ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಹಣ ಅಧಿಕಾರದ ದಾಹಕ್ಕೆ ಆಪರೇಶನ್ ಕಮಲಕ್ಕೆ ತನನ್ನು ತಾನು ಮಾರಿಕೊಂಡ ಭ್ರಷ್ಟ ಶಾಸಕ ಬೈರತಿ ಬಸವರಾಜ್ (Byrathi Basavaraj) ಅವರನ್ನು ಜನ ಸೋಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಕರೆ ನೀಡಿದರು.
ಸೋಮವಾರ (ಮೇ 8) ಕೆ.ಆರ್. ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಮೋಹನ್ ಬಾಬು ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಕೆ.ಆರ್. ಪುರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಮತದಾರರು ಬದಲಾವಣೆ ಬಯಸಿದ್ದಾರೆ. ಈ ಭಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Election 2023: ಬಹಿರಂಗ ಪ್ರಚಾರ ಅಂತ್ಯ; ಕಣ ರಂಗೇರಿಸಿದ ಅತಿರಥ, ಮಹಾರಥರ ಕ್ಯಾಂಪೇನ್!
ಭರ್ಜರಿ ರೋಡ್ ಶೋ
ವಿಜನಾಪುರದ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಡಿ.ಕೆ. ಶಿವಕುಮಾರ್ ಅವರು, ರಾಮಮೂರ್ತಿನಗರ ಮುಖ್ಯ ರಸ್ತೆಯಲ್ಲಿ ರೋಡ್ ಶೋ ನಡೆಸಿದರು. ರಸ್ತೆಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು, ಡಿ.ಕೆ. ಶಿವಕುಮಾರ್, ಅಭ್ಯರ್ಥಿ ಮೋಹನ್ ಬಾಬು ಹಾಗೂ ಕಾಂಗ್ರೆಸ್ ಪರ ಜೈಕಾರವನ್ನು ಕೂಗಿದರು.
ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ನಾಗರಿಕರು ಈ ಬಾರಿ ಕಾಂಗ್ರೆಸ್ ಮತ ಹಾಕಿ ಅಧಿಕಾರಕ್ಕೆ ತರಬೇಕು. ನಮ್ಮ ಪಕ್ಷ ನುಡಿದಂತೆ ನಡೆಯುತ್ತದೆ. ಕಳೆದ ಸರ್ಕಾರದಲ್ಲಿದ್ದಾಗಲೂ ಘೋಷಿಸಿದ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಬಾರಿಯೂ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ಅನ್ನು ಜನರಿಗೆ ಕೊಟ್ಟಿದೆ. ನಾವು ಅಧಿಕಾರಕ್ಕೆ ಬಂದ ಒಂದು ವಾರದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಆ ಎಲ್ಲವನ್ನೂ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ರೋಡ್ ಶೋದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ಸಾಥ್ ನೀಡಿದರು.