ವಿಜಯಪುರ: ಜಿಲ್ಲೆಯ ಇಂಡಿ ತಾಲೂಕು ಲಚ್ಯಾಣ ಗ್ರಾಮದ ಬಳಿ ಕೊಳವೆಬಾವಿಗೆ (Borewell Tragedy) ಬಿದ್ದಿರುವ 2 ವರ್ಷದ ಬಾಲಕ ಸಾತ್ವಿಕ್‌ನನ್ನು ರಕ್ಷಿಸಲು ತಡರಾತ್ರಿಯಾದರೂ ಕಾರ್ಯಾಚರಣೆ (Rescue Operation) ಮುಂದುವರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯು ತಡರಾತ್ರಿಯಾದರೂ ಕಾರ್ಯಾಚರಣೆ ಮುಂದುವರಿಸಿದ್ದು, ಬಾಲಕನನ್ನು ರಕ್ಷಿಸಲು ಯೋಜನೆ ರೂಪಿಸಿದ್ದಾರೆ.
ಹಿಟಾಚಿ ಯಂತ್ರವನ್ನು ಬಳಸಿ ಕೊಳವೆಬಾವಿ ಸುತ್ತಲೂ ಅಗೆಯುವ ಕೆಲಸ ಮುಂದುವರಿದಿದೆ. ಕೊಳವೆ ಬಾವಿಯ 5 ಅಡಿ ದೂರದಲ್ಲಿ ಮಣ್ಣು ತೆರವು ಮಾಡಲು ಕಾರ್ಯಾಚರಣೆ ಮುಂದುವರಿದಿದೆ. 20 ಅಡಿಯ ವರೆಗೆ ಡಿಗ್ಗಿಂಗ್ ಮಾಡಿ ಬಳಿಕ, ರಂಧ್ರ ಕೊರೆದು, ಮಗು ಇರುವ ಜಾಗ ತಲುಪಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹಿಟಾಚಿ ಕಾರ್ಯಾಚರಣೆಗೆ ಕಲ್ಲು ಬಂಡೆ ಅಡ್ಡಿಯಾದ ಹಿನ್ನೆಲೆ ಬ್ರೇಕರ್ ಮೂಲಕ ಕಲ್ಲು ಒಡೆಯುವ ಕಾರ್ಯವೂ ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲ, ಇತ್ತ ಕಲಬುರಗಿ ಹಾಗೂ ಬೆಳಗಾವಿಯಿಂದ ಎಸ್‌ಡಿಆರ್‌ಎಫ್ ತಂಡವು ಆಗಮಿಸುತ್ತಿದ್ದು, ಕ್ಯಾಮೆರಾ ಬಿಟ್ಟು ಮಗುವಿನ ಚಲನವಲನದ ಮೇಲೆ ನಿಗಾ ಇಡುವುದು, ಆತನಿಗೆ ನೀರು ಸೇರಿ ಅಗತ್ಯ ವಸ್ತುಗಳನ್ನು ಪೂರೈಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಬಾಲಕನು ಬದುಕಿ ಬರಲಿ ಎಂಬುದಾಗಿ ಆತನ ಕುಟುಂಬಸ್ಥರು ಪೂಜೆ, ಅರ್ಚನೆ ಮಾಡಿಸಿ, ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Borewell Tragedy: ವಿಜಯಪುರ; ಅಜ್ಜನ ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ, ರಕ್ಷಿಸಲು ಹರಸಾಹಸ
ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್ ಮುಜಗೊಂಡ (2) ಎಂಬ ಬಾಲಕನು ಬುಧವಾರ (ಏಪ್ರಿಲ್ 3) ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದಾನೆ. ರಕ್ಷಣಾ ಕಾರ್ಯಾಚರಣೆ ಸ್ಥಳದಲ್ಲೇ ಕುಟುಂಬಸ್ಥರು ಆಕ್ರಂದನ ವ್ಯಕ್ತಪಡಿಸುತ್ತಿದ್ದಾರೆ. ಶಂಕರಪ್ಪ ಮುಜಗೊಂಡ ಎಂಬುವರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. 500 ಅಡಿಯಷ್ಟು ಕೊರೆದರೂ ನೀರು ಬಂದಿರಲಿಲ್ಲ. ಹಾಗಾಗಿ ಮುಚ್ಚದೇ ಹಾಗೆಯೇ ಬಿಟ್ಟಿದ್ದರು ಎನ್ನಲಾಗಿದೆ. ಈಗ ಅವರ ಮೊಮ್ಮಗನೇ ಈ ಕೊಳವೆ ಬಾವಿಗೆ ಬದ್ದಿದ್ದಾನೆ.
ಕೊಳವೆ ಬಾವಿಗೆ ಬಿದ್ದು 2000 ರಲ್ಲಿ ದಾವಣಗೆರೆಯಲ್ಲಿ ಬಾಲಕ ಕರಿಯ ಸಾವು, 2007 ರಲ್ಲಿ ರಾಯಚೂರಿನಲ್ಲಿ ಬಾಲಕ ಸಂದೀಪ್ ಸಾವು, 2014 ರಲ್ಲಿ ಬಾಗಲಕೋಟೆಯಲ್ಲಿ 6 ವರ್ಷದ ಬಾಲಕ ತಿಮ್ಮಣ್ಣ ಹಾಗೂ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಬಾಲಕಿ ಅಕ್ಷತಾ ಸಾವು, 2017 ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ 6 ವರ್ಷದ ಬಾಲಕಿ ಕಾವೇರಿ ಹಾಗೂ ಗದಗ ಜಿಲ್ಲೆಯ ಸವಡಿ ಗ್ರಾಮದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ