Site icon Vistara News

100ನೇ ದಿನಕ್ಕೆ ಕಾಲಿಟ್ಟ ಮೀಸಲಾತಿ ಹೋರಾಟ: ರಾಜ್ಯಾದ್ಯಂತ ಬೆಂಬಲ

Reservation Protest

ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ನಡೆಸುತ್ತಿರುವ ಹೋರಾಟ ನೂರು ದಿನ ಪೂರೈಸಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸ್ವಾಮೀಜಿ ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಶಿಷ್ಟ ಜಾತಿಯ ಮೀಸಲಾತಿ 15% ರಿಂದ 17% ಆಗಬೇಕು. ಪರಿಶಿಷ್ಟ ಪಂಗಡ ಮೀಸಲಾತಿ ೩% ರಿಂದ ೭‌.೫% ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿದ್ದ ಭಾರಿ ಬಿಸಿಲು ಹಾಗೂ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಲ್ಲೂ ಪ್ರತಿಭಟನೆ ಕೈಬಿಟ್ಟಿಲ್ಲ.

ಇದನ್ನೂ ಓದಿ | ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನಿರ್ವಹಣೆ ಕುರಿತು ಪರಿಶೀಲನೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಸ್ವಾಮೀಜಿಯವರ ಹೋರಾಟ ನೂರನೇ ದಿನಕ್ಕೆ ಕಾಲಿಡುತ್ತಿದ್ದಂತೆ, ಸ್ವಾಮೀಜಿಯವರನ್ನು ಬೆಂಬಲಿಸಿ ರಾಜ್ಯದ ಅನೇಕ ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪ್ರತಿಭಟನಾಕಾರರು ಅರೆಬೆತ್ತಲೆ ಮೆರವಣಿಗೆ ನಡೆಸಿದ್ದಾರೆ.

ಮೀಸಲಾತಿ ಕುರಿತು ನ್ಯಾ. ನಾಗಮೋಹನದಾಸ್ ನಗರದ ವಾಲ್ಮೀಕಿ ವೃತ್ತದಿಂದ ನಗರದ ವಿವಿಧೆಡೆ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಕ್ರಿಯಾ ಸಮಿತಿಯಿಂದ ಪ್ರತಿಭಟಿಸಿದರು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಗರದ ವಿವಿಧೆಡೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನಾನಿರತ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ

ಕೊಪ್ಪಳದಲ್ಲೂ ನಾಯಕ ವಾಲ್ಮೀಕಿ ಸಮಾಜದಿಂದ ಮೀಸಲಾತಿ ಹೆಚ್ಚಳಕ್ಕೆ ಪ್ರತಿಭಟನೆಗಳು ನಡೆದವು. ವಾಲ್ಮೀಕಿ ಸಮುದಾಯ ಭವನದಿಂದ ಪ್ರತಿಭಟನೆ ಆರಂಭವಾಯಿತು. ಮಳೆ ಹಿನ್ನೆಲೆ ತಲೆಗೆ ಪ್ಲಾಸ್ಟಿಕ್ ಚೀಲ ಹಾಕಿಕೊಂಡು ಸರಕಾರದ ವಿರುದ್ದ ಘೋಷಣೆ ಪ್ರತಿಭಟನೆ ನಡೆಸಿದರು.

ಬಾಗಲಕೋಟೆಯಲ್ಲಿ ಪ್ರತಿಭಟನಾಕಾರರು ಟೈರ್‌ ದಹಿಸಲು ಮುಂದಾದಾಗ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಎಸ್ ಟಿ ಮೀಸಲಾತಿ ಹೋರಾಟಗಾರ ಜಯರಾಜ ಹಾದಿಕರ್‌, ಡಿಸಿ ಕಚೇರಿ ಎದುರು ಟೈರ್ ದಹಿಸಲು ಮುಂದಾದರು. ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಟೈರ್‌ ದಹಿಸುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಪೆಟ್ರೋಲ್‌ ಸುರಿಯಲು ಮುಂದಾದರು. ಕೆಲಕಾಲ ವಾಗ್ವಾದ ನಡೆದ ನಂತರ ಪರಿಸ್ಥಿತಿಯನ್ನು ಬಾಗಲಕೋಟೆ ನವನಗರ ಪೊಲೀಸರು ಶಾಂತಗೊಳಿಸಿದರು.

ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ
ಹೆಚ್ಚಳ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು. ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ಆರ್.ಹನುಮಂತಪ್ಪ ಮಾತನಾಡಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ 100 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಕೂತಿದ್ದಾರೆ. ಮುಖ್ಯಮಂತ್ರಿಗಳು ಗುರುಗಳನ್ನು ಈವರೆಗೆ ಭೇಟಿ ಮಾಡಿಲ್ಲ, ಬೇಡಿಕೆಯನ್ನು ಈಡೇರಿಸಿಲ್ಲ. ಆದ್ಧರಿಂದ ನಾವು ಇಂದು ರಾಜ್ಯಾದ್ಯಂತ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬೇಡಿಕೆ ಈಡೇರಿಸದೇ ಹೋದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.

ಚಿತ್ರದುರ್ಗದ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ, ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಜಾಥಾ ಆಯೋಜಿಸಲಾಗಿತ್ತು.

ಇದನ್ನೂ ಓದಿ| ಕೊಪ್ಪಳದಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 402 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ

Exit mobile version