಮಾಡಲಿದೆ ಎಂದು ನಾವು ಎಚ್ಚರಿಸಿದ್ದೆವು, ಹಾಗೇ ಆಗುತ್ತಿದೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಮತಾಂತರ ನಿಷೇಧ ಕಾಯಿದೆ ವಾಪಸ್ ಸರಿಯಲ್ಲ