Site icon Vistara News

Residential Schools: ಮತ್ತೆ ಬದಲಾಯಿತು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ! ಆಕ್ರೋಶಕ್ಕೆ ಮಣಿದ ಸರ್ಕಾರ

Replacing nameplates in residential schools The government has given in to the anger

ಬೆಂಗಳೂರು: ರಾಜ್ಯದ ಎಲ್ಲ ವಸತಿ ಶಾಲೆಗಳ (Residential Schools) ಪ್ರವೇಶ ದ್ವಾರದಲ್ಲಿ ಇದ್ದ ಘೋಷ ವಾಕ್ಯವನ್ನು ಬದಲಾಯಿಸಿರುವ ಸಮಾಜ ಕಲ್ಯಾಣ ಇಲಾಖೆ (Department of Social Welfare) ಕ್ರಮಕ್ಕೆ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಮೊದಲು “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂಬ ಕುವೆಂಪು ವಿರಚಿತ ಸಾಲುಗಳನ್ನು ಬದಲಾಯಿಸಿ, “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂದು ಹಾಕಲಾಗಿತ್ತು. ಇದೀಗ ವ್ಯಾಪಕ ಆಕ್ರೋಶಕ್ಕೆ ರಾಜ್ಯ ಸರ್ಕಾರ ಮಣಿಯಿತೇ ಎಂಬ ಪ್ರಶ್ನೆ ಎದುರಾಗಿದೆ. ಕಾರಣ, ವಿಜಯಪುರ ಸೇರಿದಂತೆ ಹಲವು ಕಡೆ ಈ ಹೊಸ ಘೋಷವಾಕ್ಯವನ್ನು ಬದಲಾಯಿಸಿ ಹಳೆಯದನ್ನೇ ಇಡಲಾಗಿದೆ.

ವಿಜಯಪುರದಲ್ಲಿ ಮೊದಲಿನಂತೆಯೇ ಆದ ಘೋಷವಾಕ್ಯ!

ವಿಜಯಪುರ ಜಿ. ಮುದ್ದೇಬಿಹಾಳ ತಾಲೂಕಿನ ಘಾಳಪೂಜೆ ಮೊರಾರ್ಜಿ ವಸತಿ ಶಾಲೆಯಲ್ಲಿ ನೂತನವಾಗಿ ಹಾಕಲಾಗಿದ್ದ ಘೋಷವಾಕ್ಯವನ್ನು ಬದಲಾವಣೆ ಮಾಡಲಾಗಿದೆ. ಮತ್ತೆ “ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ” ಎಂದು ಹಾಕಲಾಗಿದೆ. ವಿವಾದವಾಗುತ್ತಿದ್ದಂತೆಯೇ ಹೊಸದಾಗಿ ಹಾಕಲಾಗಿದ್ದ ಘೋಷವಾಕ್ಯವನ್ನು ತೆರವುಗೊಳಿಸಲಾಗಿದೆ.

ಈ ಕುರಿತು ಪ್ರಾಂಶುಪಾಲ ದುಂಡಪ್ಪ ಪ್ರತಿಕ್ರಿಯೆ ನೀಡಿ, ಮುಖ್ಯ ಕಾರ್ಯದರ್ಶಿಗಳ‌ ಮೌಖಿಕ ಸೂಚನೆಯಂತೆ ಘೋಷವಾಕ್ಯವನ್ನು ಬದಲಾಯಿಸಿದೆ. ಇದು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಘೋಷವಾಕ್ಯ ಮೊದಲಿನಂತೆಯೇ ಬದಲಾವಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಈ ಮೊದಲು ಪೇಪರ್‌ ಮೂಲಕ ಬದಲಿಸಲಾಗಿತ್ತು. ಈಗ ಆ ಪೇಪರ್‌ ಬರಹವನ್ನು ತೆಗೆಯಲಾಗಿದೆ.

ಬಳ್ಳಾರಿಯಲ್ಲಿ ಬದಲಾವಣೆ

ಶಾಲೆಯ ಮೇಲಿನ ಗೋಡೆ ಬರಹ ಬದಲಾವಣೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬಳ್ಳಾರಿ ಶಾಲೆಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ಸಂದೇಶ ಮೇರೆಗೆ ಗೋಡೆ ಬರಹ ಬದಲಾವಣೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಟೆಲಿಗ್ರಾಂ ಗ್ರೂಪ್‌ನಲ್ಲಿ ಬದಲಾವಣೆ ಬಗ್ಗೆ ಸಂದೇಶವನ್ನು ಹಾಕಲಾಗಿತ್ತು. ಕಡ್ಡಾಯವಾಗಿ ಎಲ್ಲರೂ ಗೋಡೆ ಬರಹ ಬದಲಾವಣೆ ಮಾಡುವಂತೆ ಆದೇಶ ನೀಡಲಾಗಿತ್ತು.

ಇದನ್ನೂ ಓದಿ: Residential Schools: ಶಾಲೆಯಲ್ಲಿ ಕುವೆಂಪು ಸಾಲನ್ನೇ ಬದಲಿಸಿದ ಸರ್ಕಾರ! ವಿಪಕ್ಷ ಕೆಂಡ

ಜ್ಞಾನ ದೇಗುಲ ಇದು ಕೈ ಮುಗಿದು ಒಳಗೆ ಬಾ ಎಂಬುದರ ಬದಲಾಗಿ, “ಜ್ಞಾನ ದೇಗುಲ ಇದು ಧೈರ್ಯವಾಗಿ ಪ್ರಶ್ನಿಸಿ” ಎಂದು ಟೆಲಿಗ್ರಾಂ ಗ್ರೂಪ್‌ಗಳಲ್ಲಿ ಸೂಚನೆ ನೀಡಲಾಗಿದೆ. ಆದರೆ, ಕಡ್ಡಾಯವಾಗಿ ಮಾಡುವಂತೆ ಲಿಖಿತ ಆದೇಶ ಇಲ್ಲ. ಹೀಗಾಗಿ ಕೆಲ ಶಾಲೆಯಲ್ಲಿ ಮಾತ್ರ ಗೋಡೆ ಬರಹವನ್ನು ಬದಲಾವಣೆ ಮಾಡಲಾಗಿದೆ. ಉಳಿದ ಶಾಲೆಯಲ್ಲಿ ಆದೇಶ ಬಾರದ ಹಿನ್ನೆಲೆಯಲ್ಲಿ ಗೋಡೆ ಬರಹ ಬದಲಾವಣೆ ಮಾಡಲು ಹಿಂದೇಟು ಹಾಕಲಾಗಿದೆ. ಆದರೆ, ಈಗ ವ್ಯಾಪಕ ಟೀಕೆ ಬಂದಿದ್ದರಿಂದ ಹಳೆಯ ಬರಹದ ಮೇಲೆ ಪೇಪರ್‌ ಮೂಲಕ ಅಂಟಿಸಿದ್ದ ಬರಹವನ್ನು ಕಿತ್ತು ಹಾಕಲಾಗಿದೆ. ಈ ಬಗ್ಗೆ ಪ್ರತಿಪಕ್ಷ ಬಿಜೆಪಿ (BJP Karnataka) ನಾಯಕರು ಸೇರಿದಂತೆ ಹಲವರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Exit mobile version