Site icon Vistara News

Revised Textbook | ಪರಿಷ್ಕೃತವಾಯ್ತು ಪಠ್ಯಪುಸ್ತಕ; ರಾಜ್ಯದ ಶಾಲೆಗಳಿಗೆ ಸರಬರಾಜು

School Books

ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿಷಯ ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಚಿಂತಕ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿಯ ಬಗ್ಗೆ ತೀವ್ರ ಆಕ್ಷೇಪಗಳೂ ಕೇಳಿಬಂದಿದ್ದವು. ಅಲ್ಲದೆ, ಪಠ್ಯ ಪರಿಷ್ಕರಣೆಯ ಕೂಗು ಎದ್ದಿತ್ತು. ಈಗ ಶಿಕ್ಷಣ ಇಲಾಖೆ ಲೋಪ ಸರಿಪಡಿಸಿಕೊಂಡು ಪರಿಷ್ಕೃತ ಪುಸ್ತಕವನ್ನು (Revised Textbook) ಶಾಲೆಗೆ ಕಳುಹಿಸಿಕೊಟ್ಟಿದೆ.

ಪರಿಷ್ಕೃತ ಪಠ್ಯದ ತಿದ್ದುಪಡಿಗಳೇನು?

– ಡಾ.ಬಿ.ಆರ್.ಅಂಬೇಡ್ಕರ್‌ ಅವರ ಹೆಸರಿನ ಹಿಂದೆ ಇದ್ದ ಸಂವಿಧಾನ ಶಿಲ್ಪಿ ಪದವನ್ನು ಮರು ಪರಿಷ್ಕೃತ ಪಠ್ಯದಲ್ಲಿ ಕೈಬಿಡಲಾಗಿತ್ತು. ಇದಕ್ಕೆ ಸಾರ್ವಜನಿಕರು, ಪ್ರಗತಿಪರರು, ದಲಿತ ಸಂಘಟನೆಗಳಿಂದ ಭಾರಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆ 9ನೇ ತರಗತಿಯ ಸಮಾಜ ವಿಜ್ಞಾನದ ‘ನಮ್ಮ ಸಂವಿಧಾನ’ ಪಾಠದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ.

– ಭಕ್ತಿಪಂಥ ಹಾಗೂ ಸೂಫಿ ಪರಂಪರೆ ಪಾಠವನ್ನು 7ನೇ ತರಗತಿಯ ಸಮಾಜ ವಿಜ್ಞಾನದಿಂದ ತೆಗೆಯಲಾಗಿತ್ತು. ಈ ಪಾಠವನ್ನು 2022-23ನೇ ಸಾಲಿನಿಂದಲೇ ಬೋಧಿಸಲು ಸೂಚಿಸಲಾಗಿದೆ. 6ನೇ ತರಗತಿಯ ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ ಪಾಠದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಮಠಗಳ ಪಟ್ಟಿಯಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಹೆಸರು ಬಿಟ್ಟು ಹೋಗಿತ್ತು. ತಿದ್ದುಪಡಿಯಲ್ಲಿ ಸಿದ್ಧಗಂಗಾ ಮಠದ ವಿವರ ಸೇರಿಸಲಾಗಿದೆ.

– ಮತ್ತೆ ಬಸವಣ್ಣಗೆ ವಿಶ್ವಗುರು ಸ್ಥಾನ 9ನೇ ತರಗತಿಯ ಭಾರತದ ಮತ ಪ್ರವರ್ತಕರು, ಪಾಠದಲ್ಲಿ ಬಸವೇಶ್ವರರಿಗೆ ಇದ್ದ ‘ವಿಶ್ವಗುರು’ ವಿಶೇಷಣವನ್ನು ಕೈಬಿಡಲಾಗಿತ್ತು. ಬ್ರಾಹ್ಮಣ ಪದ್ಧತಿ, ಜನಿವಾರ ತಿರಸ್ಕಾರ ಪದಗಳನ್ನು ಕೈಬಿಟ್ಟು, ಉಪನಯನದ ನಂತರ ಕೂಡಲ ಸಂಗಮಕ್ಕೆ ನಡೆದರು ಎಂದು ಪರಿಷ್ಕರಣೆ ಮಾಡಲಾಗಿತ್ತು. ಈಗ ಹಿಂದಿನಂತೆ ಮತ್ತೆ ಎಲ್ಲ ಅಂಶಗಳನ್ನೂ ಸೇರಿಸಲಾಗಿದೆ.

ಯಾವೆಲ್ಲ ತರಗತಿಯ ಪಠ್ಯ ಪರಿಷ್ಕರಣೆ ಆಗುತ್ತಿದೆ?

ತರಗತಿ- ಪರಿಷ್ಕರಣೆಯಾದ ಪಠ್ಯಪುಸ್ತಕ

1) 6ರಿಂದ 10ನೇ ತರಗತಿ – ಸಮಾಜ ವಿಜ್ಞಾನ ಎಲ್ಲ ಮಾಧ್ಯಮದಲ್ಲಿ

2) 1 ರಿಂದ 10ನೇ ತರಗತಿ- ಪ್ರಥಮ ಭಾಷೆ ಕನ್ನಡ (3ನೇ ತರಗತಿ ಹೊರತು ಪಡಿಸಿ)

3) 6,8,9ನೇ ತರಗತಿ- ಕನ್ನಡ ದ್ವಿತೀಯ ಭಾಷೆ

4) 7,8,9ನೇ ತರಗತಿ- ತೃತೀಯ ಭಾಷೆ ಎಲ್ಲ ಮಾಧ್ಯಮದಲ್ಲಿ

ಪಠ್ಯ ಹಿಂಪಡೆಯುವಂತೆ ಪತ್ರ ಚಳವಳಿ ಆರಂಭಿಸಿದ್ದ ಲೇಖಕರು

ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಸಾಲು ಸಾಲು ಸಾಹಿತಿಗಳು ಪಠ್ಯ ಹಿಂಪಡೆಯುವಂತೆ ಒತ್ತಾಯಿಸಿ ಪತ್ರ ಚಳವಳಿಯನ್ನು ಹಮ್ಮಿಕೊಂಡಿದ್ದರು. ಸಾಹಿತಿಗಳಾದ ದೇವನೂರು ಮಹದೇವ, ನಾಡೋಜ ಹಂಪ ನಾಗರಾಜಯ್ಯ, ರೂಪ ಹಾಸನ, ಮೂಡ್ನಾಕೂಡು ಚಿನ್ನಸ್ವಾಮಿ ಹಾಗೂ ಚಂದ್ರಶೇಖರ ತಾಳ್ಯ, ಬೊಳುವಾರು ಮಹಮದ್ ಕುಂಇ್, ಜಿ. ರಾಮಕೃಷ್ಣ ಸೇರಿದಂತೆ ಎಸ್‌.ಜಿ ಸಿದ್ದರಾಮಯ್ಯ, ಈರಪ್ಪ ಎಂ. ಕಂಬಳಿ, ಪ್ರೊ.‌ಮಧುಸೂದನ್ ತಮ್ಮ ಪುಸ್ತಕಗಳನ್ನು ಪಠ್ಯದಲ್ಲಿ ಬಳಸದಂತೆ ತಿಳಿಸಿದ್ದರು.

ಇದನ್ನೂ ಓದಿ | ಪಠ್ಯಪುಸ್ತಕ ವಿವಾದ: ಲಿಂಗಾಯತ, ಒಕ್ಕಲಿಗ ಆಯಿತು, ಈಗ ಕುರುಬ ಸಮುದಾಯದಿಂದಲೂ ಆಕ್ಷೇಪ

Exit mobile version