ಬೆಂಗಳೂರು: ಅಡಿಕೆ ಬೆಳೆ ಹಾಗೂ ಬೆಳೆಗಾರರ ಸಮಸ್ಯೆಗಳ (Arecanut Issue) ಬಗ್ಗೆ ಚರ್ಚೆ ನಡೆಸಲು ಗುರುವಾರ (ಜುಲೈ 20) ಅಡಿಕೆ ಬೆಳೆಗಾರರ ಟಾಸ್ಕ್‌ಫೋರ್ಸ್ (Arecanut Growers Task Force) ಸಭೆಯನ್ನು ನಡೆಸಲಾಗಿದ್ದು, ಅಡಿಕೆ ಬೆಳೆಗೆ ಯಾವುದೇ ಸಮಸ್ಯೆ ಬಂದರೂ ಒಟ್ಟಾಗಿ ನಿಲ್ಲುವ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ. ಹವಾಮಾನ ವೈಪರೀತ್ಯ, ಅತಿವೃಷ್ಟಿ – ಅನಾವೃಷ್ಟಿಗಳ ನಡುವೆ ಎಲೆಚುಕ್ಕಿ ರೋಗ, ಬೆಲೆ ಏರಿಳಿತ, ಆಮದು ಆತಂಕಗಳ ಮಧ್ಯೆ ಕಂಗೆಟ್ಟಿರುವ ರಾಜ್ಯದ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಇದೇ ವೇಳೆ ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ (Vistara News CEO Hariprakash Konemane) ಅವರ ಮುತುವರ್ಜಿಯನ್ನು ಮಾಜಿ ಗೃಹ ಸಚಿವ, ಅಡಿಕೆ ಬೆಳೆಗಾರರ ಟಾಸ್ಕ್‌ಫೋರ್ಸ್ ಅಧ್ಯಕ್ಷರಾದ ಆರಗ ಜ್ಞಾನೇಂದ್ರ ಶ್ಲಾಘಿಸಿದರು.
ಶಾಸಕರ ಭವನದಲ್ಲಿ ನಡೆದ ಅಡಿಕೆ ಬೆಳೆಗಾರರ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಶಿವಾನಂದ ಪಾಟೀಲ್, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಉಪ ಸಭಾಪತಿ ಪ್ರಾಣೇಶ್, ಕೋಟಾ ಶ್ರೀನಿವಾಸ್ ಪೂಜಾರಿ, ವಿಸ್ತಾರ ಸಿಇಒ ಹರಿಪ್ರಕಾಶ್ ಕೋಣೆಮನೆ ಸೇರಿದಂತೆ 25 ಶಾಸಕರು, ಅಡಿಕೆ ಬೆಳೆಗಾರರ ಪ್ರತಿನಿಧಿಗಳು ಭಾಗಿಯಾಗಿದ್ದರು.
ಹರಿಪ್ರಕಾಶ್ ಕೋಣೆಮನೆ ಕಾರ್ಯವೈಖರಿಗೆ ಶ್ಲಾಘನೆ
ಈ ವೇಳೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ವಿಸ್ತಾರ ನ್ಯೂಸ್ ಸಿಇಒ ಹರಿಪ್ರಕಾಶ್ ಕೋಣೆಮನೆ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅಡಿಕೆ ಹಾಗೂ ಬೆಳೆಗಾರರ ಪರವಾಗಿ ನಿರಂತರವಾಗಿ ಅವರು ಧ್ವನಿ ಎತ್ತುತ್ತಾ ಬಂದಿದ್ದಾರೆ. ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರೋಪಾಯಗಳ ಬಗ್ಗೆ ಆಗಾಗ ಅಗತ್ಯ ಸಲಹೆಗಳನ್ನೂ ನೀಡುತ್ತಾ ಬಂದಿದ್ದಾರೆ. ಇನ್ನು ಅವರು ಪತ್ರಿಕೆಗಳಲ್ಲಿದ್ದಾಗಲೂ ಸಹ ಅಡಿಕೆ ಬೆಳೆಗಾರರ ಸಮಸ್ಯೆ, ರೈತರ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಕೆಲಸವನ್ನು ಮಾಡಿದ್ದಾರೆ. ಇವರೆಲ್ಲರ ನಿರಂತರ ಶ್ರಮದಿಂದ ಇಂದು ಅಡಿಕೆ ಬೆಳೆಗಾರರಿಗೆ ಶಕ್ತಿ ಬಂದಿದೆ ಎಂದು ಹೇಳಿದರು.
ಅಡಿಕೆ ಸಮಸ್ಯೆಗಳ ಬಗ್ಗೆ ಚರ್ಚೆ
ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗದ (Leaf spot disease on arecanut crop) ಸಮಸ್ಯೆ ಬಹಳವಾಗಿಯೇ ಕಾಡುತ್ತಿದೆ. ಇದಕ್ಕಾಗಿ ತಜ್ಞರು ಸಹ ಅಧ್ಯಯನವನ್ನು ಕೈಗೊಂಡಿದ್ದಾರೆ. ಆದರೆ, ಇದಕ್ಕೆ ಶಾಶ್ವತ ಪರಿಹಾರ ದೊರೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಇನ್ನು ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ಸಹ ಬೆಳೆಗಾರರ ಮೇಲೆ ಭಾರಿ ಪರಿಣಾಮವನ್ನು ಬೀರುತ್ತಿದೆ. ಇದರಿಂದ ಬೆಲೆ ಏರಿಳಿತವಾಗುತ್ತಿದ್ದು, ಕೇಂದ್ರ ಸರ್ಕಾರದ ಬಳಿ ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ನಿಟ್ಟಿನಲ್ಲಿಯೂ ಮಾತುಕತೆಗಳು ನಡೆಯಿತು. ಒಟ್ಟಾರೆಯಾಗಿ ಅಡಿಕೆ ಬೆಳೆ ಸಂಬಂಧ ಎದುರಾಗುವ ಎಲ್ಲ ಸಮಸ್ಯೆಗಳಿಗೆ ಅಡಿಕೆ ಬೆಳೆಯುವ ಪ್ರದೇಶದ ಜನಪ್ರತಿನಿಧಿಗಳು, ಪ್ರಮುಖರು ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂಬ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ.
ಅಡಿಕೆ ಟಾಸ್ಕ್‌ಫೋರ್ಸ್ ಸಭೆ
ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ: ಆರಗ ಜ್ಞಾನೇಂದ್ರ
ರಾಜ್ಯದ ಅಡಿಕೆ ಬೆಳೆಗಾರರ ಪ್ರತಿನಿಧಿಸುವ ಎಂಎಲ್‌ಎ, ಎಂಎಲ್‌ಸಿಗಳ ಸಭೆ ನಡೆಸಲಾಗಿದೆ. ಅಡಿಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ಅಡಿಕೆ ಬೆಳೆಗೆ ಯಾವುದೇ ಸಮಸ್ಯೆ ಬಂದರೂ ಒಟ್ಟಾಗಿ ನಿಲ್ಲಬೇಕು ಎಂದು ಒಮ್ಮತದ ನಿರ್ಧಾರ ಮಾಡಿದ್ದೇವೆ. ಹಿಂದೆಯೂ ಕೂಡ ರಾಜ್ಯ,ಕೇಂದ್ರ ಸರ್ಕಾರದ ವಿಪತ್ತುಗಳನ್ನು ತೊಡೆದು ಹಾಕುವ ಕೆಲಸವನ್ನು ಮಾಡಿದ್ದೇವೆ. 25 ಶಾಸಕರು ಹಾಗೂ ಸಚಿವರು ಭಾಗಿಯಾಗಿದ್ದರು ಎಂದು ಆರಗ ಜ್ಞಾನೇಂದ್ರ ಹೇಳಿದರು.
ಇದನ್ನೂ ಓದಿ: Assembly Session : ಸದನದಲ್ಲಿ ಮಾತನಾಡಲು ಬಿಡದ ಕಾಂಗ್ರೆಸ್‌ಗೆ ಬಿಜೆಪಿಯಿಂದ 10 ಪ್ರಶ್ನೆ
5 ಜಿಲ್ಲೆಗಳಿಗೆ ಹಬ್ಬಿರುವ ಎಲೆಚುಕ್ಕೆ ರೋಗ
ರಾಜ್ಯದ 2.15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ರೋಗವು ಅತಿ ಹೆಚ್ಚು ಅಡಿಕೆ ಬೆಳೆಯುವ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆವರಿಸಿದ್ದರೆ, ಉತ್ತರ ಕನ್ನಡದಲ್ಲಿಯೂ ರೋಗ ಕಾಣಿಸಿಕೊಂಡಿದೆ. ಅಂದರೆ ರಾಜ್ಯದಲ್ಲಿ ಒಟ್ಟು 45,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹರಡಿದೆ.