ಬೆಂಗಳೂರು: ರಾಜ್ಯ ಸರ್ಕಾರ (karnataka Government) ಅನ್ನ ಭಾಗ್ಯ ಯೋಜನೆಯಡಿ (Anna Bhagya scheme) ವಿತರಿಸಲು ಬೇಕಾದ ಅಕ್ಕಿಗಾಗಿ (Rice politics) ತೀವ್ರ ಹುಡುಕಾಟ ನಡೆಸುತ್ತಿದೆ. ಆದರೆ, ಇನ್ನೂ ಅದು ಸಿಕ್ಕಿಲ್ಲ. ಹೀಗಾಗಿ ಜುಲೈ ತಿಂಗಳಲ್ಲಿ ಪಡಿತರ ವ್ಯವಸ್ಥೆ ಮೂಲಕ ಹೆಚ್ಚುವರಿ ಐದು ಕೆಜಿ ಸಿಗುವ ಸಾಧ್ಯತೆಯಂತೂ ಇಲ್ಲವೇ ಇಲ್ಲ.
ಅಕ್ಕಿ ಹುಡುಕಾಟದ ಭಾಗವಾಗಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಮಹತ್ವದ ಸಭೆಯೊಂದನ್ನು ನಡೆಸಲಾಯಿತು. ಕೇಂದ್ರ ಮೂರು ಸಾಂಸ್ಥಿಕ ಸಂಸ್ಥೆಗಳಿಂದ ಬಂದಿರುವ ಕೊಟೇಷನ್‌ಗಳ ಪರಿಶೀಲನೆಯನ್ನು ಈ ಸಭೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಈ ಸಂಸ್ಥೆಗಳಿಗೆ ಕೆಲವು ಸಲಹೆಗಳನ್ನು ನೀಡಿ ಅವುಗಳಿಂದ ಸಿಗಬಹುದಾದ ಅಕ್ಕಿ, ಅಂತಿಮ ದರದ ಮಾಹಿತಿಯನ್ನು ಪಡೆಯಲು ನಿರ್ಧರಿಸಲಾಯಿತು. ಈ ಮಾಹಿತಿ ಸಿಗುವಾಗ ಒಂದು ವಾರ ಕಳೆಯಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಪ್ರಕ್ರಿಯೆ ಸದ್ಯಕ್ಕೆ ಮುಗಿಯುವ ಸಾಧ್ಯತೆ ಕಾಣಿಸುತ್ತಿಲ್ಲ.
ಕೇಂದ್ರದ ಮೂರು ಆಹಾರ ದಾಸ್ತಾನು ಸಂಸ್ಥೆಗಳಾದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್), ರಾಷ್ಟ್ರೀಯ ಕೃಷಿ ಸಹಕಾರ ಮಾರ್ಕೆಟಿಂಗ್ ಫೆಡರೇಷನ್ (ನಾಫೆಡ್) ಮತ್ತು ಕೇಂದ್ರ ಭಂಡಾರಗಳಿಂದ ಕೋಟೆಷನ್ ಕೇಳಲಾಗಿತ್ತು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ (KH Muniyappa), ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಇಲಾಖೆಯ ಹಿರಿಯ ಅಧಿಕಾರಿಗಳು ಭಾರಿಯಾದ ಸಭೆಯಲ್ಲಿ ಆ ಏಜೆನ್ಸಿ ಗಳು ಕಳುಹಿಸಿರುವ ಕೊಟೇಷನ್ ಬಗ್ಗೆ ಚರ್ಚೆ ನಡೆಯಿತು.
ರಾಜ್ಯ ಸರ್ಕಾರದ ಬೇಡಿಕೆಗೆ ತಕ್ಕಂತೆ ದರ ಇದೆಯಾ? ಅಕ್ಕಿಯ ಪ್ರಮಾಣವೆಷ್ಟು, ಪೂರೈಕೆಯ ಅವಧಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರು, ತಕ್ಷಣ ಟೆಂಡರ್ ಪ್ರಕ್ರಿಯೆ ಮಾಡಿ ಅಕ್ಕಿ ಸರಬಾರಜು ಮಾಡುವ ತೀರ್ಮಾನ ಮಾಡಬೇಕು ಎಂದು ಹೇಳಿದ್ದೇವೆ. ದರ ನಿಗದಿ ಮಾಡುವುದು ಅವರಿಗೆ ಬಿಟ್ಟಿದ್ದು. ಒಂದು ವಾರದಲ್ಲಿ ಅವರು ತೀರ್ಮಾನ ತಿಳಿಸುತ್ತಾರೆʼʼ ಎಂದು ಹೇಳಿದರು. ಅವರು ಟ್ರೇಡರ್ಸ್ ಜೊತೆ, ಮಿಲ್ಲರ್ಸ್ ಜೊತೆ ಮಾತನಾಡಿ ತೀರ್ಮಾನ ತಿಳಿಸುತ್ತಾರೆ ಎಂದರು.
ಇದನ್ನೂ ಓದಿ: BS Yediyurappa: ಅಧಿವೇಶನದ ಉದ್ದಕ್ಕೂ ವಿಧಾನಸೌಧದ ಹೊರಗೆ ಬಿಎಸ್‌ವೈ ಧರಣಿ; ಸರ್ಕಾರದ ವಿರುದ್ಧ ಗುಡುಗು
ಈಗ ಬೇಕಿರುವುದು ಮೂರು ಕೆಜಿ ಅಕ್ಕಿ
ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಪ್ರಕಟಿಸಿದ್ದರೂ ಸದ್ಯ ಮೂರು ಕೇಜಿ ಅಕ್ಕಿ ಮತ್ತು ಎರಡು ಕೇಜಿ ಧಾನ್ಯವನ್ನು ನೀಡಲು ನಿರ್ಧರಿಸಿದೆ. ಉತ್ತರ ಕರ್ನಾಟಕದಲ್ಲಿ ಎರಡು ಕೆಜಿ ಜೋಳ ಮತ್ತು ದಕ್ಷಿಣ ಕರ್ನಾಟಕದಲ್ಲಿ ರಾಗಿ ನೀಡಲಾಗುವುದು ಎಂದು ಕೆ.ಎಚ್. ಮುನಿಯಪ್ಪ ಶನಿವಾರ ಮುಂಜಾನೆ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಕೂಡಾ ಮೂರು ಕೆಜಿ ಅಕ್ಕಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಬೇರೆ ರಾಜ್ಯಗಳು, ಕೇಂದ್ರದ ಏಜೆನ್ಸಿಗಳಿಂದ ಖರೀದಿಗೆ ವ್ಯವಸ್ಥೆ ಮಾಡಿದ್ದೇವೆ. ಕೆಲವು ದಿನ ತಡವಾಗಬಹುದು. ಆದರೆ, ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಶನಿವಾರ ಮುಂಜಾನೆ ಹೇಳಿದರು.
ಕೇಂದ್ರ ಸರ್ಕಾರ ರಾಜಕೀಯ ದ್ವೇಷ ಸಾಧಿಸುತ್ತಿದೆ. ಅಕ್ಕಿ ನೀಡದೆ ದ್ರೋಹ ಮಾಡಿದೆ. ಅದು ಖಾಸಗಿಯವರಿಗೆ ಕೊಡುತ್ತದೆಯಂತೆ, ನಾವು ಹಣ ಕೊಟ್ಟರೂ ಕೊಡುವುದಿಲ್ಲವಂತೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.