Site icon Vistara News

Rice Politics: ಅಕ್ಕಿ ರಾಜಕೀಯ ತೀವ್ರ; ನಾಳೆ ಕೇಂದ್ರದ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

Rice politcis

#image_title

ಬೆಂಗಳೂರು: ಕೇಂದ್ರದ ಬಿಜೆಪಿ (Central BJP Government) ಮತ್ತು ರಾಜ್ಯದ ಕಾಂಗ್ರೆಸ್‌ ಸರ್ಕಾರಗಳ (State Government) ನಡುವೆ ಅಕ್ಕಿ ರಾಜಕೀಯ (Rice politics) ತೀವ್ರಗೊಂಡಿದ್ದು, ಇದೀಗ ಪ್ರತಿಭಟನೆಯ ಸ್ವರೂಪಕ್ಕೆ ತಿರುಗಿದೆ. ದುಡ್ಡುಕೊಟ್ಟರೂ ಅಕ್ಕಿ ಕೊಡಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜೂನ್‌ 20ರಂದು ಬೃಹತ್‌ ಪ್ರತಿಭಟನೆಯನ್ನು (Protest tomorrow) ಕಾಂಗ್ರೆಸ್‌ ಹಮ್ಮಿಕೊಂಡಿದೆ.

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲು ಮುಂದಾಗಿದ್ದು, ಇದಕ್ಕೆ ಬೇಕಾಗಿರುವ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಕೇಂದ್ರದಿಂದಲೇ ಪಡೆಯಲು ನಿರ್ಧರಿಸಲಾಗಿತ್ತು. ಆದರೆ, ಆಹಾರ ನಿಗಮವು ಮೊದಲು ಅಕ್ಕಿ ನೀಡಲು ಒಪ್ಪಿಕೊಂಡಿದ್ದರೂ ಕೇಂದ್ರ ಸರ್ಕಾರ ತನ್ನ ನೀತಿಯನ್ನೇ ಬದಲಿಸಿ ರಾಜ್ಯ ಸರ್ಕಾರಗಳಿಗೆ ಅಕ್ಕಿ ನಿರಾಕರಣೆ ಮಾಡಿದ್ದು ರಾಜ್ಯದ ಜನತೆಗೆ ಮಾಡಿದ ದ್ರೋಹ ಎನ್ನುವುದು ಕಾಂಗ್ರೆಸ್‌ ನಾಯಕರ ಆರೋಪ. ಇದನ್ನೇ ಮುಂದಿಟ್ಟುಕೊಂಡು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಅದು ಮುಂದಾಗಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ

ಪ್ರತಿಭಟನೆಯ ಭಾಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಬೃಹತ್ ಹೋರಾಟ ಸಂಘಟಿಸಲಾಗಿದೆ. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಬೆಂಗಳೂರಿನ ಶಾಸಕರು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

ಮಂಗಳೂರಿನಲ್ಲಿ ವಿಶಿಷ್ಟ ಪ್ರತಿಭಟನೆ

ಈ ನಡುವೆ, ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಕಾಂಗ್ರೆಸ್‌ ನಾಯಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾರಥ್ಯದಲ್ಲಿ ಪ್ರತಿಭಟನೆಗಳು ನಡೆಯಲಿವೆ. ಅದಕ್ಕಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಉಸ್ತುವಾರಿ ಸಚಿವರಲ್ಲಿ ಕೆಲವರು ಜಿಲ್ಲೆಯಲ್ಲೇ ಬೀಡುಬಿಟ್ಟು ಪ್ರತಿಭಟನೆಗೆ ಸಿದ್ದತೆ ಮಾಡುತ್ತಿದ್ದಾರೆ.

ಮಂಗಳೂರಿನಲ್ಲಿ ಕೇಂದ್ರದ ವಿರುದ್ಧ ವಿಭಿನ್ನ ಶೈಲಿಯ ಪ್ರತಿಭಟನೆಗೆ ಮಾಜಿ ಸಚಿವ ರಮಾನಾಥ್ ರೈ ಅವರು ಮುಂದಾಗಿದ್ದಾರೆ. ಅನ್ನದ ಬಟ್ಟಲು ತಟ್ಟಿ ಪ್ರತಿಭಟನೆ ನಡೆಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ʻʻಈ ಹಿಂದೆ ನಾನು ಅಧಿಕಾರದಲ್ಲಿದ್ದಾಗ ಮಕ್ಕಳಿಗೆ ಕೊಡುವ ಅನ್ನ ನಿಲ್ಲಿಸಿದ್ದೇನೆಂದು ನನ್ನ ವಿರುದ್ಧ ಅನ್ನದ ಬಟ್ಟಲು ತಟ್ಟಿ ಪ್ರತಿಭಟಿಸಿದರು. ಅಂದು ನಾವು ಮಕ್ಕಳಿಗೆ ಕೊಡುವ ಅನ್ನವನ್ನ ನಿಲ್ಲಿಸಿರಲಿಲ್ಲ. ದೇವಸ್ಥಾನದ ಹಣ ದುರುಪಯೋಗ ಆಗಬಾರದೆಂದು ತಡೆದಿದ್ದೆವು. ನಾನು ಕೊಲ್ಲೂರು ದೇವಸ್ಥಾನದಿಂದ ಬರುತ್ತಿದ್ದ ಒಂದು ಹಿಡಿ ಅಕ್ಕಿಯನ್ನು ನಿಲ್ಲಿಸಿರಲಿಲ್ಲ. ಆದರೂ ನನ್ನ ವಿರುದ್ಧ ಪ್ರತಿಭಟನೆ ಮಾಡಿದರು. ಈಗ ನಮ್ಮ ಸರಕಾರದ ಅನ್ನ ಭಾಗ್ಯ ಯೋಜನೆಗೆ ವಿರೋಧ ಮಾಡಲಾಗಿದೆ. ಕೇಂದ್ರ ಸರಕಾರ ಈ ಯೋಜನೆಯನ್ನ ತಡೆದು ಬಡವರಿಗೆ ದ್ರೋಹ ಮಾಡುತ್ತಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದುʼʼ ಎಂದು ರಮಾನಾಥ ರೈ ಹೇಳಿದರು.

ಪ್ರತಿಭಟನೆಗೆ ಬಿಜೆಪಿಯಿಂದಲೂ ಬೆಂಬಲ

ಈ ನಡುವೆ, ರಾಜ್ಯ ಬಿಜೆಪಿ ಕಾಂಗ್ರೆಸ್‌ ಪ್ರತಿಭಟನೆಗೆ ತನ್ನ ಬೆಂಬಲವೂ ಇದೆ ಎಂದು ಲೇವಡಿ ಮಾಡಿದೆ.
ʻʻಕಾಂಗ್ರೆಸ್ ನ ಪ್ರತಿಭಟನೆಯಲ್ಲಿ ದಯವಿಟ್ಟು ಪಾಲ್ಗೊಳ್ಳಿʼʼ ಎಂದು ಟದವೀಟ್‌ ಮಾಡುವ ಮೂಲಕ ಕಾಂಗ್ರೆಸ್ ನ ಪ್ರತಿಭಟನೆಗೆ ಬಿಜೆಪಿ ಕೌಂಟರ್ ಮಾಡಿದೆ.

ʻʻಅನ್ನಭಾಗ್ಯಕ್ಕೆ ಅಕ್ಕಿ ಕೊಂಡುಕೊಳ್ಳಲೂ ಆಗದ, ಅಕ್ಕಿ ಕೊಡಲೂ ಆಗದ “ರಾಜ್ಯ ಕಾಂಗ್ರೆಸ್ ಸರ್ಕಾರದ” ವಿರುದ್ಧ ರಾಜ್ಯ ಕಾಂಗ್ರೆಸ್‌ನಿಂದ ನಾಳೆ ಜೂನ್ 20ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನೆ ದಯವಿಟ್ಟು ಪಾಲ್ಗೊಳ್ಳಿʼʼ ಎಂದು ಟ್ವಿಟರ್ ನಲ್ಲಿ ಲೇವಡಿ ಮಾಡಿದೆ ಬಿಜೆಪಿ.

ಇದನ್ನೂ ಓದಿ : Rice Politics : ಬಡವರ ಮೇಲೇಕೆ ಸಿಟ್ಟು; ಕೇಂದ್ರ ವಿರುದ್ಧ ಸಿದ್ದರಾಮಯ್ಯ ಗರಂ, ಅಕ್ಕಿ ಕೊಡದಿದ್ರೆ ಪ್ರತಿಭಟನೆ ಎಂದ ಬಿಜೆಪಿ

Exit mobile version