ಬೆಂಗಳೂರು: ಬಿಹಾರ ಬಾಲಕನ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ಅಪಹರಣಕಕ್ಕೊಳಗಾಗಿದ್ದ ಬಾಲಕನನ್ನು ರೈಲ್ವೆ ಪೊಲೀಸರು ರಕ್ಷಣೆ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ನಡೆದ 12 ಗಂಟೆಯೊಳಗೆ ಯಶವಂತಪುರದ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯ ಸಿಬ್ಬಂದಿ ಬಾಲಕನನ್ನು ರಕ್ಷಣೆ (Rescue Operation) ಮಾಡಿದ್ದಾರೆ.
ಪ್ರಭಾತ್, ರಂಗನಾಥ ಹಾಗೂ ಕುಶಾಲ್ ಅಲಿಯಾಸ್ ಡಾಲಿ ಬಂಧಿತ ಆರೋಪಿಗಳು. ಬಿಹಾರ ಮೂಲದ ಅರುಣ್ಕುಮಾರ್ ಎಂಬಾತ ತನ್ನ 17 ವರ್ಷದ ಮಗನ ಜತೆ ಬೆಂಗಳೂರಿಗೆ ಬಂದಿದ್ದ. ಕೆಲಸ ಅರಸಿ ಡಿ. 10ರಂದು ಮಗನ ಜತೆ ಬೆಂಗಳೂರಿಗೆ ರೈಲು ಹತ್ತಿದ್ದರು. ಡಿ. 12ರಂದು ಬೆಂಗಳೂರಿಗೆ ಬಂದಾಗ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮಗ ನಾಪತ್ತೆಯಾಗಿದ್ದ.
ಮಗನನ್ನು ಹುಡುಕುವ ಹೊತ್ತಿಗಾಗಲೇ ಅರುಣ್ ಕುಮಾರ್ಗೆ ಅಪಹರಣಕಾರರು ಕರೆ ಮಾಡಿ, ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿ ರೂಮ್ನಲ್ಲಿ ಕೂಡಿ ಹಾಕಿದ್ದೇವೆ. 2 ಲಕ್ಷ ರೂಪಾಯಿ ನೀಡಿದರೆ ಮಗನನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿ, 40 ಸಾವಿರ ರೂ.ಗಳನ್ನು ಆನ್‌ಲೈನ್ ಮೂಲಕ ಖಾತೆಗ ವರ್ಗಾವಣೆ ಮಾಡಿಸಿಕೊಂಡಿದ್ದರು.
ನಂತರ ಉಳಿದ ಹಣ ಕೊಡದಿದ್ದಲ್ಲಿ ಮಗನ ಕೈ ಕಟ್ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಇದರಿಂದ ಹೆದರಿದ್ದ ಅರುಣ್ ಕುಮಾರ್, ರೈಲ್ವೆ ಪೊಲೀಸರ ಮೊರೆ ಹೋಗಿದ್ದರು. ದೂರು ದಾಖಲಾಗುತ್ತಿದ್ದಂತೆಯೇ ಸಿಡಿಆರ್ ಮಾಹಿತಿ ಸಂಗ್ರಹಿಸಿ ಮೊಬೈಲ್ ಟ್ರ್ಯಾಕ್ ಮಾಡಿ 12 ಗಂಟೆಯೊಳಗೆ ಎ೧ ಪ್ರಭಾತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಆತನಿಗೆ ಸಹಕರಿಸಿದ ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ | School tragedy | ಉರುಳಿದ ಶಾಲಾವರಣದ ಕಲ್ಲಿನ ಕಂಬಗಳು, ಮೂವರು ಮಕ್ಕಳಿಗೆ ಗಾಯ, ಪ್ರಾಣಾಪಾಯದಿಂದ ಜಸ್ಟ್ ಮಿಸ್