ಬೆಳಗಾವಿ: ಇಲ್ಲಿನ ಜಾಧವ ನಗರದ ವ್ಯಾಪ್ತಿಯಲ್ಲಿ ಚಿರತೆಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿ ಪರಾರಿಯಾಗಿ ಸೆಪ್ಟೆಂಬರ್ ೩ಕ್ಕೆ ೩೧ ದಿನ ಆಗುತ್ತದೆ. ಆಗಾಗ ಕಣ್ಣಾಮುಚ್ಚಾಲೆ ಆಡುತ್ತಿರುವ, ಟ್ರ್ಯಾಪ್ ಕ್ಯಾಮೆರಾಗಳಲ್ಲಿ ಕಾಣಸಿಗುವ, ಹೆಜ್ಜೆ ಗುರುತು ಮೂಡಿಸಿ ಮರೆಯಾಗುವ ಈ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ, ಪೊಲೀಸರು ಮಾಡದ ಪ್ರಯತ್ನಗಳಿಲ್ಲ. ಇಲ್ಲಿನ ಗಾಲ್ಫ್ ಮೈದಾನ, ಹಿಂಡಲಗಾ ಜೈಲು ಪರಿಸರಗಳಲ್ಲಿ ಅದೆಷ್ಟು ಬಾರಿ ಜಾಲಾಡಿದರೂ ಬಲೆಗೆ ಬಿದ್ದಿಲ್ಲ. ಅದೊಂದು ಸಾರಿ ಎಲ್ಲರೂ ನೋಡನೋಡುತ್ತಿದ್ದಂತೆಯೇ ತಣ್ಣಗೆ ದಾರಿಯಲ್ಲಿ ನಡೆದುಹೋಗಿತ್ತು!
ಇಂಥ ಚಿರತೆಯನ್ನು ಬಗಲಲ್ಲಿಟ್ಟುಕೊಂಡ ಆ ಭಾಗದ ಜನರ ಪರಿಸ್ಥಿತಿ ಹೇಗಿರಬೇಡ ಯೋಚಿಸಿ. ಮಕ್ಕಳಿಗೆ ಶಾಲೆಯಿಲ್ಲ, ಮನೆಯಿಂದ ಹೊರಗಡೆ ಕಳುಹಿಸುವಂತಿಲ್ಲ. ತಾವೂ ಹೊರಗೆಲ್ಲೂ ಅಡ್ಡಾಡುವಂತಿಲ್ಲ. ಸಂಜೆಗತ್ತಲಾದರೆ ಮನೆಯೇ ಜೈಲಾಗಿ ಪರಿವರ್ತನೆಯಾಗುವ ಭಯಾನಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ, ಮನುಷ್ಯ ಪ್ರಯತ್ನಗಳೆಲ್ಲ ವಿಫಲವಾದ ಕಾಲದಲ್ಲಿ ಅವರಿಗೆ ನೆನಪಿಗೆ ಬಂದಿದ್ದು ದೇವರು!
ಹೌದು, ಇಲ್ಲಿನ ಮನೆಯೊಂದರಲ್ಲಿ ನಡೆದ ಗಣೇಶನ ಹಬ್ಬದಲ್ಲಿ ಮಾಡಿದ ಪ್ರಧಾನ ಪ್ರಾರ್ಥನೆಯೇ ದೇವರೇ ಒಮ್ಮೆ ಈ ಚಿರತೆ ಸಿಗುವಂತೆ ಮಾಡು, ನಮ್ಮನ್ನು ಈ ಸಂಕಷ್ಟದಿಂದ ಮುಕ್ತಗೊಳಿಸು ಅಂತ.
ಚಿರತೆಯ ಗೊಂಬೆ ಇಟ್ಟು ಪೂಜೆ!
ವಿಶ್ವೇಶ್ವರಯ್ಯ ನಗರ ನಿವಾಸಿ ಕಾರ್ತಿಕ ಪೋಲೆಣ್ಣವರ್ ಎಂಬುವರ ಮನೆಯಲ್ಲಿ ಗಣೇಶನ ಜೊತೆ ಚಿರತೆಯ ಬೊಂಬೆ ಪ್ರತಿಷ್ಠಾಪನೆ ಮಾಡಲಾಗಿದೆ. ಐದು ದಿನಗಳ ಕಾಲ ಮನೆಯಲ್ಲಿ ಗಣೇಶನ ಪೂಜೆ ಮಾಡಲಾಗಿದ್ದು ಪ್ರತಿ ದಿನವೂ ಪ್ರಾರ್ಥನೆ ಸಲ್ಲಿಸಲಾಗಿದೆ.
ʻʻಗಾಲ್ಫ್ ಮೈದಾನದಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ನಮ್ಮ ಮನೆ ಇದೆ. ‘ಮಕ್ಕಳು ಶಾಲೆಗೆ ಹೋಗಲಾಗುತ್ತಿಲ್ಲ, ನಮಗೂ ಹೊರಗೆ ಹೋಗಲು ಹೆದರಿಕೆ ಆಗ್ತಿದೆ. ಎಷ್ಟೇ ಕಷ್ಟಪಟ್ಟರೂ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯೂ ವಿಫಲವಾಗಿದೆ. ಆದಷ್ಟು ಬೇಗ ಚಿರತೆ ಸಿಗಲಿ ಅಂತಾ ಗಣೇಶನ ಬಳಿ ಪ್ರಾರ್ಥನೆ ಮಾಡ್ತಿದ್ದೇವೆʼʼ ಎಂದು ಮನೆಯವರಾಗಿರುವ ಸವಿತಾ ಚೌಗುಲೆ ಹೇಳಿದ್ದಾರೆ. ಇದರ ಜತೆಗೆ ಸಮಸ್ಯೆಯನ್ನು ಗಣೇಶನಿಗೆ ಮನವರಿಕೆ ಮಾಡುವ ಉದ್ದೇಶವೇನೋ ಎಂಬಂತೆ ʻ’ಚಿರತೆಯ ಚೆಲ್ಲಾಟ.. ಅರಣ್ಯ ಸಿಬ್ಬಂದಿಯ ಪರದಾಟ’ ಎಂಬ ಬರಹವನ್ನೂ ದೇವರ ಮುಂದೆ ಬರೆಯಲಾಗಿದೆ. ಇದು ಒಂದು ರೀತಿಯಲ್ಲಿ ವಿಡಂಬನೆಯಂತೆ ಕಂಡರೂ ಜನರ ಅಸಹಾಯಕತೆಯನ್ನು ಬಿಂಬಿಸಿದೆ.
ಚಿರತೆಯನ್ನು ಪತ್ತೆ ಹಚ್ಚಿ ಹಿಡಿಯಲು ಅರಣ್ಯ ಇಲಾಖೆ, ಪೊಲೀಸರು ದೊಡ್ಡ ಕಾರ್ಯಾಚರಣೆಗಳನ್ನೇ ಮಾಡಿದ್ದಾರೆ. 9 ಬೋನು, 23 ಟ್ರ್ಯಾಪ್ ಕ್ಯಾಮರಾ ಹಾಕಿದರೂ ಉಪಯೋಗವಾಗಿಲ್ಲ. ಈವರೆಗೂ ಚಿರತೆ ಶೋಧಕಾರ್ಯಕ್ಕೆ 50 ಲಕ್ಷಕ್ಕೂ ಹೆಚ್ಚು ಹಣ ವೆಚ್ಚವಾಗಿದೆ. ಆಪರೇಷನ್ ಗಜ ಪಡೆ, ಮುಧೋಳ ನಾಯಿ, ಲೋಕಲ್ ಅಲೆಮಾರಿ ಶ್ವಾನ ಪಡೆ, ಹಂದಿ ಹಿಡಿಯುವವರು ಹೀಗೆ ಎಲ್ಲರನ್ನೂ ಬಳಸಿಕೊಳ್ಳಲಾಗಿದೆ. ಆದರೆ, ಇನ್ನೂ ಫಲ ಸಿಕ್ಕಿಲ್ಲ. ಕಳೆದ ಒಂದು ವಾರದಿಂದ ಚಿರತೆಯ ಯಾವುದೇ ಜಾಡು ಕಾಣದೆ ಇರುವುದರಿಂದ ಚಿರತೆ ಆ ಜಾಗದಿಂದ ಬೇರೆ ಕಡೆಗೆ ಹೋಗಿರಬಹುದು ಎಂಬ ಸಣ್ಣ ಸಂಶಯವೊಂದು ಕಾಡಿದೆ. ಇದರ ನಡುವೆ, ಭಾನುವಾರ ನಿರ್ಣಾಯಕ, ಕೊನೆಗೆ ಕಾರ್ಯಾಚರಣೆಗೆ ಇಲಾಖೆ ರೆಡಿಯಾಗಿದೆ. ಇಂದು ಸಿಗದೆ ಇದ್ದರೆ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ.