ಉಡುಪಿ: ಅದು ಉಡುಪಿಯ ಬ್ರಹ್ಮಗಿರಿಯಲ್ಲಿರುವ ಅಪಾರ್ಟ್‌ಮೆಂಟ್ (Apartment at Udupi). ಅದರ ಹತ್ತನೇ ಮಹಡಿಯ ಕಿಟಕಿ ಮೇಲಿನ ಸಜ್ಜೆಯಲ್ಲಿ ಬಾಲಕನೊಬ್ಬ ಸಿಕ್ಕಿಹಾಕಿಕೊಂಡಿದ್ದ. ಅವನನ್ನು ಅಲ್ಲಿಂದ ರಕ್ಷಿಸುವ ಮನೆಯವರ ಪ್ರಯತ್ನ ವಿಫಲವಾಗಿ ಕೊನೆಗೆ ಅಗ್ನಿಶಾಮಕ ದಳದ ಮೊರೆ ಹೊಕ್ಕಿದ್ದರು. ಅಂತಿಮವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸಾಹಸಿಕ ಕಾರ್ಯಾಚರಣೆ (Rescue Operation) ಮೂಲಕ ಬಾಲಕನನ್ನು ರಕ್ಷಿಸಿದ್ದಾರೆ (Boy Rescued).
ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಇಲ್ಲಿನ ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಲ್ಲಿರುವ ಮನೆಯ ಎಂಟು ವರ್ಷದ ಬಾಲಕ ಎಲ್ಲಿ ಎಂದು ಹುಡುಕಿದರೆ ಆತ ಕಿಟಕಿಯ ಮೇಲಿನ ಸಜ್ಜೆಯಲ್ಲಿ ಕುಳಿತಿದ್ದ. ಆವನು ಅಲ್ಲಿಗೆ ಹೇಗೆ ಹೋದ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಮನೆಯವರಿಗೆ ಆತನನ್ನು ಕೆಳಗೆ ಇಳಿಸುವುದು ಹೇಗೆ ಎನ್ನುವುದು ತಿಳಿಯದೆ ಭಯಬಿದ್ದರು.
ಈ ಹಂತದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಲಾಯಿತು. ಕೆಲವೇ ನಿಮಿಷಗಳಲ್ಲಿ ಅವರು ಆಗಮಿಸಿದರು. ಅಷ್ಟು ಹೊತ್ತಿಗೆ ಅಪಾರ್ಟ್‌ಮೆಂಟ್ ಸಿಬ್ಬಂದಿ ಕೂಡಾ ಅಲ್ಲಿ ಜಮಾಯಿಸಿದ್ದರು.
ಎಂಟು ವರ್ಷದ ಈ ಬಾಲಕ 10ನೇ ಮಹಡಿಯಲ್ಲಿರುವ ಮನೆಯ ಬಾಲ್ಕನಿಯಿಂದ ಹೊರಗೆ ಬಂದು ಅಲ್ಲಿಂದ ಪಕ್ಕದ ಕಿಟಕಿಗೆ ಹೋಗಿರಬಹುದು ಎಂಬ ಅಭಿಪ್ರಾಯ ಅಲ್ಲಿತ್ತು. ಈ ಬಾಲಕ ಸ್ವಲ್ಪ ಮಟ್ಟಿಗೆ ವಿಶೇಷ ಚೇತನನಾಗಿದ್ದು, ಆಗಾಗ ಇಂಥ ಅಪಾಯಕಾರಿ ಸಾಹಸಗಳಿಗೆ ಮುಂದಾಗುತ್ತಿದ್ದ ಎನ್ನಲಾಗಿದೆ.
ಈ ನಡುವೆ, ಅಗ್ನಿಶಾಮಕ ದಳದ ಸಿಬ್ಬಂದಿ ಅಲ್ಲಿಗೆ ಆಗಮಿಸಿದರು. ಆದರೆ ಕಟ್ಟಡ ತುಂಬಾ ಎತ್ತರವಾಗಿರುವುದರಿಂದ ಹುಡುಗ 10ನೇ ಮಹಡಿಯಲ್ಲಿ ಸಿಕ್ಕಿಬಿದ್ದಿರುವುದರಿಂದ ರಕ್ಷಣೆಗೆ ಸುಲಭದ ದಾರಿ ಕಾಣಲಿಲ್ಲ. ಈ ನಡುವೆ, ಅಧಿಕಾರಿಗಳು ಮತ್ತು ಸಿಬ್ಬಂದಿ ಪರಸ್ಪರ ಚರ್ಚೆ ನಡೆಸಿ ಕಟ್ಟಡದ 11ನೇ ಮಹಡಿಯ ಮನೆಯಿಂದ ಕೆಳಗಿಳಿದು ಅಲ್ಲೇ ಪಕ್ಕದಲ್ಲಿರುವ ಕಿಟಕಿಯ ಸಜ್ಜೆಯಿಂದ ಬಾಲಕನನ್ನು ಮೇಲೆತ್ತುವುದು ಎಂದು ತೀರ್ಮಾನಿಸಿದರು.
ಆದರೆ, ಅವರಿಗೆ ಎದುರಾದ ಇನ್ನೊಂದು ಆತಂಕವೆಂದರೆ ಈ ರೀತಿಯಾಗಿ ಇಷ್ಟು ಜನ ಕಟ್ಟಡದ ಹೊರಗಡೆ ನೋಡುವುದರಿಂದ ಅಥವಾ ಮೇಲ್ಭಾಗದಿಂದ ಅವನತ್ತ ಯಾರೋ ಬರುವುದನ್ನು ನೋಡಿ ಆತ ಕೆಳಗೆ ಜಿಗಿದುಬಿಟ್ಟರೆ ಎನ್ನುವುದು. ಹೀಗಾಗಿ ಅವರು ಕಟ್ಟಡದ ಕೆಳಭಾಗದಲ್ಲೂ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಒಂದೊಮ್ಮೆ ಆತ ಕೆಳಗೆ ಜಿಗಿದರೂ ಆತನಿಗೆ ಏನೂ ಸಮಸ್ಯೆ ಆಗದಂತೆ ಕೆಳಭಾಗದಲ್ಲಿ ಬಲೆಯನ್ನು ಕಟ್ಟಿದರು.
ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಯೊಬ್ಬರು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು 11ನೇ ಮಹಡಿಯ ಮನೆಯ ಬಾಲ್ಕನಿಯಿಂದ ಬಾಲಕ ಇದ್ದ ಕಿಟಕಿಯ ಬಳಿ ಇಳಿದರು. ಅಲ್ಲಿಂದ ಆತನನ್ನು ಮೇಲೆತ್ತಿ ಬಾಲ್ಕನಿಗೆ ತಂದರು. ಅರುಷ್ ಎಂಬ ಈ ಬಾಲಕನ ರಕ್ಷಣೆ ಮಾಡಿದ್ದೇ ತಡ ಹೆತ್ತವರು ಮತ್ತು ಬಂಧುಗಳು ನೆಮ್ಮದಿಯ ನಿಟ್ಟುಸಿರುಬಿಟ್ಟರು.
ಈ ಬಾಲಕನನ್ನು ಅಗ್ನಿಶಾಮಕ ದಳದವರು ಕೂಡಿಸಿಕೊಂಡು ಬುದ್ಧಿಮಾತು ಹೇಳಿದ್ದಾರೆ. ಈ ರೀತಿ ದುಸ್ಸಾಹಸ ಮಾಡುವುದರಿಂದ ಅಪ್ಪ-ಅಮ್ಮನಿಗೆ ಆಗುವ ಆತಂಕ, ಆಗುವ ಜೀವಾಪಾಯದ ಬಗ್ಗೆ ವಿವರಿಸಿದರು. ಬಾಲಕ ಇನ್ನು ಹಾಗೆ ಮಾಡುವುದಿಲ್ಲ ಎಂದು ಅವರ ಮುಂದೆ ಹೇಳಿದ್ದಾನೆ.
ಇದನ್ನೂ ಓದಿ: AI News Anchor: ಆ್ಯಂಕರ್‌ಗಳೇ ಸುಂದರಿ ಎಂದು ಬೀಗಬೇಡಿ; ಒಡಿಶಾದಲ್ಲಿ AI ನ್ಯೂಸ್ ಆ್ಯಂಕರ್‌ಗಳು ಮಿಂಚುತ್ತಿದ್ದಾರೆ