Site icon Vistara News

BBMP Meeting: ಕೆಲಸ ಮಾಡದೆ ಬಿಲ್, ಒಂದೇ ಕೆಲಸಕ್ಕೆ 2 ಬಿಲ್ ಆಗಿರುವ ಕಾಮಗಾರಿಗಳ ವರದಿ ನೀಡಿ: ಡಿಕೆಶಿ

DK Shivakumar in BBMP

#image_title

ಬೆಂಗಳೂರು: ಬಿಬಿಎಂಪಿ ಅನುದಾನ ಪಡೆದು ಶುರು ಮಾಡದ ಕೆಲಸ, ಕಾಮಗಾರಿಗಳನ್ನು ಯತಾಸ್ಥಿತಿಯಲ್ಲಿ ತಡೆ ಹಿಡಿಯಬೇಕು. ಕಾಲಮಿತಿಯೊಳಗೆ ಪೂರ್ಣಗೊಳಿಸದ ಯೋಜನೆಗಳನ್ನು ತಡೆ ಹಿಡಿಯಬೇಕು. ಕಾಮಗಾರಿ ಆಗದಿದ್ದರೂ ಬಿಲ್ ಮಾಡಿರುವ ಹಾಗೂ ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಆಗಿರುವ ಕಾಮಗಾರಿಗಳ ಬಗ್ಗೆ ತನಿಖೆ ಮಾಡಿ 10 ದಿನದೊಳಗೆ ವರದಿ ನೀಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ (BBMP Meeting) ಡಿಸಿಎಂ ಡಿ.ಕೆ.ಶಿವಕುಮಾರ್‌ ಸೂಚಿಸಿದರು.

ಬಿಬಿಎಂಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವಿಧಾನಸಭೆ ಕ್ಷೇತ್ರವಾರು ಆಗಿರುವ ಕೆಲಸ, ಅವುಗಳಿಗೆ ಆಗಿರುವ ಖರ್ಚು ವಿವರ, ಕೆಲಸ ಆಗಿರುವ ಬಗ್ಗೆ ಫೋಟೊ, ವಿಡಿಯೊ ಮತ್ತಿತರ ದಾಖಲೆಗಳನ್ನು ಒದಗಿಸಬೇಕು. ಇಲ್ಲಿ ನಿಮ್ಮ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಿ ನೋಡುತ್ತೇನೆ. ನೀವು ಪಟ್ಟಿ ಕೊಡದಿದ್ದರೆ ನಾನೇ ನಿಮಗೆ ಪಟ್ಟಿ ಕೊಡುತ್ತೇನೆ ಎಂದು ಪರೋಕ್ಷವಾಗಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ನಾನು ಹಳ್ಳಿಯಿಂದ ಬಂದಿದ್ದರೂ ನನಗೆ ಈ ಬಗ್ಗೆ ಮಾಹಿತಿ ಕೊಡುವವರು ಇದ್ದಾರೆ. ಮಾಹಿತಿ ಪಡೆಯುವ ಶಕ್ತಿಯೂ ನನಗಿದೆ. ಕೆಲಸ ಆಗಿರುವ ಜಾಗಗಳಿಗೆ ಹೋಗಿ ಖುದ್ದು ಪರಿಶೀಲನೆ ಮಾಡೋಣ. ಕಣ್ಣಲ್ಲಿ ಕಂಡಿದ್ದು ಮಾತ್ರವೇ ನಂಬಿಕೆಗೆ ಅರ್ಹ. ಹೀಗಾಗಿ ಕಣ್ಣಲ್ಲಿ ನೋಡಿ ನಂಬೋಣ. ರಸ್ತೆ ಮತ್ತಿತರ ಕಾಮಗಾರಿಗಳನ್ನು ಏಜೆನ್ಸಿಗಳ ಮೂಲಕವೇ ಮಾಡುವುದಾದರೆ ಪಾಲಿಕೆಯಲ್ಲಿ ಎಂಜಿನಿಯರ್‌ಗಳು ಇರುವುದರ ಔಚಿತ್ಯವಾದರೂ ಏನು? ನಿಮ್ಮ ಕೆಲಸವನ್ನು ಬೇರೆ ಯಾರೋ ಮಾಡುವುದಾದರೆ ನೀವು ಇರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Congress Guarantee: ಮನೆಯಿಂದ 50 ಕಿ.ಮೀ.ವರೆಗೆ ಮಾತ್ರ ಉಚಿತ ಬಸ್‌ ಪ್ರಯಾಣ?: ಗ್ಯಾರಂಟಿಗೆ ಷರತ್ತು ವಿಧಿಸಲು ಸರ್ಕಾರ ಕಸರತ್ತು

ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೊರವಲಯದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಅವಕಾಶ ಕಲ್ಪಿಸಬಾರದು. ಹಾಗೇ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ದಂಡ ಮತ್ತಿತರ ಕಾನೂನು ಕ್ರಮ ಜರುಗಿಸಬೇಕು. ಒಣ ಮತ್ತು ಹಸಿಕಸ ವೈಜ್ಞಾನಿಕ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಅಕ್ರಮಗಳಿಗೆ ಆಸ್ಪದ ಇಲ್ಲದಂತೆ ಟಿಡಿಆರ್ ಯೋಜನೆ ಜಾರಿಗೆ ತರಬೇಕು. ರಸ್ತೆ ಮತ್ತಿತರ ಯೋಜನೆಗಳಿಗೆ ಆಸ್ತಿ ಕಳೆದುಕೊಂಡವರ ಹಿತ ಕಾಯಬೇಕು. ಯಾವುದೇ ಯೋಜನೆ ಕಾಮಗಾರಿ ಆರಂಭಕ್ಕೆ ಮುನ್ನ ಆ ಜಾಗದ ವಿಡಿಡೊ, ಫೋಟೊ ತೆಗೆದಿಡಬೇಕು ಎಂದು ಸೂಚಿಸಿದರು.

ಬೆಂಗಳೂರಿಗೆ ಕೆಟ್ಟ ಹೆಸರು ತರಬೇಡಿ

ನಿಜವಾಗಿಯೂ ಜನರ ಉಪಯೋಗಕ್ಕೆ ಯೋಜನೆ ಆಗುತ್ತಿದೆಯೋ ಅಥವಾ ಇನ್ಯಾರಾದರೂ ಪ್ರಭಾವಿಗಳ ಅನುಕೂಲಕ್ಕೆ ಯೋಜನೆ ಆಗುತ್ತಿದೆಯೋ ಎಂಬ ಮಾಹಿತಿ ಸಾರ್ವಜನಿಕರಿಗೆ ಸಿಗಲಿ. ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯಲು ತಡೆಯಾಗಿರುವ ಬಾಟಲ್ ನೆಕ್ ಸ್ಥಳಗಳನ್ನು ಗುರುತಿಸಿ ಸರಿಪಡಿಸಬೇಕು. ಮಳೆ ನೀರು ಸಮಸ್ಯೆಯಿಂದ ನಮಗೆ ಮತ್ತು ನಿಮಗಿಂತ ಹೆಚ್ಚಾಗಿ ಬೆಂಗಳೂರಿಗೇ ಕೆಟ್ಟ ಹೆಸರು ಬರುತ್ತಿದೆ. ಇದನ್ನು ನಿವಾರಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು.

ಬಿಬಿಎಂಪಿ ಸಮುದ್ರ ಇದ್ದಂತೆ. ಎಲ್ಲಿ ತೆಲುತ್ತೇವೋ ಎಲ್ಲಿ ಮುಳುಗುತ್ತೇವೋ ಗೊತ್ತಿಲ್ಲ. ರಾಜಕಾರಣಿಗಳು, ಅಧಿಕಾರಿಗಳು ಸೇರಿ ಏನೆಲ್ಲಾ ಮಾಡುತ್ತಾರೆ ಎಂಬುವುದು ಗೊತ್ತಿದೆ. ಬೆಂಗಳೂರು ಬರೀ ಕರ್ನಾಟಕ್ಕದ್ದಲ್ಲ, ಇಡೀ ದೇಶದ ಆಸ್ತಿ. ನಮ್ಮ ಚುನಾವಣೆಯ ಹೋರಾಟವೇ ಭ್ರಷ್ಟಾಚಾರ ವಿರುದ್ಧ ಮಾಡಿರುವಂತಹದ್ದು. ಎಲ್ಲರೂ ಕೆಟ್ಟವರು ಎಂದು ಹೇಳಲ್ಲ. ಒಳ್ಳೆಯವರೂ ಇದ್ದಾರೆ. ಆ ಮಂತ್ರಿಗೆ, ಈ ಮಂತ್ರಿಗೆ, ಶಾಸಕರಿಗೆ, ಅವರಿಗೆ ಇವರಿಗೆ ಚಾಡಿ ಹೇಳಿಕೊಂಡು ಬದುಕುತ್ತೇನೆ ಎನ್ನುವವರನ್ನು ಮಟ್ಟ ಹಾಕುತ್ತೇನೆ. ನಾನೊಬ್ಬನೇ ಏನೋ ಮಾಡುತ್ತೇನೆ ಎಂಬ ಭ್ರಮೆ ಇಲ್ಲ. ನಾವು ನೀವು ಸೇರಿ ಕೆಲಸ ಮಾಡೋಣ ಎಂದು ತಿಳಿಸಿದರು.

ಇದನ್ನೂ ಓದಿ | Karnataka Govt: ಬಿಜೆಪಿ ಯೋಜನೆಗಳ ವಿರುದ್ಧ ತನಿಖಾಸ್ತ್ರ ಪ್ರಯೋಗ: ಪರಿಶೀಲನೆ, ತಡೆಗೆ ಮುಂದಾದ ಕಾಂಗ್ರೆಸ್‌ ಸರ್ಕಾರ

ಸರ್ಕಾರದ ಗೌರವ ಉಳಿಸಿ

ಸಮಯದ ಮಿತಿ ಇಲ್ಲದೇ ದುಡಿಯಬೇಕು. ಶೇ.100 ಬದ್ಧತೆ, ನಿಷ್ಠೆಯಿಂದ ಕೆಲಸ ಮಾಡಿ. ಆಡಳಿತಕ್ಕೆ ಚುರುಕು ಮುಟ್ಟಿಸಲು ಒಂದಷ್ಟು ಬದಲಾವಣೆ ಮಾಡುತ್ತೇವೆ. ಶಿಕ್ಷೆ ನೀಡುವುದು ದೊಡ್ಡ ಕೆಲಸ ಅಲ್ಲ. ಅದಕ್ಕೆ ಆಸ್ಪದ ಕೊಡಬೇಡಿ. ಒಳ್ಳೆ ಕೆಲಸ ಮಾಡಿ, ಒಳ್ಳೆ ಹೆಸರು ಪಡೆಯಿರಿ, ಸರ್ಕಾರಕ್ಕೆ ಒಳ್ಳೆ ಹೆಸರು ತನ್ನಿ. ಹಿಂದಿನ ಸರ್ಕಾರದ ಅವಧಿಯಲ್ಲಿ ಯಾರ್ಯಾರಿಗೋ ಬೂತ್ ಲೆವೆಲ್ ಆಫೀಸರ್ ಅಂತ ಲೆಟರ್ ಕೊಟ್ಟಿರಲ್ಲ ನಿಮಗೆ ಬುದ್ಧಿ ಇರಲಿಲ್ಲವಾ? ಯಾರ್ಯಾರು ಏನೇನೂ ಮಾಡಿದರು, ಎಷ್ಟೆಷ್ಟು ಭ್ರಷ್ಟಾಚಾರ ಮಾಡಿದರು ಅಂತ ಗೊತ್ತಿದೆ. ಈಗ ಬದಲಾವಣೆ ಮಾಡಿಕೊಳ್ಳಿ. ಈ ಸರ್ಕಾರ ಬದಲಾವಣೆ ತಂದಿದೆ ಎಂದು ಜನರಿಗೆ ಮನವರಿಕೆ ಆಗುವಷ್ಟರ ಮಟ್ಟಿಗೆ ಉತ್ತಮವಾಗಿ ಕೆಲಸ ಮಾಡಿ. ನಿಮ್ಮ ಹಾಗೂ ಸರ್ಕಾರದ ಗೌರವ ಉಳಿಸಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

Exit mobile version