ರಾಯಚೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ರಾಯಚೂರಿನ ಅರಕೇರಾ ಗ್ರಾಮದಲ್ಲಿ ಶನಿವಾರ ವಾಸ್ತವ್ಯ ಹೂಡಿದ್ದರು. ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾದಲ್ಲಿ ಸಚಿವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಶನಿವಾರ ಬೆಳಗ್ಗೆಯಿಂದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಸಚಿವರು, ಸಂಜೆ ವೇಳೆ ಅಧಿಕಾರಿಗಳ ಜತೆ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಸರ್ಕಾರಿ ಕಚೇರಿಗಳಿಗೆ ಸುತ್ತಿ ಬೇಸತ್ತಿದ್ದ ಜನರು, ಸಚಿವರಿಗೆ ದೂರು ನೀಡಲು ಮುಗಿಬಿದ್ದರು. ಈ ವೇಳೆ ಜನರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಶೀಘ್ರದಲ್ಲೇ ಪರಿಹಾರ ಒದಗಿಸುವ ಭರವಸೆ ನೀಡಿದರು.
ಇದನ್ನೂ ಓದಿ | ಅಲ್ಪಸಂಖ್ಯಾತರ ಪರ ಕಾಂಗ್ರೆಸ್; ರೈತರು, ಬಡವರ ಪರ ಬಿಜೆಪಿ: ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್
ಸಂಜೆ ವೇಳೆ ಅರಕೇರಾ ಗ್ರಾಮದ ಹಿರೆಮಠ ಆವರಣದ ಕಟ್ಟೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ನಾನಾ ಸಮಸ್ಯೆಗಳನ್ನು ಸಚಿವರ ಮುಂದೆ ತೋಡಿಕೊಂಡರು. ಸ್ಮಶಾನ ಜಾಗ, ವಸತಿ ಸಮಸ್ಯೆಗಳನ್ನು ಬಗೆಹರಿಸಲು ಅಶೋಕ್ ಸೂಚಿಸಿದರು. ಬೆಳಗ್ಗೆಯಿಂದ ಫುಲ್ ಬ್ಯುಸಿ ಆಗಿದ್ದ ಸಚಿವರು ರಾತ್ರಿ ಸರ್ಕಾರಿ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಜತೆ ಹೆಸರು ಬೇಳೆ ಪಾಯಸ, ರೊಟ್ಟಿ, ಹೆಸರು ಕಾಳು, ಬದನೆಕಾಯಿ ಪಲ್ಯ, ಅನ್ನ, ಸಾಂಬಾರು ಸೇವಿಸಿ ನಿದ್ದೆಗೆ ಜಾರಿದರು. ಸಚಿವರಿಗೆ ಸ್ಥಳೀಯ ಶಾಸಕ ಶಿವನಗೌಡ ನಾಯ್ಕ್, ಸುರುಪುರ ಶಾಸಕ ರಾಜುಗೌಡ ಸೇರಿ ಜಿಲ್ಲಾಧಿಕಾರಿ ಸಾಥ್ ನೀಡಿದರು.
ಸಚಿವರ ಮುಂದೆ ಟೀಚರ್ ಲವ್ ರಿವೀಲ್
ಗ್ರಾಮ ವಾಸ್ತವ್ಯದಲ್ಲಿ ಸಚಿವ ಆರ್.ಅಶೋಕ್ ಅವರ ಮುಂದೆ ಸರ್ಕಾರಿ ಶಾಲೆ ಶಿಕ್ಷಕಿ ಮಂಜುಳಾ ಎಂಬುವವರು ತಮ್ಮ ಲವ್ ಸ್ಟೋರಿಯನ್ನು ಬಿಚ್ಚಿಟ್ಟರು. ಸರ್, ನಾನು ದಾವಣಗೆರೆ ಮೂಲದವರಾಗಿದ್ದು, ನೌಕರಿಗೆ ಬಂದು ಇದೇ ಊರಿನ ಹುಡುಗನ ಮದುವೆಯಾದೆ. ತಂದೆ, ತಾಯಿ ಕಳೆದುಕೊಂಡು ಅನಾಥೆಯಾಗಿದ್ದರಿಂದ ಊರಿನವರು ನನಗೆ ಮದುವೆ ಮಾಡಿಸಿದರು. ನಿಮನ್ನು ಹಾಗೂ ಶಾಸಕರನ್ನು ನೋಡಿ ಬಹಳ ಖುಷಿಯಾಗಿದೆ ಎಂದು ಸಚಿವರಿಗೆ ಶಿಕ್ಷಕಿ ಹೇಳಿದ್ದು ಕಂಡು ಬಂತು.
ಇದನ್ನೂ ಓದಿ | ಕಾನ್ಸ್‌ಟೆಬಲ್ ಹುದ್ದೆ ವಯೋಮಿತಿ ಹೆಚ್ಚಳಕ್ಕೆ ಆಗ್ರಹ; ಅರುಣ್ ಸಿಂಗ್ ಕಾರು ಅಡ್ಡಗಟ್ಟಿ ಪ್ರತಿಭಟನೆ