Site icon Vistara News

Karnataka Election 2023: ಹಾಸನದಲ್ಲಿ ಪತ್ನಿ ಭವಾನಿ ಜತೆ ರೇವಣ್ಣ ಕ್ಷೇತ್ರ ಸಂಚಾರ; ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ತಂತ್ರ

revanna with wife bhavani in hassan election campaign and jds workers opinion poll strategy karnataka election 2023 updates

ಹಾಸನ: ಹಾಸನ ವಿಧಾನಸಭಾ (Karnataka Election 2023) ಜೆಡಿಎಸ್‌ ಟಿಕೆಟ್‌ ಅನ್ನು ಪಡೆಯಲೇಬೇಕು ಎಂದು ಪಣತೊಟ್ಟಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಭವಾನಿ ರೇವಣ್ಣ ಮೂರು ದಿನಗಳ ಕಾಲ ಕ್ಷೇತ್ರ ಸಂಚಾರಕ್ಕೆ ಮುಂದಾಗಿದ್ದು, ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹವನ್ನು ಆರಂಭಿಸಿದ್ದಾರೆ. ದೊಡ್ಡಪುರ ಗ್ರಾಮದಿಂದ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಇಲ್ಲಿ ಸಂಗ್ರಹವಾಗುವ ಅಭಿಮತವನ್ನು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಂದಿಡಲು ಮುಂದಾಗಿದ್ದಾರೆ. ಈ ಬಗ್ಗೆ ಮಾಜಿ ಶಾಸಕ ಬಿ.ವಿ.ಕರೀಗೌಡ ಪ್ರತಿಕ್ರಿಯೆ ನೀಡಿದ್ದು, ಶಾಸಕ ಪ್ರೀತಂಗೌಡ ಪಂಥಾಹ್ವಾನವನ್ನು ಸ್ವೀಕರಿಸಲೇಬೇಕು. ಭವಾನಿ ಇಲ್ಲವೇ ರೇವಣ್ಣ ಅವರೇ ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿಯಾಗಬೇಕು ಎಂದು ಹೇಳಿದ್ದಾರೆ.

ಪ್ರಚಾರಕ್ಕೆ ಆಗಮಿಸಿದ ಎಚ್.ಡಿ. ರೇವಣ್ಣ

ದೊಡ್ಡಪುರದ ಮಲ್ಲೇಶ್ಚರ ದೇವಾಲಯದಲ್ಲಿ ಎಚ್‌.ಡಿ. ರೇವಣ್ಣ ಅವರು ಪತ್ನಿ ಭವಾನಿ ರೇವಣ್ಣ ಅವರೊಂದಿಗೆ ಪೂಜೆ ಸಲ್ಲಿಸಿ ಕಾರ್ಯಕರ್ತರ ಸಭೆ ನಡೆಸಿದರು. ಅಲ್ಲದೆ, ಮೂರು ದಿನಗಳ ಕಾಲ ಭವಾನಿ ಜತೆಗೆ ಹಾಸನ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ಒಟ್ಟು 12 ಗ್ರಾಮ ಪಂಚಾಯಿತಿಗಳಲ್ಲಿ ಸುತ್ತಾಡಲಿದ್ದಾರೆ. ಈಗಾಗಲೇ ಈ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಸ್ವರೂಪ್ ಈ ಎಲ್ಲ ಗ್ರಾಮಗಳಲ್ಲಿ ಒಂದು ಸುತ್ತಿನ ಪ್ರಚಾರವನ್ನು ನಡೆಸಿದ್ದಾರೆ. ಆದರೆ, ಸ್ವರೂಪ್‌ಗೆ ಪರ್ಯಾಯವಾಗಿ ತಾವು ಅಥವಾ ಭವಾನಿಯೇ ಕಣಕ್ಕಿಳಿಯಬೇಕು ಎಂದು ಹಠ ತೊಟ್ಟಿರುವ ರೇವಣ್ಣ ಈಗ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಹಾಸನ ಕ್ಷೇತ್ರದ ದೊಡ್ಡಪುರದಲ್ಲಿ ರೇವಣ್ಣ ಮತ್ರು ಭವಾನಿಗೆ ಭರ್ಜರಿ ಸ್ವಾಗತ ದೊರೆತಿದೆ. ಕಾರ್ಯಕರ್ತರು ಹೂಮಳೆ ಸುರಿಸಿ ಸ್ವಾಗತ ಕೋರಿದರು. ಪ್ರಜ್ವಲ್‌ ರೇವಣ್ಣ ಜತೆಗಿದ್ದರು.

ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಭವಾನಿ ರೇವಣ್ಣ

ರೈತರು, ಸ್ತ್ರೀಶಕ್ತಿ ಸಂಘದವರು ಸಾಲ ಕಟ್ಟಬೇಡಿ, ಮನ್ನಾ ಮಾಡಿಸುತ್ತೇವೆ- ರೇವಣ್ಣ

ನಾವು ಮಾಡಿದ ಅಭಿವೃದ್ಧಿಯನ್ನು ಪ್ರಚಾರ ಮಾಡಿಲ್ಲ. ನಾನು ಐವತ್ತು ಫುಡ್ ಕೋರ್ಟ್ ಮಾಡಿದ್ದೆ. ನಮಗೆ ಬೇಕಾಗಿರುವುದು ಬಡವರ ಬದುಕು. ದೇವೇಗೌಡರ ಶಕ್ತಿ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಕೋವಿಡ್ ಸಮಯದಲ್ಲಿ ಸಾಲ ಮಾಡಿದವರ ಪಟ್ಟಿ ಮಾಡಿಸುತ್ತೇನೆ. ಸ್ತ್ರೀ ಶಕ್ತಿ ಸಾಲವನ್ನೂ ಸಹ ಯಾರೂ ಕಟ್ಟಲು ಹೋಗಬೇಡಿ, ಆರಾಮವಾಗಿ ಇನ್ನೂ ಮೂರು ತಿಂಗಳು ಸುಮ್ಮನೆ ಇರಿ. ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಬಂದರೆ ಆ ಎಲ್ಲ ಸಾಲವನ್ನೂ ಮನ್ನಾ ಮಾಡಿಸುತ್ತೇನೆ ಎಂದು ಎಚ್.ಡಿ. ರೇವಣ್ಣ ಹೇಳಿದರು.

ಇದನ್ನೂ ಓದಿ: Sindhuri Vs Roopa : ಸಿಂಧೂರಿಗೆ ಬಿಗ್‌ ರಿಲೀಫ್‌, ಮಾನಹಾನಿಕರ ಹೇಳಿಕೆ ನೀಡದಂತೆ ರೂಪಾಗೆ ಕೋರ್ಟ್‌ ಆದೇಶ

ಭವಾನಿ ಅವರು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಇಡೀ ರಾಜ್ಯದಲ್ಲಿ ಹಾಸನ ಜಿಲ್ಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಅದು ಯಾರ ಕಾಲದಲ್ಲಿ ಎಂಬುದನ್ನು ಜನ ಮರೆತಿಲ್ಲ. ಪಕ್ಷ ಏನು ತೀರ್ಮಾನ ಕೊಡುತ್ತದೆಯೋ ಅದಕ್ಕೆ ನಾವೆಲ್ಲ ಬದ್ಧರಾಗಿರಬೇಕಾಗುತ್ತದೆ. ರೇವಣ್ಣ ಅವರೇ ಬನ್ನಿ ನೀವು, ಐವತ್ತು ಸಾವಿರ ಓಟು ಕಮ್ಮಿ ಆದ್ರೆ ರಾಜೀನಾಮೆ ಕೊಡ್ತೀನಿ ಅಂತ ಕರೆಯುತ್ತಿದ್ದಾರೆ. ನನಗೆ ನಮ್ಮ‌ ಜನ ಉಳಿಯಬೇಕು, ಈ ಜಿಲ್ಲೆ ಉಳಿಯಬೇಕು ಅಷ್ಟೇ ಎಂದು ಹೇಳಿದರು.

ನನಗೆ ಕುಟುಂಬ ರಾಜಕಾರಣ ಏನು ಇಲ್ಲ. ಕುಟುಂಬ ರಾಜಕಾರಣದ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳು ಒಂದು ನಿರ್ಣಯ ಮಾಡಲಿ. ಕುಟುಂಬದಿಂದ ಒಬ್ಬರೇ ನಿಲ್ಲಲಿ ಎಂಬ ತೀರ್ಮಾನವನ್ನು ತೆಗೆದುಕೊಳ್ಳಲಿ. ಆಗ ನಾನು ನಮ್ಮ ಮನೆಯಲ್ಲಿ ಎಲ್ಲರ ರಾಜೀನಾಮೆಯನ್ನೂ ಕೊಡಿಸುತ್ತೇನೆ. ನನಗೆ ನಮ್ಮ‌ ಪಕ್ಷ ಉಳಿಯಬೇಕು, ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳು ನಮ್ಮ ಪಕ್ಷ ಗೆಲ್ಲಬೇಕು. ನಮಗೆ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು. ದೇವೇಗೌಡರ ಕಣ್ಮುಂದೆ ಒಬ್ಬ ರೈತರ ಮಗ ಸಿಎಂ ಆಗಬೇಕು. ಆ ಕಾರಣಕ್ಕಾಗಿಯೇ ನಾನು ಹಳ್ಳಿಹಳ್ಳಿಗೆ ಹೋಗುತ್ತೇನೆ. ನಾವೆಲ್ಲ ದೇವೇಗೌಡರಿಂದ ಈ ಮಟ್ಟಕ್ಕೆ ಬಂದಿರೋದು. ಇದನ್ನು ಚಾಲೆಂಜ್ ಆಗಿ ತಗೋಬೇಕು. ನನಗೇನು ಹಾಸನದಿಂದ ಎಂಎಲ್‌ಎ ಆಗಬೇಕು ಅಂತ ಇಲ್ಲ. ನಾನು, ಭವಾನಿ ಎಂಎಲ್‌ಎ‌ ಆಗಬೇಕು ಎಂದೂ ಇಲ್ಲ. ಇಡೀ ರಾಜ್ಯದಲ್ಲಿ ಹಾಸನ ಜಿಲ್ಲೆಯನ್ನು ನಂಬರ್ ಒನ್ ಮಾಡಬೇಕು ಎಂಬುದಷ್ಟೇ ನನ್ನ ಗುರಿ ಎಂದು ರೇವಣ್ಣ ಹೇಳಿದರು.

ಶಾಸಕ ಪ್ರೀತಂ ಯುವಕರಿಗೆ ತೊಂದರೆ ಕೊಡ್ತಿದ್ದಾರೆ: ಪ್ರಜ್ವಲ್‌ ರೇವಣ್ಣ

ಜೆಡಿಎಸ್ ಪಕ್ಷದ ಚುನಾವಣೆ ಪ್ರಚಾರಕ್ಕೆ ಈಗ ಚಾಲನೆ ಸಿಕ್ಕಿದೆ. ಇದು ಇನ್ನೂ ಬೇಗ ಆಗಬೇಕಿತ್ತು. ಆದರೆ ಈಗಲೂ ಕಾಲ ಮಿಂಚಿಲ್ಲ. ಈ ನಿರ್ಧಾರ ಬಹಳಷ್ಟು ಮುಖಂಡರು, ಯುವಕರು, ತಾಯಂದಿರಿಗೆ ಶಕ್ತಿ ಕೊಡುತ್ತದೆ. ಶಾಸಕ ಪ್ರೀತಂ ಗೌಡ ಅಭಿವೃದ್ಧಿ ಮೂಲಕ ಮತ ಕೇಳುತ್ತಿಲ್ಲ. ಅವರು ಯಾವುದೇ ಕಡೆ ಹೋದರು ಯುವಕರನ್ನು ಹೊಡೆದಾಡಿಸಿ ಕೇಸ್ ಮಾಡಿಸುತ್ತಾರೆ. ಬಳಿಕ ಕೇಸ್‌ನಿಂದ ವಾಪಸ್ ತೆಗುಸುವುದಾಗಿ ಹೇಳಿ ಪಕ್ಷ ಸೇರಿಸಿಕೊಳ್ಳುತ್ತಾರೆ. ಆದರೆ, ಯುವಕರೇ ಧೈರ್ಯವಾಗಿರಿ‌, ಇನ್ನೆರಡು ತಿಂಗಳು ಕಾಯಿರಿ. ಜೆಡಿಎಸ್ ಪಕ್ಷದ ಬಾವುಟವನ್ನು ಹಾಸನ ತಾಲೂಕಿನಲ್ಲಿ ಹಾರಿಸಿಯೇ ಹಾರಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Amit Shah: ಮೋದಿ, ಯಡಿಯೂರಪ್ಪ ಮೇಲೆ ಭರವಸೆ ಇಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದ ಅಮಿತ್‌ ಶಾ; ಬಿಎಸ್‌ವೈ ಅನಿವಾರ್ಯವಾದರಾ?

ಯುವಕರಿಗೆ ತೊಂದರೆ ಕೊಡುತ್ತಿರುವ ಶಾಸಕರು ಎರಡು ದಿನದಲ್ಲಿ 120 ಜನರ ಮೇಲೆ 107 ಕೇಸ್ ದಾಖಲಿಸಿದ್ದಾರೆ. ನಮ್ಮ ನಾಯಕರನ್ನು ಗಡಿಪಾರು ಮಾಡಲು ಕೇಸ್ ದಾಖಲಿಸುತ್ತಿದ್ದಾರೆ. ನೋವು ತಿಂದರು ನಮ್ಮ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ಈ ಪಕ್ಷವನ್ನು ಗೆಲ್ಲಿಸಲು ಛಲ ತೊಟ್ಟಿದ್ದಾರೆ. ನಮ್ಮ ಪಕ್ಷದಲ್ಲಿ ಇರುವವರು ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ದುಡ್ಡು ಕೊಡ್ತಾರೆ ಅಂತ ಬರೋದಿಲ್ಲ, ಲೇಔಟ್ ಮಾಡ್ತಾರೆ ಅಂಥ ಫಿಕ್ಸ್ ಆಗೋದಿಲ್ಲ ಎಂದು ಹೇಳಿದರು.

ರೇವಣ್ಣ ಅಂದರಿಕಿ ಮಂಚಿವಾಡು

ಹಾಸನ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಆರು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಈ ಭಾರಿ ಚುನಾವಣೆಯಲ್ಲಿ ಏಳಕ್ಕೆ ಏಳನ್ನೂ ಗೆಲ್ಲಬೇಕು. ಅದಕ್ಕಾಗಿ ಇಂದಿನಿಂದ ಜೆಡಿಎಸ್ ಪ್ರಚಾರ ಆರಂಭಿಸಿದ್ದೇವೆ. ರೇವಣ್ಣ ಅವರು ಅಂದರಿಕಿ ಮಂಚಿವಾಡು (ಎಲ್ಲರಿಗೂ ಒಳ್ಳೆಯವರು) ಎಂದು ಭವಾನಿ ರೇವಣ್ಣ ಹೇಳಿದರು.

ಹೊಳೆನರಸೀಪುರದಿಂದ ರೇವಣ್ಣ ಬೆಂಗಳೂರಿಗೆ ಹೊರಟರೆ ಏನು ಕೆಲಸ ಮಾಡಿಸಿಕೊಂಡು ಬರಲು ಹೊರಟಿದ್ದಾರೆ. ಆ ಕಡೆಯಿಂದ ಬಂದರೆ ಕೆಲಸ ಮಾಡಿಸಿಕೊಂಡು ಬರುತ್ತಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. 2023ರಲ್ಲಿ ಸ್ವತಂತ್ರವಾಗಿ ನಮ್ಮ‌ ಪಕ್ಷ ಅಧಿಕಾರ ಬರಬೇಕು. ಕುಮಾರಣ್ಣ ಅವರು ಸಿಎಂ ಆಗಬೇಕು ಎಂದರೆ ನಾವೆಲ್ಲ ಶಕ್ತಿ ಕೊಡಬೇಕು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಿಲ್ಲದ ಸಂದರ್ಭದಲ್ಲಿ ನಮ್ಮ ಮನೆಗೆ ಬಂದು ಸಮಸ್ಯೆ ಹೇಳಿಕೊಂಡಿದ್ದಾರೆ. ಅವರೆಲ್ಲರಿಗೂ ಸ್ಪಂದಿಸಿದ್ದೇವೆ. ಈ ಬಾರಿ ಜೆಡಿಎಸ್‌ ಅನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು.

ಇದನ್ನೂ ಓದಿ: 7th Pay commission : ಮಾ. 1ರಿಂದ ಸರ್ಕಾರಿ ನೌಕರರ ಪ್ರತಿಭಟನೆ, ಮಾತುಕತೆ ಸಂದೇಶ ರವಾನಿಸಿದ ಸಿಎಂ ಬೊಮ್ಮಾಯಿ

ಹಾಸನಕ್ಕೆ ರೇವಣ್ಣ‌ ಇಲ್ಲವೇ ಭವಾನಿ ಅಭ್ಯರ್ಥಿ ಆಗಬೇಕು: ಕರೀಗೌಡ

ಹಾಸನ ಜಿಲ್ಲೆಯಲ್ಲಿ ರೇವಣ್ಣ‌, ಭವಾನಿ ರೇವಣ್ಣ ಸ್ಪರ್ಧೆ ಮಾಡಲೇಬೇಕು ಎಂದು ಇರಲಿಲ್ಲ. ಆದರೆ, ಇಲ್ಲಿನ ಶಾಸಕ ಪ್ರೀತಂಗೌಡ ಪಂಥಾಹ್ವಾನ ನೀಡಿದಾಗ ಬರಲೇಬೇಕಲ್ಲವೇ? ಯಕಶ್ಚಿತ್ ಒಬ್ಬ ಎಂಎಲ್‌ಎ ಸವಾಲು ಹಾಕುತ್ತಾನೆ. ಐವತ್ತು ಸಾವಿರ ಓಟಿನಿಂದ ಗೆಲ್ಲುತ್ತೇನೆ ಎಂದು ಹೇಳುವುದೆಂದರೆ ಏನ್ ತಮೇಷನಾ ಎಂದು ಪ್ರಶ್ನೆ ಮಾಡಿದ ಮಾಜಿ ಶಾಸಕ ಬಿ.ವಿ.ಕರೀಗೌಡ, ಹೀಗಾಗಿ ರೇವಣ್ಣ‌ ಇಲ್ಲವೇ ಭವಾನಿ ರೇವಣ್ಣ ಅವರೇ ಅಭ್ಯರ್ಥಿ ಆಗಬೇಕು. ಈ ಪಂಥಾಹ್ವಾನವನ್ನು ಸ್ವೀಕರಿಸಿ ಚುನಾವಣೆಗೆ ನಿಲ್ಲಬೇಕು. ಮೀನಮೇಷ ಎಣಿಸದೆ ಭವಾನಿ ಅವರೇ ಅಭ್ಯರ್ಥಿಯಾಗಬೇಕು ಎಂದು ಹೇಳಿದರು.

Exit mobile version