ಬೆಂಗಳೂರು: ಜನವರಿ 26ರಂದು ಗಣರಾಜ್ಯೋತ್ಸವವನ್ನು ಸಂಭ್ರಮದಿಂದ (Republic Day) ಆಚರಿಸಲಾಗುತ್ತಿದೆ. ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ (Field Marshal Manek Shaw Parade Maidan) ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot), ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಹಲವಾರು ಸಾಹಸಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅಂದು ನಡೆಯಲಿವೆ. ಅದರ ನಡುವೆಯೇ ಬೆಂಗಳೂರಿನಾದ್ಯಂತ ಕಟ್ಟೆಚ್ಚರ (High Alert in Bangalore) ವಹಿಸಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ.
ಕಾರ್ಯಕ್ರಮ ಸುಲಲಿತವಾಗಿ ನಡೆಯಲು ಹಾಗೂ ಮೈದಾನದ ಭದ್ರತೆಯ ಸಲುವಾಗಿ ಮುಂಜಾಗರೂಕತಾ ಕ್ರಮಗಳಾಗಿ ಕಳೆದ 15 ದಿನಗಳಿಂದ ಮೈದಾನಕ್ಕೆ ಪೊಲೀಸರನ್ನು ಕಣ್ಣಾವಲು ಇಡಲಾಗಿದೆ ಮತ್ತು ಬೆಂಗಳೂರು ನಗರದ ಎಲ್ಲಾ ಹೋಟೆಲ್, ಲಾಡ್ಜ್ಗಳು ತಂಗುದಾಣಗಳು, ಇನ್ನಿತರೆ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡುವವರ ಮೇಲೆ ಸೂಕ್ತ ನಿಗಾವಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ತಿಳಿಸಿದ್ದಾರೆ.
ಜನವರಿ 26ರಂದು ನಡೆಯುವ ಧ್ವಜಾರೋಹಣ, ಕವಾಯತು ಹಾಗೂ ಸಾಂಸ್ಕೃತಿಕ ಸಮಾರಂಭವನ್ನು ರಾಜ್ಯಪಾಲರು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದ ವೇಳೆ ಒಳಗೆ ಮತ್ತು ಹೊರಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಬಿಗಿ ಭದ್ರತೆಯನ್ನು ಆಯೋಜಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ನಿಯೋಜನೆ
ಬೆಂಗಳೂರು ನಗರದ ಎಲ್ಲಾ ವಿಭಾಗಗಳಿಂದ 9 ಡಿಸಿಪಿ, 16 ಎಸಿಪಿ, 46 ಪೊಲೀಸ್ ಇನ್ಸ್ಪೆಕ್ಟರ್ಸ್, 109-ಪಿಎಸ್ಐ/ಮಹಿಳಾ ಪಿಎಸ್ಐ, 77 ಎಎಸ್ಐ, 594 ಹೆಡ್ಕಾನ್ಸ್ಟೆಬಲ್/ ಪೊಲೀಸ್ ಕಾನ್ಸ್ಟೆಬಲ್ 87 ಮಹಿಳಾ ಸಿಬ್ಬಂದಿಗಳೊಂದಿಗೆ 184 ಸಾದಾ ಉಡುಪಿನ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು 56 ಜನ ಕ್ಯಾಮೆರಾ ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ ಎಂದು ಅವರು ತಿಳಿಸಿದರು.
ಸಂಚಾರ ನಿಯಂತ್ರಣಕ್ಕೆ 575 ಅಧಿಕಾರಿಗಳು ಮತ್ತು ಸಿಬ್ಬಂದಿ
ಸಂಚಾರ ನಿರ್ವಹಣಗೆ 04 ಡಿಸಿಪಿ, 06 ಎಸಿಪಿ, 21 ಪೊಲೀಸ್ ಇನ್ಸ್ಪೆಕ್ಟರ್ಸ್, 33 ಪೊಲೀಸ್ ಸಬ್ ಇನ್ಸ್ಪೆಕ್ಟರ್ಸ್, 97 ಎಎಸ್ಐ 414 ಹೆಡ್ಕಾನ್ಸ್ಟೆಬಲ್/ಪೊಲೀಸ್ ಕಾನ್ಸ್ಟೆಬಲ್ ಸೇರಿ ಒಟ್ಟಾರೆ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದ ಪ್ರಯುಕ್ತ ಒಟ್ಟು 575 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ.
ಮೈದಾನದ ಬಂದೋಬಸ್ತ್ಗೆ ನಾನಾ ತುಕಡಿ, ಗರುಡ ಪಡೆ
ಮೈದಾನದ ಬಂದೋಬಸ್ತ್ ಕರ್ತವ್ಯಕ್ಕೆ 10-ಕೆ.ಎಸ್.ಆರ್.ಪಿ/ಸಿ.ಎ.ಆರ್. ತುಕಡಿಗಳನ್ನು, 02-ಅಗ್ನಿಶಾಮಕ ವಾಹನಗಳು, 02-ಆಂಬುಲೆನ್ಸ್ ವಾಹನಗಳು, 4-ಖಾಲಿ ವಾಹನಗಳು, 1-ಕ್ಷಿಪ್ರ ಕಾರ್ಯಾಚರಣೆ ಪಡೆ, 01 ಡಿ ಸ್ಪಾಟ್, 1 ಆರ್ಐವಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ. ಗರುಡ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಇದನ್ನೂ ಓದಿ : Republic Day : ಗಣರಾಜ್ಯೋತ್ಸವದ ದಿನ ಬೆಂಗಳೂರಲ್ಲಿ ವಾಹನ ಸಂಚಾರ ಬದಲು; ಈ ಭಾಗದಲ್ಲಿ ಹೋಗಬೇಡಿ
100ಕ್ಕೂ ಅಧಿಕ ಸಿಸಿಟಿವಿಗಳ ಕಣ್ಗಾವಲು
ಮೈದಾನದ ಸುತ್ತ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ನಿಗಾವಹಿಸಲು 100 ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಮತ್ತು ಮೈದಾನದಲ್ಲಿ ಆಗಮಿಸುವವರ ತಪಾಸಣೆಗೆ 3 ಬ್ಯಾಗೇಜ್ ಸ್ಕ್ಯಾನರ್, 20-ಡಿಎಫ್ಎಂಡಿ ಮತ್ತು 40 ಎಚ್ಎಚ್ಎಂಡಿಗಳನ್ನು ಅಳವಡಿಸಲಾಗಿರುತ್ತದೆ.
ಯಾರಿಗೆ ಯಾವ ಗೇಟ್ನಲ್ಲಿ ಪ್ರವೇಶ
ಗಣರಾಜ್ಯೋತ್ಸವದ ಆಚರಣೆ ಸಂಬಂಧ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಬೇರೆ ಬೇರೆ ಗೇಟ್ಗಳಲ್ಲಿ ಪ್ರವೇಶ ನೀಡಲಾಗಿದೆ.
1.ಗೇಟ್ ನಂ.2ರಲ್ಲಿ ಬಿಳಿ ಬಣ್ಣದ ವಿ.ಐ.ಪಿ. ವಾಸ್ ಹೊಂದಿರುವವರಿಗೆ
2.ಗೇಟ್ ನಂ-03 ರಲ್ಲಿ ಗೌರವಾನ್ವಿತ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳು ಹಾಗೂ ವಿಶೇಷ ಆಹ್ವಾನಿತರಿಗೆ
3. ಗೇಟ್ ನಂ-04 ರಲ್ಲಿ ವಿ.ವಿ.ಐ.ಪಿ ಮತ್ತು ಪಿಂಕ್ ಕಲರ್ ಪಾಸ್ ಹೊಂದಿರುವವರಿಗೆ ಪ್ರವೇಶವಿದೆ.
4. ಗೇಟ್ ನಂ-05 ರಲ್ಲಿ ಹಸಿರು ಬಣ್ಣದ ಸಾರ್ವಜನಿಕ ಪಾಸ್ ಹೊಂದಿರುವವರಿಗೆ ಪ್ರವೇಶವಿರುತ್ತದೆ.
ಕಾರ್ಯಕ್ರಮದ ಭದ್ರತಾ ದೃಷ್ಟಿಯಿಂದ ಗೇಟ್ಗಳ ಬಳಿ ತಪಾಸಣೆಗೆ ಒಳಪಡಬೇಕಾಗುತ್ತದೆ.
ನೀವು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರೆ ಗಮನಿಸಿ..
1.ಸಮಾರಂಭಕ್ಕೆ ಆಗಮಿಸುವವರು ಬೆಳಗ್ಗೆ 08-30ರ ಒಳಗಾಗಿ ತಮ್ಮ ಆಸನಗಳಲ್ಲಿ ಆಸೀನರಾಗತಕ್ಕದ್ದು. ಯಾವುದೇ ಕಾರಣಕ್ಕೂ ಮೈದಾನದದೊಳಗೆ ಪ್ರವೇಶಿಸತಕ್ಕದ್ದಲ್ಲ.
2. ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರು ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್ ರಸ್ತೆ ಮೂಲಕ ಗೇಟ್ ನಂ.05ಕ್ಕೆ ಆಗಮಿಸಲು ಸೂಚಿಸಲಾಗಿದೆ.
3. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು ತಮ್ಮೊಂದಿಗೆ ಅನಗತ್ಯವಾದ ಲಗೇಜು ಹಾಗೂ ಇತರೆ ವಸುಗಳನ್ನು ತರುವಂತಿಲ್ಲ.
4.ಯಾವುದಾದರೂ ಅನುಮಾನಾಸ್ಪದ ವಸ್ತುಗಳು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವುದು.