Site icon Vistara News

NEET: ನೀಟ್‌ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

NEET

Resolution Against NEET, BBMP Splitting; Here Are Karnataka Cabinet's Decisions

ಬೆಂಗಳೂರು: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ರದ್ದುಗೊಳಿಸಬೇಕು ಎಂದು ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಆಗ್ರಹ ಕೇಳಿಬರುತ್ತಿದೆ. ಅದರಲ್ಲೂ, ನೀಟ್‌ ಯುಜಿ ಪರೀಕ್ಷೆಯ (NEET UG 2024) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ಸುದ್ದಿಯಾದ ಬಳಿಕ ಆಗ್ರಹ ಹೆಚ್ಚಾಗಿದೆ. ಇದರ ಬೆನ್ನಲ್ಲೇ, ಕರ್ನಾಟಕದಲ್ಲೂ ನೀಟ್‌ ಪರೀಕ್ಷೆ ಸೇರಿ ಕೇಂದ್ರ ಸರ್ಕಾರದ ಮೂರು ತೀರ್ಮಾನಗಳನ್ನು ವಿರೋಧಿಸುವ ಕುರಿತು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರ ಜತೆಗೆ, ಬಿಬಿಎಂಪಿ ವಿಭಜನೆಗೂ ಸಂಪುಟ ಸಭೆ ಅಸ್ತು ಎಂದಿದೆ.

ಬೆಂಗಳೂರು ವಿಭಜನೆಗೆ ಸಮ್ಮತಿ

ಬಿಬಿಎಂಪಿಯನ್ನು ವಿಭಜಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಬೆಂಗಳೂರನ್ನು ಐದು ವಿಭಾಗಗಳಾಗಿ ವಿಂಗಡಿಸುವ ವಿಧೇಯಕಕ್ಕೆ ಸಂಪುಟ ಸಭೆಯಲ್ಲಿ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡುವ ಸಲಹೆಗೆ ಅನುಮೋದನೆ ನೀಡಲಾಗಿದೆ. ಮಂಗಳವಾರವೇ ವಿಧೇಯಕ ಮಂಡನೆ ಮಾಡುವ ಸಾಧ್ಯತೆ ಇದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರಾಗಿರುತ್ತಾರೆ. 5-10 ಕಾರ್ಪೊರೇಷನ್‌ಗಳು ಇರಲಿದ್ದು, ಒಂದೊಂದು ಕಾರ್ಪೊರೇಷನ್‌ಗೆ ಒಬ್ಬ ಆಯುಕ್ತ ಇರಲಿದ್ದಾರೆ. ಜಲಮಂಡಳಿ, ಬಿಡಿಎ, ಬೆಸ್ಕಾಂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರಲಿವೆ. ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಕೇಂದ್ರ ಸೇರಿದಂತೆ ಇನ್ನಷ್ಟು ಬಿಬಿಎಂಪಿ ಆಗಿ ವಿಂಗಡಣೆ ಮಾಡಲಾಗುತ್ತದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯು ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ರಾಮನಗರ, ಕನಕಪುರ, ಆನೆಕಲ್, ಬೆಂಗಳೂರು ಗ್ರಾಮಾಂತರ ಪ್ರದೇಶದವರೆಗೆ ಇರಲಿದೆ.

ಏನಿದು ಬಿಲ್?

ದಿ ಗ್ರೇಟರ್ ಬೆಂಗಳೂರು ಗೌವರ್ನೆನ್ಸ್ ಬಿಲ್ – 2024ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿ ವಿವಿಧ ಹಂತದಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಲಾಗುತ್ತದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿ ಸಿಟಿ ಕಾರ್ಪೊರೇಷನ್‌ಗಳು ಬರಲಿವೆ.‌ ಈ ವರದಿ ಪ್ರಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಗೆ ಪ್ರಸ್ತಾಪ ಮಾಡಲಾಗಿದೆ. ಈ GBAಗೆ ಯೋಜನೆ ಮತ್ತು ಹಣಕಾಸು ಅಧಿಕಾರ ನಿರ್ವಹಣೆಯ ಅಧಿಕಾರ ಇರಲಿದೆ.

ಇದು ಸುಮಾರು‌ 1,400 ಚದರ ಕಿ.ಲೋ ಮೀಟರ್ GBA ವ್ಯಾಪ್ತಿಗೆ ಬರಲಿದೆ. 1 ರಿಂದ 10 ಕಾರ್ಪೊರೇಷನ್ ಗಳು GBA ವ್ಯಾಪ್ತಿಗೆ ಬರಲಿದೆ. 1-10 ಕಾರ್ಪೊರೇಷನ್ ಗಳು 950 ಚದರ ಕಿ.ಲೋ ಮೀಟರ್ ವ್ಯಾಪ್ತಿ ಹೊಂದಲಿದೆ. ಸದ್ಯ 708 ಚದರ ಕಿ.ಲೋ ಮೀಟರ್ ಬಿಬಿಎಂಪಿ ರದ್ದಾಗುತ್ತದೆ. ಈ ಕರಡು ಮಸೂದೆ ಸುಮಾರು 400 ವಾರ್ಡ್ ಗಳ ರಚನೆಗೆ ಪ್ರಸ್ತಾಪಿಸಿದೆ. ಈ ಕರಡು ಮಸೂದೆಯಂತೆ ಬಿಡಿಎ ಅದರ ಯೋಜನೆ ರೂಪಿಸುವ ಅಧಿಕಾರ ಕಳೆದುಕೊಳ್ಳಲಿದೆ. ಆದರೆ ಬೃಹತ್ ಮೂಲಸೌಕರ್ಯ ಯೋಜನೆಗಳ ಕಾಮಗಾರಿಯನ್ನ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ನೀಟ್‌ ಸೇರಿ 3 ತೀರ್ಮಾನಗಳಿಗೆ ವಿರೋಧ

ಕೇಂದ್ರ ಸರ್ಕಾರದ ನೀಟ್‌ ಪರೀಕ್ಷೆ, ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆ ಹಾಗೂ ಒಂದು ದೇಶ, ಒಂದು ಎಲೆಕ್ಷನ್‌ ತೀರ್ಮಾನಗಳನ್ನು ವಿರೋಧಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲ, ತಮಿಳುನಾಡಿನಲ್ಲಿ ನೀಟ್‌ ಪರೀಕ್ಷೆ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಮಂಗಳವಾರವೇ (ಜುಲೈ 23) ಈ ಕುರಿತು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: NEET UG 2024: ನೀಟ್‌ ಪ್ರಶ್ನೆಪತ್ರಿಕೆ ಟ್ರಂಕ್‌ ಕದ್ದ ಮತ್ತೊಬ್ಬ ಕಿಂಗ್‌ಪಿನ್‌ ಸೇರಿ ಮೂವರನ್ನು ಬಂಧಿಸಿದ ಸಿಬಿಐ!

Exit mobile version