ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಮೀಸಲಾತಿ (Reservation in Karnataka) ಹೆಚ್ಚಳಕ್ಕೆ ಆಗ್ರಹಿಸಿ ಕಳೆದ 257 ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಅಂತ್ಯಗೊಂಡಿದೆ. ಭಾನುವಾರ ಮೀಸಲಾತಿ ಹೆಚ್ಚಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಕಳೆದ ಫೆಬ್ರವರಿ 10 ರಿಂದ ಅಹೋರಾತ್ರಿ ಧರಣಿ ಆರಂಭವಾಗಿತ್ತು. ಒಟ್ಟಾರೆಯಾಗಿ ಎಂಟೂವರೆ ತಿಂಗಳಿನಿಂದ ಅಹೋರಾತ್ರಿ ಧರಣಿ ನಡೆಯುತ್ತಿತ್ತು. ಭಾನುವಾರ (ಅ.೨೩) ಸರ್ಕಾರದಿಂದ ಸುಗ್ರೀವಾಜ್ಞೆ ಪ್ರಕಟವಾದ ಹಿನ್ನೆಲೆಯಲ್ಲಿ ಪ್ರಸನ್ನಾನಂದಪುರಿ ಶ್ರೀಗಳು ಧರಣಿ ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ.
ನಮ್ಮ ಬೇಡಿಕೆಗೆ ಸಹಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟ ಸದಸ್ಯರಿಗೆ, ವಿಪಕ್ಷ ನಾಯಕರನ್ನು ಕರೆಸಿ ಅಭಿನಂದನೆ ಸಲ್ಲಿಸುತ್ತೇವೆ. ಈಗ ಹೋರಾಟಕ್ಕೆ ಪೂರ್ಣವಿರಾಮ ಹೇಳಲಾಗುತ್ತಿದೆ ಎಂದು ಪ್ರಸನ್ನಾನಂದಪುರಿ ಶ್ರೀ ಹೇಳಿದರು.
ಇನ್ನೆರಡು ದಿನದಲ್ಲಿ ಅಭಿನಂದನಾ ಸಮಾರಂಭ- ಪ್ರಸನ್ನಾನಂದಪುರಿ ಸ್ವಾಮೀಜಿ
ರಾಜ್ಯ ಸರ್ಕಾರ ಭಾನುವಾರ ಸುಗ್ರೀವಾಜ್ಞೆ ಹೊರಡಿಸಿದ್ದು, ನ್ಯಾಯಮೂರ್ತಿ ನಾಗಮೋಹನ ದಾಸ್ ಅವರಿಗೆ ಕೃತಜ್ಞತೆಗಳು. ಸಿಎಂ ಬಸವರಾಜ ಬೊಮ್ಮಾಯಿ, ಸಂಪುಟ ಸಚಿವರು ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇನ್ನೆರಡು ದಿನಗಳಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗುವುದು. ಕೇದ್ರ ಸಚಿವ ರಾಮದಾಸ್ ಅಠಾವಳೆ ಅಭಿನಂದನಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ | ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹುಕ್ಕೇರಿಯಲ್ಲಿ ಬೃಹತ್ ರ‍್ಯಾಲಿಗೆ ಚಾಲನೆ
ಬೊಮ್ಮಾಯಿ ಇಚ್ಛಾಶಕ್ತಿ- ಸಿದ್ದರಾಜು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಸಂಬಂಧ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಆಯೋಗ ರಚಿಸಿರಬಹುದು. ಆದರೆ ಮೀಸಲಾತಿ ಹೆಚ್ಚಿಸುವ ಆದೇಶಕ್ಕೆ ಸಹಿ ಹಾಕಿರುವುದು ಯಾರು ಎನ್ನುವುದು ಬಹಳ ಮುಖ್ಯ. ಮೀಸಲಾತಿ ಕೊಡುವುದು ಎಂದರೆ ಜೇನುಗೂಡಿಗೆ ಕೈಹಾಕಿದಂತೆ. ಜೇನುಗೂಡಿಗೆ ಕೈಹಾಕದೇ ಕಾಂಗ್ರೆಸ್‌ನವರು ಕೈ ಚೆಲ್ಲಿ ಕುಳಿತರು. ಈಗ ಬಸವರಾಜ ಬೊಮ್ಮಾಯಿ ಮೀಸಲಾತಿ ಕೊಡುವ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ. ಬೊಮ್ಮಾಯಿಯವರು ನ್ಯಾಯ ಸಮ್ಮತವಾಗಿ ಮೀಸಲಾತಿ ಕೊಟ್ಟಿದ್ದಾರೆ. ಬೇರೆ ಸಮುದಾಯಗಳಿಗೆ ಅನ್ಯಾಯ ಮಾಡದೆ ಮೀಸಲಾತಿ ಕೊಟ್ಟಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹೇಳಿದರು.
ಶ್ರೀಗಳಿಗೆ ಅಂಕಿತ ಪ್ರತಿ ಹಸ್ತಾಂತರಿಸಿದ ಸಚಿವ ಅಶೋಕ್
ಮೀಸಲಾತಿಯ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ ದೊರೆತ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಂಕಿತ ಆದೇಶ ಪ್ರತಿಯನ್ನು ಪ್ರಸನ್ನಾನಂದಪುರಿ ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು. ಶಾಸಕ ರಾಜುಗೌಡ ಹಾಗೂ ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಜತೆ ಆಗಮಿಸಿದ ಆರ್. ಅಶೋಕ್, ಸುಗ್ರೀವಾಜ್ಞೆ ಕುರಿತ ಗೆಜೆಟ್ ನೊಟಿಫಿಕೇಶನ್ ಅನ್ನು ಹಸ್ತಾಂತರ ಮಾಡಿದರು.
ಸಿಎಂ ಬೊಮ್ಮಾಯಿ ಚಾಣಕ್ಯ- ಆರ್. ಅಶೋಕ್
ನಮ್ಮ ಮುಖ್ಯಮಂತ್ರಿ ಚಾಣಕ್ಯ ವಿದ್ಯೆ ಕಲಿತವರು. ಚಾಣಕ್ಯತನದಿಂದ ಜೇನುಗೂಡಿಗೆ ಕಲ್ಲು ಹೊಡೆದಂತೆ ಮೀಸಲಾತಿ ಹೆಚ್ಚಿಸುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದೆ ಬಂದ ಸರ್ಕಾರದವರು ಯಾರೂ ಮೀಸಲಾತಿ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಒಬ್ಬರು ಏನು ಬ್ರದರ್ ಅಂತಾರೆ, ಇನ್ನೊಬ್ಬರು ನೋಡಿ ಜೇನುಗೂಡಿಗೆ ಕಲ್ಲು ಹೊಡೆದಿದ್ದೀರಿ, ನಿಮಗೆ ಮುಂದೆ ಸರಿಯಾಗಿ ಆಗುತ್ತೆ ಎಂದು ಹೇಳಿದ್ದರು. ಆದರೆ, ಇಂದು ನಾವು ಇದನ್ನು ಮಾಡಿದ್ದೇವೆ, ಏನೂ ಸಮಸ್ಯೆ ಆಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ | ಬೊಮ್ಮಾಯಿ ಅಡಬರಕಿ ಆರೆಸ್ಸೆಸ್, ಬಸವಾಕೃಪಾ ಬಿಟ್ಟು ಕೇಶವ ಕೃಪಾದ ಗುಲಾಮರಾಗಿದ್ದಾರೆ ಎಂದ ಸಿಎಂ ಇಬ್ರಾಹಿಂ
ಬೊಮ್ಮಾಯಿಗೆ ಇದೆ ಗಂಡೆದೆ
ಗಂಡೆದೆ ಇರೋರು ಮಾತ್ರ ಮೀಸಲಾತಿ ಕೊಡೋಕೆ ಸಾಧ್ಯ. ಆ ಗಂಡದೆ ತೋರಿಸಿದವರು ಬಸವರಾಜ ಬೊಮ್ಮಾಯಿ ಮಾತ್ರ. ಏನಾದರೂ ಮಾಡೇ ಮಾಡುತ್ತೇನೆ ಅನ್ನೋರು ಇತಿಹಾಸವನ್ನು ಸೃಷ್ಟಿಸುತ್ತಾರೆ. ಏನೂ ಮಾಡೋಕೆ ಆಗದವರು ಮಣ್ಣು ಸೇರುತ್ತಾರೆ. ಈಗ ಇತಿಹಾಸ ತೋರಿಸಿದ್ದು ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಎಂದು ಅಶೋಕ್ ಹೇಳಿದರು.
ಎಲ್ಲ ಸಮುದಾಯಗಳಿಗೂ ಸಿಗಲಿದೆ ನ್ಯಾಯ
ಒಕ್ಕಲಿಗ ಸಮುದಾಯ ಮತ್ತು ಇತರೆ ಸಮುದಾಯಗಳಿಗೆ ಮೀಸಲಾತಿ ನೀಡುವ ವಿಚಾರವು ಸರ್ಕಾರದ ಗಮನದಲ್ಲಿದೆ. ನಮ್ಮ ಸಮುದಾಯದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಕರೆ ಮಾಡಿದ್ದರು. ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ನೀಡುವ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಸ್ವಾಮೀಜಿ ಜತೆ ಈ ಬಗ್ಗೆ ಮಾತನಾಡಲಾಗುವುದು. ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗುವಂತೆ ನೋಡಿಕೊಳ್ಳಲಾಗುವುದು. ಚರ್ಚೆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದರು.
ಶಾಸಕ ರಾಜೂಗೌಡ ಡೈನಾಮಿಕ್ ಹೀರೋ- ಪ್ರಸನ್ನಾನಂದ ಸ್ವಾಮೀಜಿ
ಹಿಂದಿನ ಮುಖ್ಯಮಂತ್ರಿಗಳು ನಮ್ಮ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದರು. ಆಗ ನಾವು ಅವರನ್ನು ಸಂಪರ್ಕ ಮಾಡಿದಾಗ ಮೀಸಲಾತಿ ಬಗ್ಗೆ ನಿರ್ಣಯ ಮಾಡಲು ಹಿಂದೇಟು ಹಾಕಿದ್ದರು. ಆದರೆ, ಇಂದಿನ ಮುಖ್ಯಮಂತ್ರಿ ಬೊಮ್ಮಾಯಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೆ, ಈ ನಿಟ್ಟಿನಲ್ಲಿ ಶ್ರಮವಹಿಸಿದ ಶಾಸಕ ರಾಜೂಗೌಡ ಡೈನಾಮಿಕ್ ಹೀರೋ ಎಂದು ಪ್ರಸನ್ನಾನಂದ ಸ್ವಾಮೀಜಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ | ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ; ಸುಗ್ರೀವಾಜ್ಞೆ ಆದೇಶ ಪ್ರತಿಗೆ ರಾಜ್ಯಪಾಲರ ಅಂಕಿತ