Site icon Vistara News

ಹೆಸರಾಂತ ಸಂಶೋಧಕಿ, ಆಕಾಶವಾಣಿಯ ನಿಲಯ ನಿರ್ದೇಶಕರಾಗಿದ್ದ ಡಾ. ಜ್ಯೋತ್ಸ್ನಾ ಕಾಮತ್‌ ಇನ್ನಿಲ್ಲ

jyothsna kamat

ಬೆಂಗಳೂರು: ಬೆಂಗಳೂರು ಆಕಾಶವಾಣಿಯಲ್ಲಿ ನಿಲಯ ನಿರ್ದೇಶಕರಾಗಿ ಬಾನುಲಿಯನ್ನು ಬಾನೆತ್ತರಕ್ಕೆ ಏರಿಸಿದ್ದ, ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಡಾ. ಜ್ಯೋತ್ಸ್ನಾ ಕಾಮತ್‌ ಇನ್ನಿಲ್ಲ. ಅವರು ಬುಧವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ ೮೬ ವರ್ಷವಾಗಿತ್ತು.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾದ ಜ್ಯೋತ್ಸ್ನಾ ಕಾಮತ್‌ ಅವರು ಹೆಸರಾಂತ ಸಂಶೋಧಕಿಯಾಗಿ, ದಕ್ಷ ಆಡಳಿತಗಾರ್ತಿಯಾಗಿ, ಕನ್ನಡ ಸಾಹಿತ್ಯಲೋಕದಲ್ಲಿ ಬರಹಗಾರ್ತಿಯಾಗಿ ಗಮನ ಸೆಳೆದವರು. ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕೆಲಸ ಮಾಡಿದ ಇವರ ಪತಿ ಡಾ. ಕೃಷ್ಣಾನಂದ ಕಾಮತ್‌ ಕೂಡಾ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿತವಾದ ಹೆಸರು.

ಕನ್ನಡ, ಇಂಗ್ಲಿಷ್‌ ಸೇರಿದಂತೆ ಎಂಟು ಭಾಷೆಗಳಲ್ಲಿ ಪ್ರೌಢಿಮೆ ಹೊಂದಿದ್ದ ಅವರು, ೨೨ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರಕಟಿತ ಕೃತಿಗಳು ಮೂರು ಭಾಷೆಗಳಿಗೆ ಭಾಷಾಂತರ ಹೊಂದಿವೆ. ಇತಿಹಾಸ, ಜಾನಪದ ಮತ್ತು ಹಾಸ್ಯ ಇವರ ಮೆಚ್ಚಿನ ವಿಷಯಗಳಾಗಿದ್ದವು.

೧೯೯೧ರಲ್ಲಿ ಕರ್ನಾಟಕ ಸರ್ಕಾರವು ಅವರಿಗೆ “ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಿದೆ. ಅವರ ‘ಕರ್ನಾಟಕ ಶಿಕ್ಷಣ ಪರಂಪರೆ’ ಕೃತಿಗೆ ಉತ್ತಮ ಸಂಶೋಧನಾ ಗ್ರಂಥವೆಂದು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಪುರಸ್ಕಾರ ದೊರೆತಿದೆ. ಕನ್ನಡ ಸಾಹಿತ್ಯ ಸಂಶೋಧನೆಗಾಗಿ ‘ಕಿಟೆಲ್ ಪುರಸ್ಕಾರ’ ದೊರೆತಿದೆ.

ಸಾಧನೆಯ ಹಾದಿ
ಜ್ಯೋತ್ಸ್ನಾ  ಕಾಮತ್‌ ಅವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ. ತಂದೆ ಗಣೇಶ ರಾವ್ ವೃತ್ತಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದರು. ತಾಯಿ ಶಾರದಾ ಬಾಯಿ. ಕುಮಟಾದ ಕೆನರಾ ಕಾಲೇಜಿನಲ್ಲಿ ಬಿಎ ಪದವಿ ಪಡೆದ ಇವರಿಗೆ ಸಂಸ್ಕೃತ ಮತ್ತು ಇತಿಹಾಸದಲ್ಲಿ ವಿಶೇಷ ಆಸಕ್ತಿ ಇತ್ತು. ʻಡಿಪ್ಲೊಮ ಇನ್ ಎಜುಕೇಷನ್’ನಲ್ಲಿ ಒಂದು ವರ್ಷ ಅಧ್ಯಯನ ಮಾಡಿ ಧಾರವಾಡದ ವನಿತಾ ಹೈಸ್ಕೂಲ್ ನಲ್ಲಿ ಅಧ್ಯಾಪಕಿಯಾಗಿ ಸೇರಿದ ಅವರು ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಎಂ.ಎ ಪದವಿ ಗಳಿಸಿದರು.

ಡಾ.ಬಿ.ಎ.ಸಾಲೆತೊರೆ, ಡಾ.ಪಿ.ಬಿ.ದೇಸಾಯಿ ಮತ್ತು ಡಾ. ಜಿ ಎಸ್ ದೀಕ್ಷಿತ್ ರಂತಹ ಇತಿಹಾಸ ವಿದ್ವಾಂಸರ ಪ್ರಭಾವಕ್ಕೆ ಒಳಗಾಗಿದ್ದ ಜ್ಯೋತ್ಸ್ನಾ ಎರಡು ವರ್ಷ ಸಹಾಯಕ ಸಂಶೋಧಕಿಯಾಗಿ ಕೆಲಸ ನಿರ್ವಹಿಸಿದರು. ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ೧೯೬೪ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಸೇರಿದರು. ಮುಂದೆ ಕೋಲ್ಕೊತಾಜೈಪುರ್ಮುಂಬಯಿಮೈಸೂರು ಮತ್ತು ಬೆಂಗಳೂರು ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಾ ೧೯೯೪ರಲ್ಲಿ ನಿವೃತ್ತಿ ಹೊಂದಿದರು. ಅವರು ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಬಿತ್ತರಗೊಂಡ ಎರಡು ಕಾರ್ಯಕ್ರಮಗಳನ್ನು- ‘ಗಾಂಧಿ-ಒಂದು ಪುನರ್ದರ್ಶನ’ ಮತ್ತು ‘ಹಿರಿಯರ ಯುಗಾದಿ ಮೇಳ’ ಪುಸ್ತಕ ರೂಪದಲ್ಲೂ ಪ್ರಕಟವಾಗಿವೆ.

ಪ್ರಮುಖ ಕೃತಿಗಳು: ಸಂಸಾರದಲ್ಲಿ ಸ್ವಾರಸ್ಯ(ಪ್ರಬಂಧ ಸಂಕಲನ), ಕರ್ನಾಟಕ ಶಿಕ್ಷಣ ಪರಂಪರೆ (ಶಿಕ್ಷಣ), ಹೀಗಿದ್ದೇವೆ ನಾವು (ಹಾಸ್ಯ), ಮಹಿಳೆ ಅಂದು-ಇಂದು, ನೆನಪಿನಲ್ಲಿ ನಿಂತವರು, ನಗೆ ಕೇದಿಗೆ, ನಗೆ ನವಿಲು

ಇದನ್ನೂ ಓದಿ| ಸುಬ್ಬಣ್ಣ ಗಾನ ನಮನ| ಕಾಡು ಕುದುರೆ ಹಾಡಿನತ್ತ ಓಡಿ ಬಂದಿತ್ತಾ… ಶಿವಮೊಗ್ಗ ಸುಬ್ಬಣ್ಣನೆಂಬ ಸಂಗೀತ ಸಂತ

Exit mobile version