ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಕ್ಕಿ ರಾಜಕೀಯ (Rice Politics) ತಾರಕಕ್ಕೇರಿದೆ. ಎರಡೂ ಪಕ್ಷಗಳು ಮಂಗಳವಾರ ಪ್ರತಿಭಟನೆ ನಡೆಸುವುದರ ಜತೆಗೆ ವಾಗ್ಯುದ್ಧಕ್ಕೂ ಮುಂದಾಗಿವೆ. ಈ ನಡುವೆ ಕೆಲವು ನಾಯಕರು ಅಸಾಂವಿಧಾನಿಕ ಮಾತುಗಳ ಮೂಲಕ ಗಮನ ಸೆಳೆದಿದ್ದಾರೆ.
ʻʻಪ್ಯಾಂಟ್, ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡ್ತೀನಿ ಅಂತಾನೆ ಸ್ಕೌಂಡ್ರಲ್ ಅಶೋಕʼʼ ಎಂದು ಮೈಸೂರಿನಲ್ಲಿ ನಡೆದ ಪ್ರತಿಭಟನೆ (Protest at Mysore) ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್ (BJ Vijayakumar) ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಈ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ.
ಮಾಜಿ ಸಚಿವ ಆರ್.ಅಶೋಕ್ (R Ashok) ವಿರುದ್ಧ ಅವಾಚ್ಯ ಶಬ್ದ ಬಳಸಿದ ವಿಜಯಕುಮಾರ್ ಅವರು, ʻʻಒಂದು ಗ್ರಾಂ ಅಕ್ಕಿ ಕಡಿಮೆಯಾದರೂ ಶರ್ಟ್ ಪ್ಯಾಂಟ್ ಬಿಚ್ಚಿ ಪ್ರೋಟೆಸ್ಟ್ ಮಾಡ್ತೀನಿ ಅಂತಾರೆʼʼ ಎಂದು ಹೇಳುತ್ತಾ, ಅಶೋಕ್ ಅವರನ್ನು ನಿಂದಿಸುವ ಭರದಲ್ಲಿ ಸ್ಕೌಂಡ್ರಲ್ ಎಂದು ನಾಲಿಗೆ ಹರಿಬಿಟ್ಟರು.
ʻʻಕಾಂಗ್ರೆಸ್ ಸರ್ಕಾರ ಬರಲಿ ಎಂದು ಹಗಲು ರಾತ್ರಿ ಕೈಯಲ್ಲಿ ದುಡ್ ಹಾಕಿ, ಹೊಡೆದಾಡಿ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದೀವಿ. ಈ ಪ್ರತಿಭಟನೆಯನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಿʼʼ ಎಂದು ಹೇಳಿದ ಅವರು, ʻʻಸಿಎಂ ಅವರಿಗೆ ಮನೆಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲʼʼ ಎಂದರು.
ʻʻಸಿದ್ದರಾಮಯ್ಯ ಅವರನ್ನು ನೀವು ನೋಡಿದ್ದೀರಾ? ಸಿಎಂಗೆ ಬಹಳ ಹಿಂಸೆಯಾಗುತ್ತಿದೆ. ಹೊರಗೆ ಹೋದ್ರೆ ಉತ್ತರ ಕೊಡಬೇಕು. ಒಳಗೆ ಪ್ಲ್ಯಾನ್ ಮಾಡಬೇಕು. ದಿನ 22- 23 ಗಂಟೆ ಮೀಟಿಂಗ್ ಮೇಲೆ ಮೀಟಿಂಗ್ ಮಾಡುವ ಪರಿಸ್ಥಿತಿ ಬಂದಿದೆ. ನೀವೆಲ್ಲ ಅರ್ಥ ಮಾಡಿಕೊಳ್ಳಬೇಕುʼʼ ಎಂದು ಡಾ. ಬಿ.ಜೆ. ವಿಜಯ ಕುಮಾರ್ ಹೇಳಿದರು.
ಮಂತ್ರಿಗಳು ಪ್ರತಿಭಟನೆ ನಡೆಸುವಂತಿಲ್ಲ ಎಂದ ಶಾಸಕ ಶ್ರೀವತ್ಸ
ಈ ನಡುವೆ ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯಿಂದಲೂ ಪ್ರತಿಭಟನೆ ನಡೆದಿದೆ. ಪ್ರತಿಭಟನೆ ವೇಳೆ ಮಾತನಾಡಿದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ, ʻʻ ಸಿಎಂ, ಸಚಿವರು ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅವರೇ ಬೀದಿಯಲ್ಲಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದು ಸಂವಿಧಾನ ವಿರೋಧಿ ನಡೆʼʼ ಎಂದರು.
ʻʻಕಾಂಗ್ರೆಸ್‌ನವರು ಕೇಂದ್ರ ಸರ್ಕಾರವನ್ನು ಕೇಳಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿಲ್ಲ. ಈಗ ಅಕ್ಕಿ ಕೊಡಲ್ಲ ಅಂತ ಪ್ರತಿಭಟನೆ ಮಾಡಿದರೆ ಏನು ಅರ್ಥ ? ಮುಂದೆ ಬರ ಬಂದು ವಿದ್ಯುತ್‌ಗೆ ತೊಂದರೆಯಾದರೆ ಆಗಲೂ ಕೇಂದ್ರ ಸರ್ಕಾರದ ವಿರುದ್ಧ ದೂಷಣೆ ಮಾಡುತ್ತಾರ ? ಯಾವುದೇ ಮುಂಜಾಗ್ರತಾ ವಹಿಸದೆ ಗ್ಯಾರಂಟಿ ಯೋಜನೆ ಜಾರಿ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ.ʼʼ ಎಂದು ಶ್ರೀವತ್ಸ ಹೇಳಿದರು.
ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನೆ ವೇಳೆ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : Rice Politics : ಡಿಕೆಶಿ ಮಾಟಮಂತ್ರ ಎಕ್ಸ್‌ಪರ್ಟ್, ಮಂತ್ರದಿಂದ ಅಕ್ಕಿ ತರಿಸಲಿ ಅಂದ ಆರ್ ಅಶೋಕ್