Site icon Vistara News

OBC Commission : ಅನಾಥ ಮಕ್ಕಳಿಗೂ ಮೀಸಲಾತಿ; ಹಿಂದುಳಿದ ವರ್ಗಗಳ ಆಯೋಗ ಶಿಫಾರಸು

Jayaprakash hegde and CM Siddaramaiah

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (OBC Commission) ಸಿದ್ಧಪಡಿಸಿದ ವರದಿಯಲ್ಲಿ ಮಹತ್ವದ ಅಂಶವೊಂದು ಹೊರಬಿದ್ದಿದ್ದು, ಅನಾಥ ಮಕ್ಕಳಿಗೂ ಮೀಸಲಾತಿ (Reservation for orphaned children) ಕೊಡುವಂತೆ ಶಿಫಾರಸು ಮಾಡಲಾಗಿದೆ. ಈ ಸಂಬಂಧ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Jayaprakash Hegde) ಅವರು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ವಿಸ್ತಾರ ನ್ಯೂಸ್‌ ಜತೆ ಮಾತನಾಡಿ, ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಮೀಸಲಾತಿ ಕೊಡಲು ಶಿಫಾರಸು ಮಾಡಿದ್ದೇವೆ. ರಾಜ್ಯದ ಬಾಲಮಂದಿರಗಳಲ್ಲಿ ಇರುವ ಮಕ್ಕಳು ಡಿಗ್ರಿ ಮತ್ತು ಎಂಎ ಮುಗಿಸಿದ್ದಾರೆ. ಇವರನ್ನು ನೋಡಿದಾಗ ಮೀಸಲಾತಿ ಕೊಡಬೇಕು ಅಂತ ನಿರ್ಧಾರ ಮಾಡಿದೆವು ಎಂದು ತಿಳಿಸಿದರು.

ಇದನ್ನೂ ಓದಿ: Weather Report : ಕರಾವಳಿಯಲ್ಲಿ ಬಿರುಗಾಳಿ ಮಳೆ; ಮಲೆನಾಡು, ಉತ್ತರದಲ್ಲಿ ಸಾಧಾರಣ

ಹೀಗೆ ಅನಾಥ ಮಕ್ಕಳಿಗೆ ಮೀಸಲಾತಿ ಕೊಡುವ ನಿರ್ಧಾರಕ್ಕೆ ಬಂದ ಮೇಲೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳಿಗೆ ಭೇಟಿ ಮಾಡಿ ಅಧ್ಯಯನ ಮಾಡಿದೆವು. ಅಲ್ಲದೆ, ಕೆಲವರು ಕೊರೊನಾ ಸಮಯದಲ್ಲಿ ತಂದೆ-ತಾಯಿಯರನ್ನು ಕಳೆದುಕೊಂಡರು. ಅಂಥವರಿಗೆ ಮೀಸಲಾತಿ ಸಿಗಬೇಕು. ಅತ್ಯಂತ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಕೊಡಲು ಹೇಳಿದ್ದೇವೆ. ಒಂದು ವೇಳೆ ಉದ್ಯೋಗ ಸೇರಿದಂತೆ ಯಾವುದೇ ಫಲಾನುಭವಿ ಕ್ಷೇತ್ರಕ್ಕೆ ಅಂತಹ ಮಕ್ಕಳಿಂದ ಅರ್ಜಿ ಬರದೇ ಇದ್ದರೆ ಅದರ ಉಪಯೋಗವನ್ನು ಇತರೆ ವರ್ಗದವರು ಪಡೆದುಕೊಳ್ಳಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

ರಾಜ್ಯದಲ್ಲಿ 5280 ಅನಾಥ ಮಕ್ಕಳು

ರಾಜ್ಯಾದ್ಯಂತ 5280 ಅನಾಥ ಮಕ್ಕಳು ಇದ್ದಾರೆ. ಇಂತಹ ಮಕ್ಕಳು ಸಾಮಾನ್ಯ ವರ್ಗದ ಜತೆ ಪೈಪೋಟಿ ಮಾಡಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಜತೆ ತಂದೆ, ತಾಯಿ ಇಲ್ಲದ ಮಕ್ಕಳು ಪೈಪೋಟಿ ನಡೆಸುವುದು ಸುಲುಭವಿಲ್ಲ. ಚುನಾವಣೆಗೂ ಮೊದಲೇ ವರದಿ ನೀಡಿದ್ದೆವು. ಸರ್ಕಾರ ಗೆಜೆಟ್ ಹೊರಡಿಸಿದೆ. ಆದರೆ, ಅದು ಸರಿಯಿಲ್ಲದ ಕಾರಣ ಬದಲಾವಣೆ ಮಾಡಲು ಹೇಳಿದ್ದೇನೆ ಎಂದು ಜಯಪ್ರಕಾಶ್ ಹೆಗ್ಡೆ ಮಾಹಿತಿ ನೀಡಿದರು.

ಇದನ್ನೂ ಓದಿ: Karnataka Politics : ಡಿಕೆಶಿ ದಶಾಸ್ತ್ರಕ್ಕೆ ಸಿದ್ದರಾಮಯ್ಯ ಟೀಮ್ ಸಚಿವರು ಗಲಿಬಿಲಿ‌!

ಬಿಜೆಪಿ ಬಿಡುತ್ತೀರಾ ಎಂದಿದ್ದಕ್ಕೆ ಉತ್ತರಿಸದ ಜಯಪ್ರಕಾಶ್ ಹೆಗ್ಡೆ!

ಇದೇ ವೇಳೆ ಜಯಪ್ರಕಾಶ್ ಹೆಗ್ಡೆ ಅವರ ಬಳಿ, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, “ನಾನು ಆಯೋಗದಲ್ಲಿ ಇರುವುದರಿಂದ ರಾಜಕೀಯ ಮಾತನಾಡಲ್ಲ. ನವೆಂಬರ್ 20ರ ವರೆಗೂ ನಮ್ಮ ಆಯೋಗದ ಸಮಯ ಇದೆ. ಅವಧಿ ಮುಗಿಯುವವರೆಗೂ ರಾಜಕೀಯ ಪ್ರಶ್ನೆಗಳಿಗೆ ಉತ್ತರ ಕೊಡಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಆ ಮೂಲಕ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

Exit mobile version