ಬೆಂಗಳೂರು: ಅನ್ನ ಭಾಗ್ಯ ಯೋಜನೆಯ (Anna Bhagya scheme) ಅಕ್ಕಿ ಪೂರೈಕೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಫೈಟ್ (Rice politics) ಜೋರಾಗಿದೆ. ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ (Siddaramaiah) ಅವರು ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರದ ಬಿಜೆಪಿ ಸರ್ಕಾರದ (Central government) ವಿರುದ್ಧ ಕೆಂಡ ಕಾಡುತ್ತಿದ್ದಾರೆ. ಇತ್ತ ಬಿಜೆಪಿ ಜುಲೈ 1ರಂದು 10 ಕೆಜಿ ಅಕ್ಕಿ ಕೊಡದೆ ಹೋದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಅಕ್ಕಿ ಪೂರೈಕೆ ವಿಚಾರದಲ್ಲಿ ಆಗಿರುವ ಬೆಳವಣಿಗೆಗಳ ವಿವರ ನೀಡಿದರು. ಕೇಂದ್ರ ಆಹಾರ ನಿಗಮದವರು (FCI) ಅಕ್ಕಿ ಕೊಡುವುದಾಗಿ ಒಪ್ಪಿದ ಬಳಿಕ ನಿಯಮಾವಳಿ ಬದವಲಾವಣೆ ಆಗಿದ್ದು ಹೇಗೆ? ಇದು ದ್ವೇಷ ರಾಜಕಾರಣ ಅಲ್ವಾ? ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬಡವರ ಮೇಲೆ ಏಕೆ ಸಿಟ್ಟು ಎಂದು ಪ್ರಶ್ನಿಸಿದರು.
ಹಲವು ರಾಜ್ಯ ಸರ್ಕಾರಗಳ ಜತೆ ಅಕ್ಕಿ ಪೂರೈಕೆ ಬಗ್ಗೆ ಚರ್ಚೆ ನಡೆಸಿದ್ದೇವೆ. ತೆಲಂಗಾಣ ಸರ್ಕಾರ ಆಗುವುದಿಲ್ಲ ಎಂದು ಹೇಳಿದೆ. ಆಂಧ್ರಪ್ರದೇಶದ ಜತೆ ಮಾತಾಡ್ತಿದೀವಿ, ಅವರು ಅಕ್ಕಿ ಸಪ್ಲೈ ಮಾಡುತ್ತೇವೆ ಅಂದಿದಾರೆ. ಛತ್ತೀಸ್‌ಗಡದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುತ್ತೇವೆ ಅಂದಿದಾರೆ ಎಂದು ವಿವರಿಸಿದರು.
ನಮ್ಮ ರಾಜ್ಯದಲ್ಲಿ ಅಕ್ಕಿ ಇದ್ದರೆ ಕೊಡಿಸಿ ಎಂದ ಸಿದ್ದರಾಮಯ್ಯ
ʻʻನಮ್ಮ ರಾಜ್ಯದಲ್ಲಿ ಅಕ್ಕಿ ಇಲ್ಲ, ಒಂದು ವೇಳೆ ಇದೆ ಅಂತ ಹೇಳೋದಾದ್ರೆ ನೀವೇ ಕೊಡಿಸಿ, ಅಥವಾ ಬಿಜೆಪಿಯವರು ಕೊಡಿಸಲಿʼʼ ಎಂದು ಸವಾಲು ಹಾಕಿದರು ಸಿದ್ದರಾಮಯ್ಯ.
ರಾಯಚೂರಿನಲ್ಲಿ ಸೋನಾ ಮಸೂರಿ ಇರೋದು, ಅದು ಒಂದು ಕೆಜಿಗೆ ಕೆಜಿಗೆ 55 ರೂ. ಅಷ್ಟು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದ ಸಿದ್ದರಾಮಯ್ಯ ಅವರು, ರಾಜ್ಯದ ರೈತರಿಂದ ಅಕ್ಕಿ ಖರೀದಿಸುವುದಿಲ್ಲ ಎಂದು ಸುಳಿವು ನೀಡಿದರು.
ಅಕ್ಕಿ ಬದಲು ಅದಕ್ಕೆ ತಗಲುವ ಹಣ ಕೊಡಬಹುದು ಎಂಬ ಬಿಜೆಪಿ ನಾಯಕರಾದ ಸಿ.ಟಿ. ರವಿ, ತೇಜಸ್ವಿ ಸೂರ್ಯ ಅವರ ಸಲಹೆಗೆ ಗರಂ ಆದ ಸಿಎಂ ಸಿದ್ದರಾಮಯ್ಯ ಅವರು, ʻʻಅಕ್ಕಿ ಕೊಡೋದು ಅನ್ನ ತಿನ್ನಿ ಅಂತಾ, ಆದರೆ ದುಡ್ಡು ತಿನ್ನಲಿ ಅಂತನಾ..?. ಬಿಜೆಪಿಯವರು ಇದನ್ನೆಲ್ಲ ಮಾತಾಡೋದು ಬಿಟ್ಟು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಅಕ್ಕಿ ಕೊಡಿಸಲಿ. ಬಡವರ ಬಗ್ಗೆ ನಿಜವಾಗಿಯೂ ಅವರಿಗೆ ಕಾಳಜಿ ಇದ್ರೆ ಅಕ್ಕಿ ಕೊಡಿಸಲಿʼʼ ಎಂದು ಹೇಳಿದರು.
ಪ್ರಧಾನಿ ಭೇಟಿ ಮಾಡುತ್ತೀರಾ?
ಪ್ರಧಾನಿ ಭೇಟಿ ಮಾಡುವ ವಿಚಾರದ ಬಗ್ಗೆ ಕೇಳಿದಾಗ, ಅವರು ದೆಹಲಿಯಲ್ಲಿ ಇಲ್ಲ. ನಾವು ಜೂನ್ 20ಕ್ಕೆ ದೆಹಲಿಗೆ ಹೋಗ್ತಿದ್ದೇವೆ. ಇನ್ನೊಂದು ಸಾರಿ ಅವರು ಬಂದಾಗ ಭೇಟಿ ಮಾಡುತ್ತೇವೆ ಎಂದರು ಸಿಎಂ ಸಿದ್ದರಾಮಯ್ಯ.
ಅಕ್ಕಿ ಕೊಡದೆ ಹೋದರೆ ಜುಲೈನಲ್ಲಿ ಪ್ರತಿಭಟನೆ
ʻʻಅಕ್ಕಿ ವಿಷಯವಾಗಿ ಕಾಂಗ್ರೆಸ್ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಇದೀಗ ಅಕ್ಕಿ ಬರಲ್ಲ ಅಂತ ಕುಂಟು ನೆಪ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ ಗ್ಯಾರಂಟಿಯಿಂದ ಹಿಂದೆ ಹೋದಂತೆ ಅರ್ಥ. ಇದೀಗ ಛತ್ತೀಸಗಡದಿಂದ ಅಕ್ಕಿ ತರುತ್ತೇವೆ ಎನ್ನುತ್ತಿದ್ದಾರೆ. ನಮಗೆ ಬಡ ಜನರಿಗೆ ಒಳ್ಳೆಯದಾದರೆ ಸಾಕುʼʼ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಅಕ್ಕಿಯನ್ನು ಎಲ್ಲಿಂದ ತೆಗೆದುಕೊಳ್ಳಬೇಕು, ಹೇಗೆ ತೆಗೆದುಕೊಳ್ಳಬೇಕು ಎನ್ನುವ ಪ್ರಶ್ನೆ ಇದೆ. ರಾಜ್ಯದ ರೈತರು ಅಕ್ಕಿ ಕೊಡುವುದಕ್ಕೆ ಮುಂದೆ ಬಂದರೆ ಅದನ್ನು ಖರೀದಿ ಮಾಡಬೇಕು. ಬಿಜೆಪಿಯವರೇ ಕೊಡಸಿ ಎನ್ನುವುದು ಸರಿಯಲ್ಲ. ಒಂದು ವೇಳೆ ಒಂದನೇ ತಾರೀಖಿಗೆ ಅಕ್ಕಿ ಕೊಡದೆ ಹೋದರೆ, ನಾವು ಪ್ರತಿಭಟನೆ ಮಾಡುತ್ತೇವೆ ಎಂದರು.
ಇದನ್ನೂ ಓದಿ : Congress Politics : ಕಾಂಗ್ರೆಸ್‌ನಲ್ಲಿ ಮತ್ತೆ ಕುರ್ಚಿ ಕಿತ್ತಾಟ; ಸಿದ್ದು ಪರ ಆಪ್ತರ ವಾದ, ಡಿಕೆಶಿ ಟೀಮ್ ಗರಂ